ವಿಜಯಪುರ: ಮೂರುವರೆ ವರ್ಷದ ಹಿಂದೆ ಸರ್ಕಾರಿ ಜಮೀನಿನಲ್ಲಿ ಬೆಳೆದಿದ್ದ ಶ್ರೀಗಂಧ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರಿಗೆ ಜಿಲ್ಲಾ ಪ್ರಧಾನ ನ್ಯಾಯಾಲಯ ಇಬ್ಬರಿಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ ತಲಾ ಒಂದು ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.
2019 ಆಕ್ಟೋಬರ್ 21 ರಂದು ಪೊಲೀಸ್ ಠಾಣೆ ವ್ಯಾಪ್ತಿಯ ನಾಗರಹಳ್ಳಿ ಗ್ರಾಮದ ಸೀಮೆಯಲ್ಲಿರುವ ಮಲ್ಲಣ್ಣ ಸಿದ್ದಣ್ಣ ಬಾಗೇವಾಡಿ ಎಂಬವರ ಜಮೀನಿಗೆ ಹೊಂದಿಕೊಂಡಿರುವ ಸರ್ಕಾರಿ ಹಳ್ಳದಲ್ಲಿ ಬೆಳೆದಿದ್ದ ಶ್ರೀಗಂಧ ಮರಗಳ ಕಳ್ಳತನ ಆಗಿತ್ತು. ಈ ಕುರಿತು ಆಲಮೇಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಆರಂಭಿಸಿ ಆರೋಪಿಗಳಾದ ಕಲಬುರ್ಗಿ ಜಿಲ್ಲೆಯ ಆಫಜಲಪುರ ತಾಲೂಕಿನ ಕರ್ಜಗಿ ಗ್ರಾಮದ ದಸ್ತಗೀರ ಜಾಫರಸಾಬ್ ಚಂದನ್ ಹಾಗೂ ಜಿಲ್ಲೆಯ ಇಂಡಿ ತಾಲೂಕಿನ ಶಾಲೋಟಗಿ ಗ್ರಾಮದ ಹಾಜಿಮಲಂಗ ಮೆಹಬೂಬ್ ವಾಲಿಕಾರ ಎಂಬ ಇಬ್ಬರನ್ನು ಬಂಧಿಸಿದ್ದರು.
ಕಳ್ಳತನ ಮಾಡಿದ್ದ ಶ್ರೀಗಂಧದ ಮರವನ್ನು 11 ತುಂಡುಗಳಾಗಿ ಕತ್ತರಿಸಿ ಬೈಕ್ ಮೇಲೆ ಸಾಗಿಸುವಾಗ ಆಲಮೇಲ್ ಪಿಎಸ್‍ಐ ನಿಂಗಪ್ಪ ಪೂಜಾರಿ ಇವರ ಕೈಗೆ ಸಿಕ್ಕಿಕೊಂಡಿದ್ದರು. ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಬಳಿಕ ನಡೆದ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದೆ.
ಪರಿಣಾಮ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಿವಾಜಿ ನಾಲವಾಡೆ ಇವರು ಇಬ್ಬರೂ ಆರೋಪಿಗಳಿಗೆ ಐದು ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕರಾದ ಎಸ್.ಎಚ್.ಹಕೀಮ್ ವಾದ ಮಂಡಿಸಿದ್ದರು.