ವಿಜಯಪುರ: ನಗರದಲ್ಲಿ ಬುಧವಾರ ರಾತ್ರಿ ಗುಂಡಿನ ಸದ್ದು ಕೇಳಿ ಬಂದಿದೆ. ಗುಂಪು ಘರ್ಷಣೆಯಲ್ಲಿ ಹಾರಿಸಿದ ಗುಂಡಿಗೆ ಓರ್ವ ಯುವಕ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ವಿಜಯಪುರ ನಗರದ ಜಿಲ್ಲಾ ಪಂಚಾಯತಿ ಕಚೇರಿ ಹತ್ತಿರದ ಸ್ಮಶಾನದ ಬಳಿ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಗುಂಪುಗಳ ಮಧ್ಯೆ ಜಗಳ ಆರಂಭವಾಗಿದೆ. ಈ ಸಂದರ್ಭದಲ್ಲಿ ಒಂದು ಗುಂಪಿನಲ್ಲಿದ್ದ ವ್ಯಕ್ತಿ ಗುಂಡು ಹಾರಿಸಿದ್ದಾನೆ. ಇದರಿಂದ ಓರ್ವ ವ್ಯಕ್ತಿಗೆ ಗುಂಡು ತಾಗಿ ಗಾಯಗೊಂಡಿದ್ದಾನೆ.
ಗುಂಡಿನ ದಾಳಿಯಲ್ಲಿ ಗಾಯಗೊಂಡ ಯುವಕನನ್ನು ಬಾರಾಕೊಟ್ರಿ ತಾಂಡಾದ ಪದ್ದು ರಾಠೋಡ ಎಂದು ಗುರುತಿಸಲಾಗಿದೆ. ಕೂಡಲೇ ಪದ್ದುನನ್ನು ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪದ್ದು ರಾಠೋಡ ಹಾಗೂ ಎದುರಾಳಿ ಗುಂಪಿನ ಮಧ್ಯೆ ಸಣ್ಣದಾಗಿ ಆರಂಭಗೊಂಡ ಜಗಳ ಅತಿರೇಕಕ್ಕೆ ತಿರುಗಿದೆ. ಪರಿಸ್ಥಿತಿ ಗಂಭೀರಗುತ್ತಲೇ ಓರ್ವ ವ್ಯಕ್ತಿ ಗುಂಡು ಹಾರಿಸಿದ್ದಾನೆ. ಆದರೆ ಗುಂಡು ಹಾರಿಸಿದ ವ್ಯಕ್ತಿ ಯಾರು ಎಂಬುದು ತಕ್ಷಣಕ್ಕೆ ಲಭ್ಯವಾಗಿಲ್ಲ.
ಗುಂಡಿನ ದಾಳಿಯ ಸುದ್ದಿ ತಿಳಿಯುತ್ತಲೇ ಎಸ್ಪಿ ಅನುಪಮ ಅಗ್ರವಾಲ, ಎಎಸ್ಪಿ ರಾಮ ಅರಸಿದ್ದಿ ಸೇರಿದಂತೆ ಪೊಲೀಸ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಲನಗರ ಠಾಣೆ ಪೊಲೀಸರು ಘಟನಾ ಸ್ಥಳದಲ್ಲಿ ಸೂಕ್ತ ಸಾಕ್ಷಿ, ದಾಖಲೆಗಳ ಸಂಗ್ರಹದಲ್ಲಿ ತೊಡಗಿದ್ದಾರೆ.