Advertisement

ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದರೆ ಕ್ರಮ

05:21 PM May 23, 2020 | Naveen |

ವಿಜಯಪುರ: ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಪ್ರಾರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದ ನಂತರ ಜಿಲ್ಲೆಯ ರೈತರು ಬಿತ್ತನೆ ಪೂರ್ವ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದೆ. ಈ ಸಂದರ್ಭದಲ್ಲಿ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ರೈತರಿಗೆ ಮೋಸ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಎಚ್ಚರಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಈ ಎಚ್ಚರಿಕೆ ನೀಡಿದ ಅವರು, ಕೃಷಿ ಪರಿಕರ ಮಾರಾಟಗಾರರು ಕಡ್ಡಾಯವಾಗಿ ಪರವಾನಗಿ ಹೊಂದಿದ್ದು, ನವೀಕರಿಸರಬೇಕು. ನಾಮಫಲಕ, ದರಪಟ್ಟಿ, ದಾಸ್ತಾನು ಹಾಗೂ ಬಿಲ್‌ ಬುಕ್‌ಗಳನ್ನು ನಿರ್ವಹಿಸಬೇಕು. ಕಡ್ಡಾಯವಾಗಿ ಪಿಒಎಸ್‌ ಮಷಿನ್‌ ಮೂಲಕ ರಸಗೊಬ್ಬರ ಮಾರಾಟ ಮಾಡಬೇಕು. ಪ್ರಿನ್ಸಿಪಲ್‌ ಸರ್ಟಿಫಿಕೇಟ್‌, ಓ ಫಾರ್ಮ ಇಲ್ಲದೆ ಹಾಗೂ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಕೃಷಿ ಪರಿಕರ ಮಾರುವಂತಿಲ್ಲ. ಸರ್ಕಾರದ ನಿರ್ದೇಶನದಂತೆ ರೈತರಿಗೆ ನೇರವಾಗಿ ರಸಗೊಬ್ಬರ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸುವ ಮೂಲಕ ಕೃತಕ ಅಭಾವ ಸೃಷ್ಟಿಸಿ ಮೋಸ ಮಾಡದಂತೆ ನೋಡಿಕೊಳ್ಳಬೇಕು. ಇಂಥ ಪ್ರಕರಣಗಳು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಎಚ್ಚರಿಸಿದರು.

ಅವಧಿ ಮೀರಿದ, ಕಳಪೆ ಗುಣಮಟ್ಟದ ಪರಿಕರ ಮಾರಾಟ ಮಾಡದೇ, ಮಾರಾಟ ಮಾಡಿದ್ದಕ್ಕೆ ರೈತರಿಗೆ ಕಡ್ಡಾಯವಾಗಿ ರಶೀದಿ ನೀಡಬೇಕು. ಪ್ರತಿ ತಿಂಗಳು 5ನೇ ದಿನಾಂಕದೊಳಗೆ ಕೃಷಿ ಮಾರಾಟದ ಸಮಗ್ರ ಮಾಹಿತಿ ವಿವರವನ್ನು ಕೃಷಿ ಇಲಾಖೆಗೆ ಸಲ್ಲಿಸುವಂತೆ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ 3.42 ಲಕ್ಷ ರೈತರಿದ್ದು, ಎಲ್ಲ ರೈತರಿಗೆ ಸಕಾಲದಲ್ಲಿ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಪೂರೈಕೆಗೆ ಆದ್ಯತೆ ನೀಡಬೇಕು. ರೈತರನ್ನು ‚ಶೋಷಣೆ ಮಾಡಿದಲ್ಲಿ ಕಠಿಣ ಕ್ರಮ ಅನಿವಾರ್ಯ ಎಂದರು. ಕೋವಿಡ್‌-19 ಹಿನ್ನಲೆ ಕೃಷಿ ಪರಿಕರಗಳ ಮಾರಾಟದ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾರಾಟಗಾರರು, ರೈತರು ಕಡ್ಡಾಯವಾಗಿ ಮಾಸ್ಕ್, ಕೈಗಳಿಗೆ ಗ್ಲೌಸ್‌ ಧರಿಸಿರಬೇಕು. ಮಾರಾಟ ಕೇಂದ್ರದಲ್ಲಿ ಸ್ಯಾನಿಟೈಸರ್‌ ಬಳಕೆ ಕಡ್ಡಾಯ ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next