ವಿಜಯಪುರ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಬಾಧಿಸಿದ ಕೃಷ್ಣಾ ಹಾಗೂ ಭೀಮಾ ನದಿಗಳ ತೀರಗಳ ಪ್ರವಾಹ ಬಾಧಿತ ಹಳ್ಳಿಗಳಲ್ಲಿ ನೆರೆಯ ಅಬ್ಬದ ಕುಗ್ಗಿದೆ. ಆದರೆ ಇದೀಗ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಹರಡುವಿಕೆ ಭಯ ಹಾಗೂ ವಿಷ ಜಂತುಗಳ ಹಾವಳಿ ಹೆಚ್ಚ ತೊಡಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಸೃಷ್ಟಿಯಾಗದಂತೆ ಆರೋಗ್ಯ ಇಲಾಖೆ ಬಾಧಿತ ಗ್ರಾಮ ಪಂಚಾಯತ್‌ಗಳ ಮೂಲಕ ಹಲವು ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ ನೀಡಿದೆ.
Advertisement
ವಿಜಯಪುರ ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ಭೀಮಾ ನದಿ ತೀರದಲ್ಲಿ ಈವರೆಗೆ ಸುಮಾರು 75 ಹಳ್ಳಿಗಳ ಜಮೀನಿಗೆ ನೀರು ನುಗ್ಗಿದೆ. ಕೃಷ್ಣಾ ನದಿ ಪಾತ್ರದ 12 ಹಳ್ಳಿಗಳ ಜನರನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲಾಗಿದೆ. ಜಿಲ್ಲೆಯ ಕೃಷ್ಣಾ ನದಿ ಪಾತ್ರದಲ್ಲಿನ ಬಬಲೇಶ್ವರ ತಾಲೂಕಿನ 4, ನಿಡಗುಂದಿ ತಾಲೂಕಿನ 7, ಮುದ್ದೇಬಿಹಾಳ ತಾಲೂಕಿನ ಸುಮಾರು 25 ಹಳ್ಳಿಗಳು ಹಾಗೂ ಭೀಮಾ ನದಿ ಪಾತ್ರದ ಚಡಚಣ 15 ಇಂಡಿ 12 ಹಾಗೂ ಆಲಮೇಲ-ಸಿಂದಗಿ 10 ಹಳ್ಳಿಗಳು ಸೇರಿ ಸುಮಾರು 75 ಹಳ್ಳಿಗಳ ಜಮೀನು ಹಾಗೂ ಹಲವು ಗ್ರಾಮಗಳ ಮನೆಗಳಿಗೆ ಪ್ರವಾಹ ನೀರು ಬಾಧಿಸಿದೆ.
Related Articles
Advertisement
ತುರ್ತು ಸೇವೆಗಾಗಿ ರೋಗಿಗಳನ್ನು ತಾಲೂಕು-ಜಿಲ್ಲಾ ಆಸ್ಪತ್ರೆಗಳಿಗೆ ಸಾಗಿಸುವುದಕ್ಕಾಗಿ ಬಬಲೇಶ್ವರ ತಾಲೂಕ ಕೇಂದ್ರದಲ್ಲಿ 1, ಮುದ್ದೇಬಿಹಾಳ ತಾಲೂಕಿನ ತಂಗಡಗಿ, ಮುದ್ದೇಬಿಹಾಳ, ಮಸೂತಿ, ನೇಬಗೇರಿ ಪುನರ್ವಸತಿ ಕೇಂದ್ರಗಳಲ್ಲಿ ತಲಾ ಒಂದರಂತೆ 4 ಹಾಗೂ ಎರಡು ಸಂಚಾರಿ ಅರೋಗ್ಯ ಸೇವೆಗೆ ಸೇರಿದಂತೆ ಆರು ಆಂಬ್ಯುಲೆನ್ಸ್, ನಿಡಗುಂದಿ ತಾಲೂಕಿನ ಆರಳದಿನ್ನಿ ಗ್ರಾಮದಲ್ಲಿ ಒಂದು ಆಂಬ್ಯುಲೆನ್ಸ್ ಸೇವೆಯನ್ನು ಕಲ್ಪಿಸಲಾಗಿದೆ. ಇದಲ್ಲದೇ ಭೀಮಾ ತೀರದ ಇಂಡಿ ಭಾಗದಲ್ಲಿ ಹೊರ್ತಿ, ಇಂಡಿ, ಚಡಚಣ, ತಡವಲಗಾ ಅಂಬ್ಯುಲೆನ್ಸ್ ಸೇವೆ ನೀಡಲಾಗಿದೆ. ಇದಲ್ಲದೇ ಈ ಭಾಗದಲ್ಲಿ ಆರೋಗ್ಯ ಇಲಾಖೆ 108 ಸೇವೆಯ ಒಂದು ಆಂಬ್ಯುಲೆನ್ಸ್‌ನ ನೆರವನ್ನೂ ಪಡೆದಿದೆ.
ಇದರ ಹೊರತಾಗಿ ಇದೀಗ ಪ್ರವಾಹ ಬಾಧಿತ ಹಳ್ಳಿಗಳಲ್ಲಿ ಕೊಳಚೆ ನೀರು ಸಂಗ್ರಹವಾಗಿ ಡೆಂಘೀ, ಮಲೇರಿಯಾ, ಚಿಕೂನ್‌ಗುನ್ಯಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳು ಸೃಷ್ಟಿಯಾಗದಂತೆ ಪ್ರತಿ ದಿನಗೂ ಫಾಗಿಂಗ್ ಮಾಡಲಾಗುತ್ತಿದೆ. ಇದಲ್ಲದೇ ಪ್ರವಾಹದ ನೀರು ತಗ್ಗು ಪ್ರದೇಶಗಳಲ್ಲಿ ಸಂಗ್ರಹವಾಗಿ ಕೊಳಚೆ ನಿರ್ಮಾಣವಾದ ಸ್ಥಳಗಳಲ್ಲಿ ಹಾಗೂ ಕಟ್ಟಿಕೊಂಡ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಕೆಸರಿನ ಪ್ರದೇಶಗಳಲ್ಲಿ ಮೆಲಾಥಿಯಾನ್, ಬಿಎಚ್‌ಡಿ ಪೌಡರ್ ಸಿಂಪರಣೆ ಮಾಡುವಂತೆ ತಾಲೂಕು ಆರೋಗ್ಯಾಧಿಕಾರಿಗಳ ಮೂಲಕ ಪಿಡಿಒಗಳಿಗೆ 3-4 ಬಾರಿ ಪತ್ರಗಳನ್ನೂ ರವಾನಿಸಿದೆ.
ಇದಲ್ಲದೇ ಪ್ರವಾಹ ಬಾಧಿತ ಪ್ರದೇಶಗಳಲ್ಲಿ ಶುದ್ಧೀಕರಿಸಿದ ನೀರಿನ ಕೊರತೆ ಕಾಡುವ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತ ಹಳ್ಳಿಗರು ನೀರನ್ನು ಸಂಪೂರ್ಣ ಕುದಿಸಿ ಕುಡಿಯುವಂತೆ ಸಲಹೆ ನೀಡಿದ್ದಾರೆ. ಇದರಿಂದ ವಾಂತಿ-ಬೇಧಿ ಸಹಿತ ಕಾಲರಾ ಪ್ರಕರಣಗಳನ್ನು ಮುನ್ನೆಚ್ಚರಿಕೆಯಾಗಿ ನಿಯಂತ್ರಿಸಲು ಸಲಹೆ ನೀಡಿದೆ. ಸದರಿ ವಿಷಯದಲ್ಲಿ ಗ್ರಾಪಂ ಅಧಿಕಾರಿಗಳು ನಿರ್ಲಕ್ಷಿಸಿದರೆ ತಮ್ಮ ಗಮನಕ್ಕೆ ತರುವಂತೆ ಜಿಪಂ ಸಿಇಒ ಅವರು ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹಾಗೂ ಜಿಪಂ ಸಿಇಒ ವಿಕಾಸ ಸುರಳಕರ, ಎಸ್ಪಿ ಪ್ರಕಾಶ ನಿಕ್ಕಂ ಅವರು ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳೊಂದಿಗೆ ಸಂಭಾವ್ಯ ಪ್ರವಾಹದ ಮುನ್ನೆಚ್ಚರಿಕೆಯಾಗಿ ನದಿ ತೀರದ ಹಳ್ಳಿಗಳಲ್ಲಿ ಸಮನ್ವಯ ಅಧಿಕಾರಿಗಳ ತಂಡಗಳನ್ನು ಕಟ್ಟಿಕೊಂಡು ಸೇವೆಗೆ ನಿಂತರು. ಕೌಟುಂಬಿಕ ಗಂಭೀರ ಸಮಸ್ಯೆಗಳಿದ್ದರೂ ರಜೆ ರಹಿತವಾಗಿ ಕರ್ತವ್ಯ ಮಾಡತೊಡಗಿದರು. ಪ್ರವಾಹ ಹಾಗೂ ಎಲ್ಲ ರೀತಿಯ ಪರಿಹಾರ ಹಾಗೂ ಆರೋಗ್ಯ ಸೇವೆಗಳ ಕುರಿತು ಖುದ್ದು ಉಸ್ತುವಾರಿ ನೋಡಿಕೊಂಡ ಕಾರಣ ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲೂ ಒಂದೇ ಒಂದು ಸಾವು ಸಂಭವಿಸಿಲ್ಲ. ಅಧಿಕಾರಿಗಳು ಸಮನ್ವಯದಿಂದ ಹಾಗೂ ಬದ್ಧತೆಯಿಂದ ಸೇವೆ ಮಾಡಿದಲ್ಲಿ ಎಂಥ ಗಂಭೀರ ಹಾಗೂ ಸಂಕಷ್ಟದ ಪರಿಸ್ಥಿತಿಯನ್ನೂ ಸಮರ್ಥವಾಗಿ ಎದುರಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.