ವಿಜಯಪುರ: ಜಿಲ್ಲೆಯಲ್ಲಿ ಶಿಕ್ಷಕರು ಸರ್ಕಾರದ ಸೂಚನೆಯಂತೆ ಕೊವಿಡ್-19 ಕುರಿತು ಪ್ರತಿ ಗ್ರಾಮಗಳ ಪ್ರತಿ ಕುಟುಂಬದ ಸಂಪೂರ್ಣ ಮಾಹಿತಿ ಸಂಗ್ರಹ ಕಾರ್ಯ ಆರಂಭಿಸಿದ್ದಾರೆ.
ಸರ್ಕಾರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಮೇ 7ರಿಂದ ಮೇ 11ರವರೆಗೆ ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಶಿಕ್ಷಕರಿಂದ ಸಮೀಕ್ಷೆ ಕಾರ್ಯ ಆರಂಭಗೊಂಡಿದೆ. ಮಹಾರಾಷ್ಟ್ರ ಗಡಿಭಾಗ ಪ್ರದೇಶದಲ್ಲಿರುವ ತಿಕೋಟ ತಾಲೂಕಿನ ಘೋಣಸಗಿ ಗ್ರಾಮದ ಬೂತ್ ನಂ 4,5 ಹಾಗೂ 6ರಲ್ಲಿ ಬರುವ ಗ್ರಾಮ, ತಾಂಡಾ ಹಾಗೂ ತೋಟದ ವಸ್ತಿ ಮನೆಗಳ ಸಂಪೂರ್ಣ ಸಮೀಕ್ಷೆ ಮಾಹಿತಿಯನ್ನು ಹೆಲ್ತ್ ವಾಚ್ ಮೊಬೈಲ್ ಅಪ್ ನಲ್ಲಿ ನಿಗದಿತ ನಮೂನೆಗಳಲ್ಲಿ ಭರ್ತಿ ಮಾಡುವ ಸಮೀಕ್ಷೆ ಕಾರ್ಯವನ್ನು ಶಿಕ್ಷಕರು ಮಾಡುತ್ತಿದ್ದಾರೆ.
ಕುಟುಂಬ ಸಮೀಕ್ಷೆ ಕಾರ್ಯ ನಡೆಸುವಾಗ ಯಾವುದಾದರೂ ಕುಟುಂಬದಲ್ಲಿ ಕೊರೊನಾ ಸೋಂಕು ಕುರಿತು ಜ್ವರ, ಕಫ, ನೆಗಡಿ, ಉಸಿರಾಟ ತೊಂದರೆ ಕಂಡು ಬಂದರೆ ನಿಗದಿತ ನಮೂನೆಯಲ್ಲಿ ಆ್ಯಪ್‌ನಲ್ಲಿ ದಾಖಲಿಸಲಾಗುತ್ತಿದೆ. ಕುಟುಂಬದಲ್ಲಿ 60 ವಯಸ್ಸಿನ ವೃದ್ಧರಲ್ಲಿ ಬಿಪಿ, ಸಕ್ಕರೆ, ರಕ್ತದೊತ್ತಡ, ಹೃದಯ ಸಂಬಂಧಿ ರೋಗಿಗಳು, ಗರ್ಭಿಣಿಯರ ಮಾಹಿತಿ ಹಾಗೂ ಹೊಸ ಕುಟುಂಬಗಳ ಸೇರ್ಪಡೆ ಕಾರ್ಯ ಆರಂಭಿಸಿದ್ದಾರೆ.
ಸಮೀಕ್ಷೆ ಕಾರ್ಯದಲ್ಲಿ ಬೂತ್ ಮಟ್ಟದ ಅಧಿಕಾರಿಗಳಾದ ವಿ.ಎಸ್.ಬಿರಾದಾರ, ಎಸ್.ವಿ. ಸಿಂಗೆ, ಡಿ.ಎಚ್.ಬಂಡಿವಡ್ಡರ, ಶಿಕ್ಷಕರಾದ ಪಿ.ಎಸ್.ಗದ್ಯಾಳ, ಜೆ.ಎ.ಆಯತವಾಡ, ರಾಜು ಹಟ್ಟೆನವರ, ಬಿ.ಪಿ. ಖವಿ ಇದ್ದರು. ಆಗ್ರಹ: ಬಿಸಿಲಿನ ತಾಪಮಾನದ ನಡುವೆಯೂ ಶಿಕ್ಷಕರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತರೆ ನೌಕರರಿಗೆ ಕೊಡುವ ಮಾಸ್ಕ್, ಸ್ಯಾನಿಟೈಜರ್ ಸೇರಿದಂತೆ ಸೋಂಕು ತಡೆ ಮತ್ತು ಸುರಕ್ಷತೆಗಾಗಿ ಶಿಕ್ಷಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ
ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಆಗ್ರಹಿಸಿದ್ದಾರೆ.