Advertisement

ಬೋಟಿಂಗ್‌ಗೆ ನಿರೀಕ್ಷಿತ ಸ್ಪಂದನೆ

12:45 PM Oct 11, 2019 | Team Udayavani |

„ಜಿ.ಎಸ್‌. ಕಮತರ
ವಿಜಯಪುರ: ವಿಶ್ವ ಪ್ರವಾಸೋದ್ಯಮ ದಿನವಾದ ಸೆ. 27ರಂದು ನಗರದ ಐತಿಹಾಸಿಕ ಬೇಗಂ ತಲಾಬ್‌ನಲ್ಲಿ ಚಾಲನೆ ಪಡೆದಿದ್ದ ಬೋಟಿಂಗ್‌ಗೆ ನಗರದ ಜನರಿಂದ ಸೂಕ್ತ ಸ್ಪಂದನೆ ದೊರಕಿದೆ. ಕಳೆದ 15 ದಿನಗಳಿಂದ ಹಬ್ಬ ಹಾಗೂ ರಜೆ ಕಾರಣ ಜನರಿಂದ ನಿರೀಕ್ಷಿತ ಬೆಂಬಲ ವ್ಯಕ್ತವಾಗಿದೆ. ಆದರೆ ಭವಿಷ್ಯದಲ್ಲಿ ಜನರಿಂದ ಇದೇ ರೀತಿ ಬೆಂಬಲ ಸಿಗುವ ಸಾಧ್ಯತೆ ಇಲ್ಲದ ಕಾರಣ ವಿಜಯಪುರ ಜಿಲ್ಲೆಯಲ್ಲಿ ಬೋಟಿಂಗ್‌ ಶಿಬಿರ ಆಯೋಜಿಸಿ ವಿಕೆಂಡ್‌ ಮಸ್ತಿಗೆ ಬರುವ ಬೋಟಿಂಗ್‌ ಪ್ರವಾಸಿಗರನ್ನು ವಿಜಯಪುರ ಜಿಲ್ಲೆಗೆ ಆಕರ್ಷಿಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ.

Advertisement

ನಗರದ ಐತಿಹಾಸಿಕ ಆರೆಕಿಲ್ಲಾದ ಗಗನ ಮಹಲ್‌ ಬಳಿ ಐತಿಹಾಸಿಕ ಕಂದಕದಲಿ ಬೋಟಿಂಗ್‌ ನಡೆಸಲು ಜಿಲ್ಲಾಡಳಿತ ಟೆಂಡರ್‌ ಕರೆದಿತ್ತು. ಕಾರವಾರ ಜಿಲ್ಲೆಯ ಗಣೇಶಗುಡಿಯ ಫ್ಲ್ಯೆಕ್ಯಾಚರ್‌ ಎಂಬ ಸಂಸ್ಥೆ 3 ಲಕ್ಷ ರೂ.ಗೆ ವಾರ್ಷಿಕ ಗುತ್ತಿಗೆ ಅಂತಿಮಗೊಂಡಿತ್ತು. ಆದರೆ ಭಾರತೀಯ ಪುರಾತತ್ವ ಇಲಾಖೆ ಕಂದಕದಲ್ಲಿ ಬೋಟಿಂಗ್‌ ಆರಂಭಕ್ಕೆ ದೆಹಲಿಯಲ್ಲಿರುವ ಕೇಂದ್ರ ಕಚೇರಿಯಿಂದ ಪರವಾನಿಗೆ ಪಡೆಯಬೇಕು ಎಂದು ತಕರಾರು ತೆಗೆದಿತ್ತು. ಇದರಿಂದ ಟೆಂಡರ್‌ ದಾರರಿಗೆ 1 ತಿಂಗಳ ಅವಧಿಗೆ ನಗರದ ಹೊರ ವಲಯದಲ್ಲಿರುವ ಬೇಗಂ ತಲಾಬ್‌ ಕೆರೆಯಲ್ಲಿ 1 ತಿಂಗಳ ಬೋಟಿಂಗ್‌ ಆರಂಭಕ್ಕೆ ಜಿಲ್ಲಾಡಳಿತ ಆವಕಾಶ ನೀಡಿತ್ತು. 1 ತಿಂಗಳ ಬಳಿಕ ಬೇಗಂ ತಲಾಬ್‌ ಕೆರೆಯಲ್ಲಿ ವಾರ್ಷಿಕ ಬೋಟಿಂಗ್‌ ಆರಂಭಕ್ಕೆ ಪ್ರತ್ಯೇಕ ಟೆಂಡರ್‌ ಕರೆಯಲು ಯೋಜಿಸಿತ್ತು.

ಮೋಟಾರ್‌ ಬೋಟಿಂಗ್‌ಗೆ ಅರ್ಧ ಗಂಟೆಗೆ 100 ರೂ. ಕಯಾಕಿಂಗ್‌ ಅರ್ಧ ಗಂಟೆಗೆ ಒಬ್ಬರಿಗೆ 100 ರೂ., ಜೋಡಿ ಇದ್ದರೆ 150 ರೂ. ಹಾಗೂ ರ್ಯಾಫ್ಟಲ್‌ ಬೋಟಿಂಗ್‌ಗೆ 50 ರೂ. ದರ ನಿಗದಿ ಮಾಡಿದೆ. ಸೆ. 27ರಿಂದ ಬೇಗಂ ತಲಾಬ್‌ನಲ್ಲಿ ಆರಂಭಗೊಂಡಿರುವ ಬೋಟಿಂಗ್‌ಗೆ ವಿಜಯಪುರ ಜಿಲ್ಲೆಯ ಜನರಿಂದ ಸೂಕ್ತ ಸ್ಪಂದನೆ ದೊರಕಿದೆ. ಆದರೆ ಸ್ಥಳೀಯರು ಒಮ್ಮೆ ಮಾತ್ರ ಬೋಟಿಂಗ್‌ ಅನುಭವ ಪಡೆಯಲಿದ್ದು, ಪದೇ ಪದೇ ಇಲ್ಲಿಗೆ ಬರಲಾರರು. ಹೀಗಾಗಿ ಬೇಗಂ ತಲಾಬ್‌ ಕೆರೆಯ ಬೋಟಿಂಗ್‌ ಯೋಜನೆ ನಿರಂತರ ಉಳಿಸುವುದು ಅನುಮಾನ.

ಹೀಗಾಗಿ ನಗರಕ್ಕೆ ಪ್ರವಾಸಕ್ಕೆ ಬರುವ ಪ್ರವಾಸಿಗರನ್ನು ಆಕರ್ಷಿಸುವುದಕ್ಕೆ ಯೋಜನೆ ರೂಪಿಸುವ ಅಗತ್ಯವಿದೆ. ಇದಲ್ಲದೇ ಬೇಗಂ ತಲಾಬ್‌ ನಲ್ಲಿ ಬೋಟಿಂಗ್‌ ಆರಂಭಕ್ಕೆ ಪ್ರವಾಸೋದ್ಯಮ ಇಲಾಖೆಯ ಮೂಲಕ ಜಿಲ್ಲಾಡಳಿತ ಮತ್ತೆ ಪ್ರತ್ಯೇಕ ಟೆಂಡರ್‌ ಕರೆದಿದೆ.

ಟೆಂಡರ್‌ದಾರರಲ್ಲಿ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಹೀಗಾಗಿ ಐತಿಹಾಸಿಕ ಕಂದಕದಲ್ಲಿ ಗುತ್ತಿಗೆ ಪಡೆದು, ತಾತ್ಕಾಲಿಕವಾಗಿ ಬೇಗಂ ತಲಾಬ್‌ನಲ್ಲಿ ಬೋಟಿಂಗ್‌ ಆರಂಭಿಸಿರುವ ಕಾರವಾರ ಮೂಲದ ಗುತ್ತಿಗೆ ಸಂಸ್ಥೆಗೆ ಮುಂದೇನು ಎಂಬ ಚಿಂತೆ ಕಾಡಲಾರಂಭಿಸಿದೆ.

Advertisement

ಈ ಡೋಲಾಯಮಾನ ಸ್ಥಿತಿಯಲ್ಲೂ ಬೇಗಂ ತಲಾಬ್‌ ಕೆರೆಯಲ್ಲಿ ಬೋಟಿಂಗ್‌ಗೆ ಹವ್ಯಾಸಿ ಬೋಟಿಂಗ್‌ ಪ್ರಿಯರನ್ನು ಆಕರ್ಷಿಸಲು ಅಡ್ವೆಂಚರ್‌ ಕ್ಯಾಂಪ್‌ ಅಯೋಜಿಸಲು ಮುಂದಾಗಿದೆ. ವಿಜಯಪುರದ ಬೋಟಿಂಗ್‌ ಟೆಂಡರ್‌ ಪಡೆದಿರುವ ಕಾರವಾರ ಜಿಲ್ಲೆಯ ಜೋಯಿಡಾ ತಾಲೂಕಿನ ಇಳವಾ-ಗಣೇಸಗುಡಿಯ ಫ್ಲ್ಯೆಕ್ಯಾಚರ್‌ ಅಡ್ವೆಂಚರ್‌ ಸಂಸ್ಥೆ ಈಗಾಗಲೇ ಬೋಟಿಂಗ್‌ ಪ್ರವಾಸ ಹಾಗೂ ಶಿಬಿರ ಹಮ್ಮಿಕೊಂಡಿರುವ ಅನುಭವ ಇದೆ. ಕಾರವಾರ ಸಮುದ್ರದಲ್ಲಿ ಬೋಟಿಂಗ್‌ ಶಿಬಿರ ಹಮ್ಮಿಕೊಂಡಿರುವ ಅಧಾರದಲ್ಲಿ ತನ್ನ ವೆಬ್‌ಸೈಟ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿಜಯಪುರ ಬೋಟಿಂಗ್‌ ಅವಕಾಶಗಳ ಕುರಿತು ಪ್ರಚಾರ ಮಾಡಿದೆ.

ಇದಕ್ಕಾಗಿ ವಿಜಯಪುರ ಬೇಗಂ ತಲಾಬ್‌ ದೋಣಿ ವಿಹಾರದ ಪರಿಸರದಲ್ಲಿನ ಸೌಂದರ್ಯವನ್ನು ಡ್ರೋಣ್‌ ಕ್ಯಾಮಾರ ಮೂಲಕ ವಿಡಿಯೋ-ಸ್ಥಿರ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದೆ. ಅಲ್ಲದೇ ವಿಜಯಪುರ ಬೇಗಂ ತಲಾಬ್‌ ಕೆರೆಯ ದೋಣಿ ವಿಹಾರಕ್ಕೆ ಇರುವ ಇರುವ ಸೌಲಭ್ಯಗಳ ಕುರಿತು ಹವ್ಯಾಸಿ ಬೋಟಿಂಗ್‌ ಪ್ರಿಯರಿಗೆ ಮಾಹಿತಿ ನೀಡಿದೆ.

ಬೆಂಗಳೂರು ಸೇರಿದಂತೆ ವಿವಿಧ ಮಹಾನಗರಗಳಲ್ಲಿ ವಿಕ್‌ ಎಂಡ್‌ ಮಸ್ತಿಗಾಗಿ ಬರುವ ಯುವಕರ ದಂಡನ್ನು ವಿಜಯಪುರ ದೋಣಿ ವಿಹಾರ ಶಿಬಿರಕ್ಕೆ ಆಕರ್ಷಿಸಲು ಪ್ರಚಾರ ನಡೆಸಿದೆ. ಈಗಾಗಲೇ ತಮ್ಮ ಸಂಸ್ಥೆಯೊಂದಿಗೆ ಪ್ರವಾಸಿ ಬೋಟಿಂಗ್‌ ಸಂಪರ್ಕ ಇರಿಸಿಕೊಂಡಿರುವ ಸರ್ಕಾರಿ ಬೋಟಿಂಗ್‌ ಸಾಹಸ ಹಾಗೂ ಹವ್ಯಾಸಿ ಬೋಟಿಂಗ್‌ ಸಂಸ್ಥೆ ಚೇತನಾ ಸೇರಿದಂತೆ ಕಾರವಾರ, ಮಡಿಕೇರಿ, ದಾಂಡೇಲಿ.

ಹೀಗೆ ರಾಜ್ಯದ ಇತರೆ ಭಾಗಗಳಲ್ಲಿ ಸುಮಾರು 25 ಸಂಸ್ಥೆಗಳು ನಿರಂತರ ಬೋಟಿಂಗ್‌ ಶಿಬಿರ ಹಮ್ಮಿಕೊಳ್ಳುತ್ತಿವೆ. ಈ ಸಂಸ್ಥೆಗಳ ಸಹಯೋಗದಲ್ಲಿ ವಿಜಯಪುರದಲ್ಲೂ ಶಾಶ್ವತ ಬೋಟಿಂಗ್‌ ಯೋಜನೆ ಉಳಿಸಿಕೊಳ್ಳಲು ಇಂಥ ಬೋಟಿಂಗ್‌ ಶಿಬಿರ ಹಮ್ಮಿಕೊಳ್ಳಲು ಫ್ಲ್ಯೆಕ್ಯಾಚರ್‌ ಸಂಸ್ಥೆ ಸಿದ್ಧತೆ ನಡೆಸಿದೆ. ಇದಕ್ಕಾಗಿ ಈಗಾಗಲೇ ಬೆಂಗಳೂರು ಮೂಲದ ಫೋರ್‌ ಮೈ ಆ್ಯಕ್ಸ್‌ ಅಡ್ವೆಂಚರ್‌ ಸಂಸ್ಥೆ ವಿಜಯಪುರ ಬೇಗಂ ತಲಾಬ್‌ ಕೆರೆಯಲ್ಲಿ ದೋಣಿ ವಿಹಾರ ಶಿಬಿರ ಆಯೋಜಿಸುವ ಕುರಿತು ಮಾತುಕತೆ ನಡೆಸಿದೆ. ಅಲ್ಲದೇ ಈಗಾಗಲೇ ತನ್ನ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್‌ ಆರಂಭಿಸಿದ್ದು, ವಿದ್ಯಾರ್ಥಿಗಳು, ಕಾರ್ಪೋರೇಟ್‌ ಮಂದಿಯನ್ನು, ಐಟಿ ಉದ್ಯೋಗಿಗಳಂಥ ವಾರದ ಮೋಜಿಗೆ ಬರುವ ಜನರನ್ನು ಬೋಟಿಂಗ್‌ ಕ್ಯಾಂಪ್‌ಗೆ ಕರೆ ತರಲು ಸಿದ್ಧತೆ ನಡೆಸಿದೆ.

ಶೀಘ್ರವೇ ವಿಜಯಪುರ ಬೋಟಿಂಗ್‌ ದಿನಾಂಕವನ್ನೂ ಪ್ರಕಟಿಸಲು ಯೋಜಿಸುತ್ತಿದೆ. ಸದ್ಯ ವಿಜಯಪುರ ಬೋಟಿಂಗ್‌ ಸೇವೆ ಇರುವ ಬೇಗಂ ತಲಾಬ್‌ ಕೆರೆ ನಗರದ ಹೊರ ವಲಯದಲ್ಲಿದ್ದು, ಬೋಟಿಂಗ್‌ ಶಿಬಿರ ಆಯೋಜಿಸಲು ಕೂಡ ಸೂಕ್ತವಾಗಿದೆ. ನಿತ್ಯವೂ ಸೂರ್ಯೋದಯ ಹಾಗೂ ಸೂರ್ಯಾಸ್ತದ ವಿಭಿನ್ನ ಅನುಭವ ನೀಡುತ್ತಿದ್ದು ನಗರದ ಜಂಡಜಗಳಿಂದ ಮುಕ್ತವಾಗಿ ನೆಮ್ಮದಿಯ ಸಮಯ ಕಳೆಯಲು ಬರುವ ಪ್ರವಾಸಿಗರಿಗೆ ಬೇಗಂ ತಲಾಬ್‌ ಕೆರೆಯಲ್ಲಿ ವಿಶಾಲ ಸ್ಥಳವೂ ಇದೆ.

ತಾತ್ಕಾಲಿಕ ಟೆಂಟ್‌ ಹಾಕಿ ಕೆರೆ ಪ್ರದೇಶದಲ್ಲೇ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸುವ ಯೋಜನೆ ರೂಪಿಸಲಾಗುತ್ತಿದೆ. ಇದಲ್ಲದೇ ಅಡ್ವೆಂಚರ್‌ ಕ್ಯಾಂಪ್‌ಗೆ ಬರುವ ಜನರಿಗೆ ವಿಜಯಪುರ ಐತಿಹಾಸಿಕ ಸ್ಮಾರಕಗಳ ವೀಕ್ಷಣೆ ಯೋಜನೆಯನ್ನೂ ರೂಪಿಸಲಾಗುತ್ತದೆ. ಪ್ರವಾಸಿಗರ ಆಸಕ್ತಿಯ ಮೇಲೆ ಎಷ್ಟು ದಿನಗಳ ಕ್ಯಾಂಪ್‌, ಆಹಾರ, ವಸತಿ ಆಧರಿಸಿ ಕ್ಯಾಂಪ್‌ನ ಶುಲ್ಕ ನಿಗದಿ ಮಾಡಲು ಯೋಜಿಸಲಾಗುತ್ತಿದೆ.

ವಿಜಯಪುರ ಜಿಲ್ಲೆಯ ಮಟ್ಟಿಗೆ ಇಂಥ ಚಿಂತನೆ ವಿಶಿಷ್ಟವಾಗಿದ್ದು, ಪ್ರಾಯೋಗಿಕ ಎನಿಸುವ ಮಟ್ಟದಲ್ಲಿರುವ ಈ ಬೋಟಿಂಗ್‌ ಕ್ಯಾಂಪ್‌ ಸಂಸ್ಕೃತಿ ವಿಜಯಪುರಕ್ಕೆ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next