Advertisement

ಜ್ಞಾನ ಸಂಪಾದನೆ ಗುರಿಯಾಗಲಿ

02:49 PM Jun 03, 2019 | Team Udayavani |

ವಿಜಯಪುರ: ಪ್ರಸಕ್ತ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನದ ಶಕೆ ಆರಂಭಗೊಂಡಿದ್ದು ಜ್ಞಾನ ಸಂಪಾದನೆಯೇ ಪ್ರಸ್ತುತ ವಿದ್ಯಾರ್ಥಿಗಳ ಮೂಲ ಗುರಿ ಆಗಬೇಕು. ಇದಕ್ಕಾಗಿ ಪರಿಶ್ರಮದಿಂದ ಅಧ್ಯಯನ ನಡೆಸುವ ಮೂಲಕ ಅಂದುಕೊಂಡುದನ್ನು ಸಾಧಿಸಲು ಮುಂದಾಗಬೇಕು ಎಂದು ಎಸ್ಪಿ ಪ್ರಕಾಶ ನಿಕ್ಕಂ ಅಭಿಪ್ರಾಯ ಪಟ್ಟರು.

Advertisement

ನಗರದ ಅಥಣಿ ರಸ್ತೆಯಲ್ಲಿರುವ ಎಕ್ಸ್‌ಲೆಂಟ್ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ಪ್ರಥಮ ಹಾಗೂ ದ್ವಿತೀಯ ವರ್ಗಗಳ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಂದುಕೊಂಡ ಗುರಿ ಸಾಧಿಸಲು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕಿದ್ದರೆ, ಆಧುನಿಕ ತಂತ್ರಜ್ಞಾನಗಳಾದ ಮೊಬೈಲ್, ಟಿವಿಗಳ ಅನಗತ್ಯ ಬಳಕೆ ನಿಲ್ಲಿಸಬೇಕು. ಜ್ಞಾನ ಸಂಪಾದನೆಗೆ ಶ್ರದ್ಧೆಯಿಂದ ಓದಿನ ಕಡೆ ಹೆಚ್ಚಿನ ಗಮನ ಕೊಡಬೇಕು ಎಂದು ಸಲಹೆ ನೀಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ್ಯದ ಐಎಎಸ್‌ ಟಾಪರ್‌ ರಾಹುಲ್ ಸಂಕನೂರ, ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಮಹತ್ವದ ಹಂತ. ಈ ಹಂತದಲ್ಲಿ ವಿದ್ಯಾರ್ಥಿಗಳು ಅತ್ಯಂತ ಕಠಿಣ ಪರಿಶ್ರಮದಿಂದ ಅಧ್ಯಯನ ನಡೆಸಬೇಕು. ಜೀವನದಲ್ಲಿ ಸಾಧಿಸುವ ಛಲ ಹಾಗೂ ಹಠ ಹೊಂದಿರಬೇಕು. ಸೋಲು ಉಂಟಾದರೂ ಧೃತಿಗೆಡದೇ ಶ್ರದ್ಧೆಯಿಂದ ಸತತ ಪ್ರಯತ್ನ ನಡೆಸಿದರೆ ಗುರಿ ಸಾಧನೆ ಸಾಧ್ಯ. ಐಎಎಸ್‌ ಪಾಸಾಗಲು ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆ ಎದುರಿಸಿ ಯಶಸ್ಸು ಸಾಧಿಸುವ ಕುರಿತು ಮಾರ್ಗದರ್ಶನ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಚೇರಮನ್‌ ಬಸವರಾಜ ಕೌಲಗಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಿರಂತರವಾಗಿ ಒಂದಿಲ್ಲೊಂದು ಹಂತದಲ್ಲಿ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ರ್‍ಯಾಂಕ್‌ ಪಡೆಯುವ ಮೂಲಕ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆ ನಮ್ಮ ಸಂಸ್ಥೆ ಜವಾಬ್ದಾರಿಯನ್ನೂ ಹೆಚ್ಚಿಸಿದ್ದು ಮಕ್ಕಳು ಹಾಗೂ ಪಾಲಕರ ನಿರೀಕ್ಷೆಗೆ ತಕ್ಕಂತೆ ಅಗತ್ಯ ಮೂಲಭೂತ ಸೌಲಭ್ಯ ಹಾಗೂ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.

ಬಸವನಬಾಗೇವಾಡಿ ಹಿರೇಮಠದ ಪಟ್ಟಾಧ್ಯಕ್ಷ ಶಿವಪ್ರಕಾಶ ಶ್ರೀಗಳು, ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ, ಸಂಸ್ಥೆ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ಪ್ರಥಮ ದರ್ಜೆ ಪದವಿ ಕಾಲೇಜಿನ ಎಂ.ಆರ್‌. ಜೋಶಿ, ಸಂಸ್ಥೆ ನಿರ್ದೇಶಕ ರಾಜಶೇಖರ್‌ ಕೌಲಗಿ, ಶಿವರುದ್ರಯ್ಯ ಹಿರೇಮಠ ಮಾತನಾಡಿದರು.

Advertisement

ವೇದ ಅಧ್ಯಯನ ಪೀಠದ ವೇದಮೂರ್ತಿ ನಾಗರಾಜಯ್ಯಶಾಸ್ತ್ರಿ ಸಾನ್ನಿಧ್ಯ ವಹಿಸಿದ್ದರು. ಎನ್‌ಟಿಎಸ್‌ ಉತ್ತೀರ್ಣರಾದ ಸೋನಾಲಿ ವಾಲಿ, ಎಸ್ಸೆಸ್ಸೆಲ್ಸಿ ಪರೀಖ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಎಕ್ಸ್‌ಲೆಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸುಪ್ರಿಯಾ ಜೋಶಿ ಅವರನ್ನು ಸನ್ಮಾನಿಸಲಾಯಿತು.

ಶಿವಾನಂದ ಕಲ್ಯಾಣಿ ಸ್ವಾಗತಿಸಿದರು. ಶ್ರದ್ಧಾ ಜಾಧವ ನಿರೂಪಿಸಿದರು. ಕಾಲೇಜಿನ ಆಡಳಿತಾಧಿಕಾರಿ ಪರಶುರಾಮ ಭಾವಿಕಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next