ವಿಜಯಪುರ: ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡುವುದು ಎಂದರೆ ಅದು ಇಡಿ ಮನುಕುಲವನ್ನು ಕೊಂದಂತೆ. ಯಾರನ್ನೂ ಹಿಂಸಿಸಬೇಡಿ, ದ್ವೇಷಿಸಬೇಡಿ ಎಂದು ಪ್ರವಾದಿ ಮೊಹ್ಮದ್ ಪೈಗಂಬರ್ ಹೇಳಿದ್ದಾರೆ. ಹತ್ಯೆ ಮಾಡುವ ಯಾವುದೇ ಧರ್ಮ ಇದ್ದರೂ ಅದು ಮನುಷ್ಯ ಧರ್ಮವಲ್ಲ. ಪೈಗಂಬರರ ಈ ಹಿತವಚನ ಸದಾ ಪಾಲಿಸಿ ಮುನ್ನಡೆಯಬೇಕು ಎಂದು ಹಜರತ್ ಸೈಯ್ಯದ್ ತನ್ವೀರ್ ಪೀರಾ ಹಾಶ್ಮೀ ಕರೆ ನೀಡಿದರು.
ಬುಧವಾರ ನಗರದ ದಖನಿ ಈದ್ಗಾದಲ್ಲಿ ರಂಜಾನ್ ಹಬ್ಬದ ನಿಮಿತ್ತ ನಡೆದ ವಿಶೇಷ ಸಾಮೂಹಿಕ ಪ್ರಾರ್ಥನೆ ಬಳಿಕ ಧರ್ಮ ಸಂದೇಶ ನೀಡಿದ ಅವರು, ಪ್ರವಾದಿ ಮೊಹ್ಮದ್ ಪೈಗಂಬರ್ ಆದರ್ಶಮಯ ಬದುಕಿನ ಸೂತ್ರ ಹೇಳಿದ್ದಾರೆ. ಈ ಸೂತ್ರಗಳನ್ನು ಪಾಲಿಸುವ ಮೂಲಕ ಉತ್ತಮ ಜೀವನ ನಡೆಸಬೇಕು. ಹತ್ಯೆ ಮಾಡುವುದು, ಜೀವಕ್ಕೆ ಹಾನಿ ಉಂಟು ಮಾಡುವುದು ಅಕ್ಷಮ್ಯ ಅಪರಾಧ. ಯಾವುದೇ ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಪರಸ್ಪರರು ದ್ವೇಷ ತ್ಯಜಿಸಿ, ಪ್ರೀತಿ-ವಿಶ್ವಾಸದಿಂದ ಬದುಕುವಂತೆ ಹೇಳಿರುವ ಪ್ರವಾದಿ ಮೊಹ್ಮದ್ ಪೈಗಂಬರರ ಸಂದೇಶ ಮಾರ್ಗದಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.
ಪವಿತ್ರ ರಂಜಾನ್ ಮಾಸ ಪುಣ್ಯದ ಮಾಸ. ಈ ಮಾಸದಲ್ಲಿ ಕೈಗೊಳ್ಳುವ ನಮಾಜ್, ಜಕಾತ್‌ನಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಮುಂದುವರಿಸಬೇಕು. ಆಗ ಅಲ್ಲಾಹನ ಅನುಗ್ರಹ ಪ್ರಾಪ್ತಿಯಾಗುತ್ತದೆ.
ನಿಮ್ಮ ಮನೆಯಲ್ಲಿ ನಿತ್ಯವೂ ಒಂದು ಹೊತ್ತಿನ ಊಟ ಬಿಟ್ಟರೂ ಸರಿ, ಸ್ವಂತ ಮನೆ ಇಲ್ಲದೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೂ ಸರಿ, ಹೊಸ ಬಟ್ಟೆ ಖರೀದಿಸದೇ ಹಳೆ ಬಟ್ಟೆ ಧರಿಸಿದರೂ ಸರಿ ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಮಾತ್ರ ನಿರ್ಲಕ್ಷ್ಯ ಮಾಡದಿರಿ. ಪ್ರಸಕ್ತ ಸಂದರ್ಭದಲ್ಲಿ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಕಡ್ಡಾಯ ಶಿಕ್ಷಣ ಕೊಡಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಶಿಕ್ಷಣದ ಜೊತೆಗೆ ನಮ್ಮ ಮಕ್ಕಳಿಗೆ ಮನೆಯಲ್ಲೇ ಉತ್ತಮ ಸಂಸ್ಕಾರ ನೀಡುವ ಮೂಲ ಅವರ ಭವಿಷ್ಯದ ಜೀವನ ಮಾದರಿ ಎನಿಸಬೇಕು. ಸಂಕಷ್ಟವನ್ನು ಎದೆಗುಂದದೇ ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಇರುವ ಬದುಕಿನ ಶಿಕ್ಷಣ ಕೊಡಿಸಬೇಕು ಎಂದು ಕಿವಿ ಮಾತು ಹೇಳಿದರು.
ಭಾರತೀಯರಿಗೆ ಸೌಹಾರ್ದತೆಯೇ ಆಧಾರಸ್ತಂಭ, ಭಾರತ ನಮಗೆ ಎಲ್ಲವನ್ನೂ ಕರುಣಿಸಿದೆ. ಸುಖ, ಶಾಂತಿ ನೆಮ್ಮದಿ, ಸಂತೋಷದಿಂದ ಈ ದೇಶದಲ್ಲಿ ಬಾಳುವ ಅವಕಾಶ ದೊರಕಿರುವುದು ಪುಣ್ಯದ ಸಂಗತಿ. ಇಸ್ಲಾಮೀಯರು ನಮ್ಮ ಧರ್ಮ ಸಂಸ್ಕಾರಗಳ ಪಾಲನೆ ಜೊತೆಗೆ ಹಿಂದೂ, ಕ್ರೈಸ್ತ, ಸಿಖ್ ಸೇರಿದಂತೆ ಎಲ್ಲ ಅನ್ಯ ಧರ್ಮ-ಸಮಾಜ ಬಾಂಧವರೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡು ಸೌಹಾರ್ದಯುತ ಜೀವನ ನಡೆಸಬೇಕು. ಇಸ್ಲಾಂಮಿಯರು ನಮ್ಮ ಎಲ್ಲ ಹಬ್ಬಗಳ ಸಂಧರ್ಭದಲ್ಲಿ ನಿಮ್ಮ ಹಿಂದೂ ಸ್ನೇಹಿತರನ್ನು ಮನೆಗೆ ಆಹ್ವಾನಿಸಿ ಆತಿಥ್ಯ ನೀಡಿ ಸಹೋದರತೆ ಬಾಂಧವ್ಯ ವೃದ್ಧಿಸುವ ಕೆಲಸ ಮಾಡಬೇಕು ಎಂದರು.
ಗೃಹ ಸಚಿವ ಎಂ.ಬಿ. ಪಾಟೀಲ ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್ ಶುಭಾಶಯ ಕೋರಿದರು. ಅಬ್ದುಲ್ ಹಮೀದ್ ಮುಶ್ರೀಫ್, ಎಂ.ಎಂ. ಸುತಾರ, ಶಬ್ಬೀರ್ ಅಹ್ಮದ್ ಢಾಲಾಯತ್, ಹಾಸಿಂಪೀರ್ ವಾಲೀಕಾರ್, ಆಜಾದ್ ಪಟೇಲ್, ಸಲೀಂ ಉಸ್ತಾದ, ಚಾಂದಸಾಬ ಗಡಗಲಾವ, ಎಂ.ಸಿ. ಮುಲ್ಲಾ, ಫಯಾಜ್ ಕಲಾದಗಿ, ಇರ್ಫಾನ್ ಶೇಖ್, ಜಾವೇದ್ ಜಮಾದಾರ ಸೇರಿದಂತೆ ಇತರರು ಇದ್ದರು.