ವಿಜಯಪುರ: ಪೈಪೋಟಿಯ ಇಂದಿನ ಯುಗದಲ್ಲಿ ಕಠಿಣ ಎನಿಸಿರುವ ಸಾರಿಗೆ ಉದ್ಯಮದಲ್ಲಿ ಗ್ರಾಮಾಂತರ ಪ್ರದೇಶದ ಯುವಕನೊಬ್ಬ ಲಕ್ಷಾಂತರ ರೂ. ಬಂಡವಾಳ ತೊಡಗಿಸಿ ಖಾಸಗಿ ಬಸ್ ಸಂಚಾರ ಆರಂಭಿಸಿರುವುದು ನಿಜಕ್ಕೂ ಸಾಹಸದ ಕೆಲಸ. ನನ್ನ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದಿಂದ ಯುವಕನೊಬ್ಬ ಬೆಂಗಳೂರಿಗೆ ಬಸ್ ಸೇವೆ ಆರಂಭಿಸಿರುವುದು ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಬಬಲೇಶ್ವರದಿಂದ ಬೆಂಗಳೂರಿಗೆ ನಿತ್ಯ ಸಂಚಾರಕ್ಕೆ ಆರಂಭಿಸಿರುವ ನೂತನ ಸುವಿಹಾರಿ ಬಸ್‌ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಬಲೇಶ್ವರ ತಾಲೂಕಿನ ಕಣಬೂರ ಗ್ರಾಮದ ಯುವಮುಖಂಡ ರಾಜೇಸಾಬ ಮುಲ್ಲಾ ತಮ್ಮ ಸಾಯಿ ಟ್ರಾವೆಲ್ಸ್ ಮೂಲಕ ಬಬಲೇಶ್ವರ, ನಂದಿಶುಗರ್, ಗಲಗಲಿ, ಬೀಳಗಿ ಭಾಗದ ಪ್ರಯಾಣಿಕರು ಬೆಂಗಳೂರಿಗೆ ತಲುಪಲು ಅನುಕೂಲ ಕಲ್ಪಿಸಿದೆ ಎಂದರು.
ಸದರಿ ಬಸ್‌ಗಳು ಸಿದ್ಧಗೊಂಡು ಮೂರು ತಿಂಗಳಾಗಿದ್ದು, ನನ್ನಿಂದಲೇ ಉದ್ಘಾಟಿಸಬೇಕೆಂಬ ಹಠದಿಂದ ಈ ವರೆಗೆ ಕಾದಿದ್ದಾನೆ. ಇದರಿಂದ ಆತನಿಗೆ ಸುಮಾರು 1 ಲಕ್ಷ ರೂ. ನಷ್ಟವಾಗಿದ್ದು, ಈ ನಷ್ಟವನ್ನು ಭರಿಸಲು ನಾನು ವೈಯಕ್ತಿಕವಾಗಿ 2 ಲಕ್ಷ ರೂ. ನೆರವು ನೀಡುತ್ತಿದ್ದೇನೆ. ಬೆಂಗಳೂರಿನಲ್ಲಿ ಜಿಂದಾಲ್ ಭೂಮಿ ಹಂಚಿಕೆ ಉಪಸಮಿತಿ ಸಭೆ ಮುಂದೂಡಿದ್ದರಿಂದ ನನಗೆ ಬರಲು ಅನುಕೂಲವಾಯಿತು. ಹೀಗಾಗಿ ಇದೀಗ ನನ್ನ ಮತಕ್ಷೇತ್ರದ ಕಾರ್ಯಕರ್ತನ ಪ್ರೀತಿಗೆ ಮಣಿದು ನಾನಿಲ್ಲಿಗೆ ಬಂದು ಬಸ್ ಸೇವೆಗೆ ಚಾಲನೆ ನೀಡಿದ್ದಾಗಿ ಹೇಳಿದರು.
ನಂದಿ ಸಕ್ಕರೆ ಕಾರ್ಖಾನೆ ಈ ಭಾಗದ ರೈತರ ಜೀವನಾಡಿ. ಈ ಕಾರ್ಖಾನೆಗೆ ಕಬ್ಬು ಸಾಗಾಣಿಕೆಗೆ ಅನುಕೂಲವಾಗಲೆಂದೆ ಕಳೆದ ಅವಧಿಯಲ್ಲಿ ಬಬಲೇಶ್ವರದಿಂದ ಗಲಗಲಿ ವರೆಗೆ 50 ಕೋಟಿ ರೂ. ವೆಚ್ಚದಲ್ಲಿ ಹೆದ್ದಾರಿ ಮಾದರಿಯಲ್ಲಿ ರಸ್ತೆ ನಿರ್ಮಿಸಿದ್ದೇನೆ. ಬಸವನ ಬಾಗೇವಾಡಿ, ವಿಜಯಪುರ, ಬೀಳಗಿ, ಜಮಖಂಡಿ ತಾಲೂಕಿನ ರೈತರಿಗೆ ಅನುಕೂಲವಾಗಲು ಕೊರ್ತಿ-ಕೋಲ್ಹಾರ, ಗಲಗಲಿ ಬ್ಯಾರೆಜ್ ಎತ್ತರಿಸುವ ಕಾರ್ಯ ಆರಂಭವಾಗಿದೆ. ಇದರಿಂದ ಬೇಸಿಗೆಯಲ್ಲಿಯೂ ಈ ಭಾಗದಲ್ಲಿ ನೀರಿನ ಕೊರತೆಯಾಗುವದಿಲ್ಲ. ವಿಜಯಪುರ ನಗರಕ್ಕೂ ಸಹ ಕುಡಿಯುವ ನೀರು ವ್ಯವಸ್ಥೆ ಪ್ರತಿದಿನವೂ ಪೂರೈಸಲು ವ್ಯವಸ್ಥೆಯಾಗುತ್ತದೆ ಎಂದರು.
ಮರೆಗುದ್ದಿಯ ಗುರುಪಾದ ಶ್ರೀಗಳು, ಅಡವಿ ಸಿದ್ದೇಶ್ವರ ಶ್ರೀಗಳು, ರಾಚಯ್ಯ ಶ್ರೀಗಳು, ರಡ್ಡಿ ಸಹಕಾರಿ ಬ್ಯಾಂಕ್ ನಿರ್ದೇಶಕ ಎಚ್.ಎಸ್. ಕೋರಡ್ಡಿ, ನಂದಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟಿಲ, ಕಬ್ಬು ಬೆಳೆಗಾರ ಮುಖಂಡ ಶಿವನಗೌಡ ಪಾಟೀಲ, ಬಸವನ ಬಾಗೇವಾಡಿ ಕ್ಷೇತ್ರದ ಅಪ್ಪುಗೌಡ ಪಾಟೀಲ ಮನಗೂಳಿ, ವಿ.ಎಸ್. ಪಾಟಿಲ, ಡಾ| ಕೆ.ಎಚ್. ಮುಂಬಾರೆಡ್ಡಿ ಇದ್ದರು.