Advertisement
ಜಲನಗರದಲ್ಲಿರುವ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮೇಯರ್ ಶ್ರೀದೇವಿ ಲೋಗಾಂವಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಕುಡಿಯುವ ನೀರಿಗಾಗಿ ನಗರದಲ್ಲಿ ಕಂಡು ಬಂದಿರುವ ಹಾಹಾಕಾರದ ಕುರಿತು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ರವೀಂದ್ರ ಲೋಣಿ ಮಾತನಾಡಿ, ಜಲಮಂಡಳಿ ಅಧಿಕಾರಿಗಳು ಸಭೆಗೆ ಸುಳ್ಳು ಮಾಹಿತಿ ನೀಡಿರುವುದು ಹಕ್ಕುಚ್ಯುತಿ ಆಗಲಿರುವ ಕಾರಣ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಾಮಾನ್ಯ ಸಭೆಗೆ ಬದಲಾಗಿ ನಗರದ ಕುಡಿಯುವ ನೀರಿನ ಸಮಸ್ಯೆ ಚರ್ಚೆಗಾಗಿಯೇ ಪ್ರತ್ಯೇಕವಾಗಿ ವಿಶೇಷ ಸಭೆ ನಡೆಸಿ ಎಂದು ರಾಜೇಶ ದೇವಗಿರಿ ಆಗ್ರಹಿಸಿದರು.
ಈ ಕುರಿತು ಸ್ಪಷ್ಟೀಕರಣ ನೀಡಿದ ಜಲಮಂಡಳಿ ಕಾರ್ಯಪಾಲಕ ಅಭಿಯಂತರ ವಸ್ತ್ರದ, ಅಮೃತ ಯೋಜನೆ ಅಡಿಯಲ್ಲಿ 174 ಕೋಟಿ ರೂ. ಮೊತ್ತದ ಕಾಮಗಾರಿಯನ್ನು ಜೈನ್ ಕಂಪನಿಗೆ ವಹಿಸಿದ್ದು, 101 ಕೋಟಿ ರೂ. ಪಾವತಿದ್ದು, ಇನ್ನೂ 9.5 ಕೋಟಿ ರೂ. ಪಾವತಿ ಬಾಕಿ ಇದೆ. ಕಳೆದ 5 ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ಈ ಕುರಿತು ಜಲಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಜೈನ್ ಕಂಪನಿಗೆ ಒತ್ತಡ ಹೇರಿದ್ದು, ಒಂದು ವಾರದಲ್ಲಿ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದಾರೆ ಎಂದು ವಿವರಿಸಿದರು.
ಸಭೆಯಲ್ಲಿ ಚರ್ಚಿಸುವ ವಿಷಯಗಳನ್ನು ತೆಗೆದು ಹಾಕುವ, ಸೇರಿಸುವ ಪರಮಾಧಿಕಾರ ಮೇಯರ್ ಅವರ ವಿವೇಚನಾಧಿಕಾರಕ್ಕೆ ಬಿಟ್ಟಿರುತ್ತದೆ ಎಂದು ಆಯುಕ್ತ ಡಾ| ಔದ್ರಾಮ ಸ್ಪಷ್ಟೀಕರಿಸಲು ಮುಂದಾಗ ಸದಸ್ಯರಾದ ಗೂಳಪ್ಪ ಶೆಟಗಾರ, ರಾಜು ಮಗಿಮಠ ಇತರರು ಅಜೆಂಡಾದಲ್ಲಿರುವ ಯಾವುದೇ ವಿಷಯ ತೆಗೆದು ಹಾಕುವ ಅಧಿಕಾರ ಮೇಯರ್‌ಗೆ ಇಲ್ಲ. ಇದೇ ಎಂದಾದರೆ ಲಿಖೀತವಾಗಿ ಬರೆದುಕೊಡಿ ಎಂದು ಆಗ್ರಹಿಸಿದರು. ನಗರದಲ್ಲಿ ಗಂಭೀರ ಸ್ವರೂಪದಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಚರ್ಚೆಗೆ ಆದ್ಯತೆ ನೀಡೋಣ ಎಂದು ರಾಜೇಶ ದೇವಗಿರಿ ಸಲಹೆ ನೀಡಿದ್ದರಿಂದ ಸದಸ್ಯರು ಸುಮ್ಮನಾದರು.
ನಗರದಲ್ಲಿ ಹೋಟೆಲ್, ಅಂಗಡಿ ಸೇರಿದಂತೆ ಉದ್ಯಮ ಪರವಾನಗಿ ಲೈಸನ್ಸ್ ಶುಲ್ಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಶುಲ್ಕವನ್ನು ಮೀರುವಂತಿದೆ ಎಂದು ಪ್ರಕಾಶ ಮಿರ್ಜಿ ಆಕ್ಷೇಪಿಸಿದಾಗ, ಆಯುಕ್ತ ಡಾ| ಔದ್ರಾಮ ಸಣ್ಣ ಪುಟ್ಟ ಅಂಗಡಿ, ಹೋಟೆಲ್ಗಳಿಗೆ ಯಾವುದೇ ರೀತಿ ಶುಲ್ಕ ಏರಿಸಿಲ್ಲ. ಆದರೆ ಸರ್ಕಾರದ ನಿರ್ದೇಶದನ್ವಯ ಭಾರೀ ಉದ್ಯಮಗಳಿಗೆ ಮಾತ್ರ ಶುಲ್ಕ ಏರಿಕೆ ಮಾಡಲಾಗಿದೆ. ಹೋಟೆಲ್, ಹತ್ತಿ, ಕಿರಾಣಿ ಸೇರಿದಂತೆ ಇತರೆ ಉದ್ಯಮಗಳಿಗೆ ಬೇರೆ-ಬೇರೆ ಶುಲ್ಕ ವಿಧಿಸಲಾಗುತ್ತಿದೆ ಎಂದು ಸ್ಪಷ್ಟೀಕರಿಸಿದರು.