Advertisement
ನಗರದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮನೆಗಳ ಸುತ್ತಲೂ ಸ್ವತ್ಛತೆ ಪರಿಸರ ನಿರ್ಮಿಸಿಕೊಳ್ಳುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಸಾರ್ವಜನಿಕರಿಗೆ ಜಾಗ್ರತೆಯ ಪಾಠ ಮಾಡುತ್ತಾರೆ. ಆದರೆ ಮಹಾನಗರ ಪಾಲಿಕೆ ಅಧಿಕಾರಿಗಳು ತನ್ನದೇ ಕಚೇರಿಯಿಂದ ಆಗಬೇಕಿರುವ ಚರಂಡಿ ನೀರಿನ ಸೋರಿಕೆ ತಡೆಯುವಲ್ಲಿ ವಿಫಲವಾಗಿದ್ದಾರೆ ಎಂದು ಸ್ಥಳೀಯರು ಕಿಡಿ ಕಾರುತ್ತಿದ್ದಾರೆ. ನಗರದ ಅಥಣಿ ರಸ್ತೆಯಲ್ಲಿರುವ ಪಡಗಾನೂರ ಕಾಲೋನಿಯಲ್ಲಿ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಒಳಚರಂಡಿ ನೀರಿನ ಬಾಧೆ ಇದೆ.
Related Articles
Advertisement
ಮತ್ತೂಂದೆಡೆ ಚರಂಡಿ ನೀರು ಸಂಗ್ರಹವಾಗುತ್ತಿರುವ ಮನೆಗಳ ಸುತ್ತಲೂ ಮುಳ್ಳುಕಂಟಿಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ವಿಷ ಜಂತುಗಳ ಹಾವಳಿಯೂ ಹೆಚ್ಚಾಗಿದೆ. ರಾತ್ರಿ ವೇಳೆ ಈ ಭಾಗದ ರಸ್ತೆಗಳಲ್ಲಿ ಸಂಚರಿಸಲು ಭಯವಾಗುತ್ತಿದೆ. ಬೀದಿ ದೀಪಗಳ ವ್ಯವಸ್ಥೆಯೂ ಸೂಕ್ತವಾಗಿ ನಿರ್ವಹಣೆ ಇಲ್ಲದೇ ಕತ್ತಲಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದೆ. ಇಷ್ಟಿದ್ದರೂ ಯಾರೋಬ್ಬರೂ ನಮ್ಮ ಕಾಲೋನಿ ಕಡೆ ತಲೆ ಹಾಕುತ್ತಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.
ವೆಟ್‌ವೆಲ್ ಚರಂಡಿ ನೀರಿನ ನಿರ್ವಹಣೆಯಲ್ಲಿನ ಲೋಪದಿಂದಾಗಿ ಆಗುತ್ತಿರುವ ಸಮಸ್ಯೆ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕಿದ್ದರೂ ತ್ವರಿತ ಕ್ರಮ ಕೈಗೊಂಡಿಲ್ಲ. ಹಲವು ಅಧಿಕಾರಿಗಳುಸ್ಥಳಕ್ಕೆ ಭೇಟಿ ನೀಡಿ ಹೋಗಿದ್ದು ಬಿಟ್ಟರೆ ಪಡಗಾನೂರ ಕಾಲೋನಿಗಳ ಮನೆಗಳ ಸುತ್ತಲೂ ಆವರಿಸಿರುವ ಚರಂಡಿ ನೀರು ಸ್ವತ್ಛಗೊಳಿಸುವಲ್ಲಿ ಗಂಭೀರ ಕ್ರಮ ಕೈಗೊಂಡಿಲ್ಲ. ವಿದ್ಯುತ್ ಇಲ್ಲದ ಸಂದರ್ಭದಲ್ಲಿ ವೆಟ್‌ವೆಲ್‌ನಲ್ಲಿ ಪಂಪ್ ಕೆಲಸ ಮಾಡದ ಕಾರಣ ಸಂಗ್ರಹವಾಗುವ ಚರಂಡಿ ನೀರು ನಿರಂತರ ಸೋರಿಕೆಯಾಗಿ ರಸ್ತೆಗಳಲ್ಲಿ ಹಾಗೂ ಪಕ್ಕದಲ್ಲಿನ ಮನೆಗಳನ್ನು ಸುತ್ತುವರಿದಿದೆ. ವೆಟ್‌ವೆಲ್ ಪಂಪ್ ನಿರಂತರ ಕೆಲಸ ನಿರ್ವಹಿಸಲು ವಿದ್ಯುತ್ ಸಂಪರ್ಕ ಕಡಿತವಾದ ಸಂದರ್ಭದಲ್ಲಿ ಜನರೇಟರ್ ಮೂಲಕ ಪಂಪ್ ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಮಹಾನಗರ ಪಾಲಿಕೆ ಆಧಿಕಾರಿಗಳನ್ನು ಸಂಪರ್ಕಿಸಿದರೆ ವೆಟ್‌ವೆಲ್ ಸೋರಿಕೆ ಕುರಿತು ತಮ್ಮ ಗಮನಕ್ಕಿದೆ. ವಿದ್ಯುತ್ ಸಮಸ್ಯೆ ಇರುವ ಕಾರಣ ವೆಟ್‌ವೆಲ್ ಪಂಪ್ ಕೆಲಸ ಮಾಡಲಾಗದೇ ಸುತ್ತಲಿನ ಮನೆಗಳಿಗೆ ಹಾಗೂ ಜಲ ಮೂಲಗಳಿಗೆ ನುಗ್ಗುತ್ತಿರುವುದನ್ನು ಅವಲೋಕಿಸಿದೆ. ಹೀಗಾಗಿ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.