Advertisement

2ರಂದು ಡಾ|ಫ‌.ಗು. ಹಳಕಟ್ಟಿ ಜಯಂತಿ

02:55 PM Jun 29, 2019 | Naveen |

ವಿಜಯಪುರ: ವಚನ ಪಿತಾಮಹ ಡಾ| ಫ‌.ಗು. ಹಳಕಟ್ಟಿ ಅವರು ಸ್ಥಾಪಿಸಿರುವ ಶತಮಾನ ಕಂಡಿರುವ ಸಿದ್ದೇಶ್ವರ ಸಹಕಾರಿ ಬ್ಯಾಂಕ್‌ನಿಂದ ಜು. 2ರಂದು ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ ಅವರ 139ನೇ ಜಯಂತಿ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ದೇಶ್ವರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಹರ್ಷಗೌಡ ಪಾಟೀಲ ಹೇಳಿದರು.

Advertisement

ಶುಕ್ರವಾರ ಬ್ಯಾಂಕ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಗರದ ಶಿವಾನುಭವ ಮಂಟಪದಲ್ಲಿ ಡಾ| ಫ.ಗು. ಹಳಕಟ್ಟಿ ಜಯಂತಿ ಸಮಾರಂಭ ಜರುಗಲಿದೆ. ಚಿತ್ತರಗಿಯ ಡಾ| ಬಸವರಾಜ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ಗೌರವ ಸಲಹೆಗಾರ ಡಾ| ಗೊ.ರೂ. ಚನ್ನಬಸಪ್ಪ ಆಗಮಿಸಲಿದ್ದು, ಡಾ| ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ| ಎಂ.ಎಸ್‌. ಮದಭಾವಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಶರಣ ಸಾಹಿತ್ಯ ಸಂಶೋಧಕ ಬೆಂಗಳೂರಿನ ಅಶೋಕ ದೊಮ್ಮಲೂರು ಡಾ| ಫ.ಗು. ಹಳಕಟ್ಟಿ ಅವರ ಸಾಮಾಜಿಕ ಕಾರ್ಯಗಳು ಕುರಿತು ಉಪನ್ಯಾಸ ಮಂಡಿಸಲಿದ್ದಾರೆ ಎಂದು ವಿವರಿಸಿದರು.

ಬರದ ನಾಡು ವಿಜಯಪುರ ಜಿಲ್ಲೆಗೆ ವಚನ ಪಿತಾಮಹ ಡಾ| ಫ‌.ಗು. ಹಳಕಟ್ಟಿ ಅವರ ಕೊಡುಗೆ ಅನನ್ಯ, ಅನುಪಮ. ವಚನ ಸಾಹಿತ್ಯಕ್ಕೆ ಮಾತ್ರವಲ್ಲ ಬ್ಯಾಂಕ್‌ ಸಂಸ್ಥಾಪಕರೂ ಆಗಿರುವ ಕಾರಣ ರಾವ್‌ ಬಹಾದ್ದೂರ್‌ ಡಾ| ಫ.ಗು. ಹಳಕಟ್ಟಿ ಅವರ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.

ವಚನ ಪಿತಾಮಹ ಡಾ| ಹಳಕಟ್ಟಿ ಅವರು ಸಿದ್ದೇಶ್ವರ ಬ್ಯಾಂಕ್‌ ಸ್ಥಾಪಿಸುವ ಮೂಲಕ ಈ ಭಾಗವನ್ನು ಆರ್ಥಿಕವಾಗಿ ಮೇಲೆತ್ತಲು ಅಪರಿಮಿತ ಕೊಡುಗೆ ನೀಡಿದ್ದಾರೆ. ನಾಡು ಕಟ್ಟುವಲ್ಲಿ ಶತಮಾನದ ಹಿಂದೆಯೇ ಕೈಗೊಂಡ ಹಲವು ಬಗೆಯ ಪರಿಶ್ರಮದ ಕುರಿತು ಇಂದಿನ ಪೀಳಿಗೆಗೆ ತಿಳಿಸಿಕೊಡುವ ಅಗತ್ಯವಿದೆ. ಇದಕ್ಕಾಗಿ ವಚನ ಪಿತಾಮಹನ ಬಹುಮುಖ ವ್ಯಕ್ತಿತ್ವದ ಬಗ್ಗೆ ಚರ್ಚೆ, ಲೇಖನ ಸ್ಪರ್ಧೆ, ವಿಚಾರ ಸಂಕಿರಣ ಸೇರಿದಂತೆ ಹಲವು ಬಗೆಯ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಉದಾತ್ತ ಸೇವೆ, ಧ್ಯೇಯ ಹಾಗೂ ಚಿಂತನೆಗಳನ್ನು ಮನವರಿಕೆ ಮಾಡಿಕೊಡಲು ಕಾರ್ಯಕ್ರಮ ಯೋಜಿಸಲಾಗಿದೆ ಎಂದರು.

ಡಾ| ಫ.ಗು. ಹಳಕಟ್ಟಿ ಅವರು 1912ರಲ್ಲಿ 2,500 ರೂ. ಷೇರು ಬಂಡವಾಳದೊಂದಿಗೆ ಸ್ಥಾಪಿಸಿರುವ ನಮ್ಮ ಸಿದ್ದೇಶ್ವರ ಬ್ಯಾಂಕ್‌ ಇಂದು ಹೆಮ್ಮರವಾಗಿ ಬೆಳೆದಿದೆ. ಜನರಿಗೆ ಆರ್ಥಿಕ ಸಹಾಯ ಕಲ್ಪಿಸಬೇಕು ಎಂಬ ಡಾ| ಹಳಕಟ್ಟಿ ಅವರ ನಿಸ್ವಾರ್ಥ ಸೇವಾ ಮನೋಭಾವದಿಂದ ಅವರ ಆದರ್ಶಗಳ ಹಾದಿಯಲ್ಲಿ ನಮ್ಮ ಬ್ಯಾಂಕ್‌ ಸಾಗುತ್ತಿದೆ ಎಂದರು.

Advertisement

ಇದಕ್ಕಾಗಿ ಶರಣ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಡಾ| ಫ‌.ಗು. ಹಳಕಟ್ಟಿ ಅವರ ಚಿಂತನೆಗಳನ್ನು ನಾಡಿನೆಲ್ಲೆಡೆ ನಿರಂತರ ಪಸರಿಸಲು ಪ್ರತಿ ಜಿಲ್ಲೆ-ತಾಲೂಕಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ದತ್ತಿ ನಿಧಿ ಸ್ಥಾಪಿಸಲು, ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಪೀಠ ಸ್ಥಾಪನೆಯಂಥ ಹಲವು ರಚನಾತ್ಮಕ ಕಾರ್ಯಕ್ರಮಗಳನ್ನು ಬರುವ ವರ್ಷದಿಂದ ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಇದಲ್ಲದೇ ಶಾಲಾ-ಕಾಲೇಜು ಪಠ್ಯದಲ್ಲಿ ಡಾ| ಹಳಕಟ್ಟಿ ಅವರ ನಿಸ್ವಾರ್ಥ ಸೇವೆ ಕುರಿತು ಪಠ್ಯ ಅಳವಡಿಸುವಂತೆ ಪ್ರಯತ್ನ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಡಾ| ಫ‌.ಗು. ಹಳಕಟ್ಟಿ ಅವರ ಹೆಸರನ್ನು ಇನ್ನೂ ಅವಿಸ್ಮರಣೀಯವಾಗಿ ಮಾಡಲು ಅವರಿಂದಲೇ ಸ್ಥಾಪಿತವಾಗಿ ಶತಮಾನ ಕಂಡಿರುವ ಬಿಎಲ್ಡಿಇ ಸಂಸ್ಥೆ ಹಾಗೂ ಸಿದ್ದೇಶ್ವರ ಸಂಸ್ಥೆಗಳ ಹಾಲಿ ಮುಖ್ಯಸ್ಥರು ಹಾಗೂ ಅಡಳಿತ ಮಂಡಳಿ ಜೊತೆ ಚರ್ಚಿಸಿ ಬೃಹತ್‌ ದತ್ತಿನಿಧಿ ಸ್ಥಾಪನೆ ಮುಂದಾಗಲಿದ್ದೇವೆ ಎಂದು ವಿವರಿಸಿದರು.

ಸಿದ್ದೇಶ್ವರ ಬ್ಯಾಂಕ್‌ ಉಪಾಧ್ಯಕ್ಷ ರಮೇಶ ಬಿದನೂರ, ನಿರ್ದೇಶಕರಾದ ಶಾಂತಪ್ಪಣ್ಣ ಜತ್ತಿ, ರವೀಂದ್ರ ಬಿಜ್ಜರಗಿ ಇದ್ದರು.

ಡಾ| ಫ.ಗು. ಹಳಕಟ್ಟಿ ಅವರು 1912ರಲ್ಲಿ 2,500 ರೂ. ಷೇರು ಬಂಡವಾಳದೊಂದಿಗೆ ಸ್ಥಾಪಿಸಿರುವ ನಮ್ಮ ಸಿದ್ದೇಶ್ವರ ಬ್ಯಾಂಕ್‌ ಇಂದು ಹೆಮ್ಮರವಾಗಿ ಬೆಳೆದಿದ್ದು ಅವರ ಆದರ್ಶಗಳ ಹಾದಿಯಲ್ಲಿ ನಮ್ಮ ಬ್ಯಾಂಕ್‌ ಸಾಗುತ್ತಿದೆ.
ಹರ್ಷಗೌಡ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next