Advertisement

ಅಧಿಕಾರಿಗಳ ನಿರ್ಲಕ್ಷ್ಯ-ಆದಾಯಕ್ಕೆ ಕೊಕ್ಕೆ

12:19 PM Sep 11, 2019 | Team Udayavani |

ಜಿ.ಎಸ್‌. ಕಮತರ
ವಿಜಯಪುರ:
ಐತಿಹಾಸಿಕ ಸಿರಿಯನ್ನು ಮಡಿಲಲ್ಲಿ ಇರಿಸಿಕೊಂಡಿದ್ದರೂ ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ಪ್ರಚಾರದ ಕೊರತೆ ಕಾರಣ ಪ್ರವಾಸಿಗರಿಂದ ದೂರವೇ ಇದೆ. ಜಿಲ್ಲೆಗೆ ಭೇಟಿ ನೀಡಿದ ಪ್ರವಾಸಿಗರು ವೀಕ್ಷಿಸಿದ ವಿವಿಧ ಸ್ಥಳಗಳೇ ಇದಕ್ಕೆ ಸಾಕ್ಷಿ ನೀಡುತ್ತಿದ್ದು, ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆಗಳ ಸಮನ್ವಯದ ಕೊರತೆಯಿಂದ ಪ್ರಚಾರ ಇಲ್ಲದೇ ಗುಮ್ಮಟದ ಮುಂಭಾಗದಲ್ಲೇ ಇರುವ ಶತಮಾನ ಕಂಡಿರುವ ಐತಿಹಾಸಿಕ ವಸ್ತು ಸಂಗ್ರಹಾಲಯ ಅನಾಥವಾದಂತೆ ಭಾಸವಾಗುತ್ತಿದೆ. ಕಳೆದ ಒಂದು ದಶಕದ ಪ್ರವಾಸಿಗರನ್ನೇ ಗಣಗೆನೆಗೆ ತೆಗೆದುಕೊಂಡರೂ ಕೋಟಿ ಜನರು ಗೋಲಗುಮ್ಮಟ ವೀಕ್ಷಿಸಿದರೆ, 21.78 ಲಕ್ಷ ಜನರು ಮಾತ್ರ ನಕ್ಕರಖಾನಾ ಸ್ಮಾರಕದಲ್ಲಿರುವ ವಸ್ತು ಸಂಗ್ರಹಾಲಯ ವೀಕ್ಷಿಸಿರುವುದೇ ಈ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ.

Advertisement

ವಿಶ್ವದಲ್ಲಿ ಒಂದೇ ಸ್ಮಾರಕದಲ್ಲಿ ಪಿಸುಗುಟ್ಟುವ, ಧ್ವನಿ ತರಂಗ ಹಾಗೂ ಸಪ್ತ ಪ್ರತಿಧ್ವನಿ ಹೊಮ್ಮಿಸುವ ಐತಿಹಾಸಿಕ ಸ್ಮಾರಕ ಎಂಬ ಹೆಮ್ಮೆ ವಿಜಯಪುರದ ಗೋಲಗುಮ್ಮಟ ಸ್ಮಾರಕಕ್ಕೆ ಇದೆ. ಎತ್ತರ, ವಿಸ್ತಾರ, ವಿನ್ಯಾಸದ ಜೊತೆಗೆ ವೈವಿಧ್ಯಮಯ ತಾಂತ್ರಿಕತೆ ಕಾರಣಕ್ಕೆ ವಿಶ್ವದ ವಾಸ್ತು ವಿನ್ಯಾಸಗಾರರು, ಇತಿಹಾಸ ಸಂಶೋಧಕರು, ತಜ್ಞರು, ಕುತೂಹಲಿಗಳು ಸೇರಿದಂತೆ ವಿಶ್ವದ ಎಲ್ಲ ಮನಸ್ಥಿತಿ ಜನರನ್ನು ಆಕರ್ಷಿಸುತ್ತಿರುವ ಗೋಲಗುಮ್ಮಟಕ್ಕೆ 2008ರಿಂದ 2019ರ ಅರ್ಥಿಕ ವರ್ಷದಲ್ಲಿ ಭೇಟಿ ನೀಡಿದ ಭಾರತೀಯ ಪ್ರವಾಸಿಗರ ಸಂಖ್ಯೆ 1,12,57,785. ಇದೇ ಸಮಯದಲ್ಲಿ ಗುಮ್ಮಟವನ್ನು ವೀಕ್ಷಿಸಿದವರ ಸಂಖ್ಯೆ ಕೇವಲ 30,968 ಮಾತ್ರ.

ಕೇವಲ ದೇಶಿ ಪ್ರವಾಸಿಗರು ಗೋಲಗುಮ್ಮಟ ವೀಕ್ಷಣೆಯಿಂದಲೇ ಪುರಾತತ್ವ ಇಲಾಖೆಗೆ ಕಳೆದ ಒಂದು ದಶಕದಿಂದ ಸುಮಾರು 5.62 ಕೋಟಿ ರೂ. ಆದಾಯ ಬಂದಿದೆ ಎಂಬುದು ಗಮನೀಯ. 2016 ಏಪ್ರಿಲ್ಗೆ ಮುನ್ನ ಗೋಲಗುಮ್ಮಟ ವೀಕ್ಷಣೆಗೆ ದೇಶಿ ಪ್ರವಾಸಿಗರಿಗೆ ಪ್ರವೇಶ ಶುಲ್ಕ 5 ರೂ. ಇದ್ದರೆ, ವಿದೇಶಿಗರಿಗೆ 100 ರೂ. ಇತ್ತು. 2016 ಏಪ್ರಿಲ್ ನಂತರ ದೇಶಿ ಪ್ರವಾಸಿಗರ ಪ್ರವೇಶಕ್ಕೆ 15 ರೂ. ಹಾಗೂ ವಿದೇಶಿಗರಿಗೆ 200 ರೂ. ಹಾಗೂ 8-8-2018ರಿಂದ ದೇಶಿ ಪ್ರವಾಸಿಗರಿಗೆ 25 ರೂ. (ಸ್ಪೈಪ್‌ ಕಾರ್ಡ್‌ ಮೂಲಕ ಪಾವತಿಸಿದರೆ 20 ರೂ.) ಇದ್ದು, ವಿದೇಶಿಗರಿಗೆ 300 ರೂ. ಶುಲ್ಕ ಮಾಡಲಾಗಿದೆ.

ಇನ್ನೂ ಅಚ್ಚರಿ ಸಂಗತಿ ಎಂದರೆ ಗೋಲಗುಮ್ಮಟ ಆವರಣಕ್ಕೆ ಹೋಗುವ ಮಾರ್ಗದಲ್ಲಿ ನಕ್ಕರಖಾನಾ ಎಂಬ ವಿಶಿಷ್ಟ ಸ್ಮಾರಕವನ್ನು ದಾಟಿಕೊಂಡೇ ಹೋದರೂ ಈ ಸ್ಮಾರಕದಲ್ಲಿ ಏನಿದೆ ಎಂಬುದನ್ನು ತಿರುಗಿಯೂ ನೋಡುವುದಿಲ್ಲ. ಗುಮ್ಮಟ ವೀಕ್ಷಿಸಿ ಮರಳುವಾಗಲೂ ನಕ್ಕರಖಾನಾ ಸುತ್ತಿ ಆದರ ಮುಂದೆಯೇ ಬರಬೇಕು. ಪ್ರವೇಶ ದ್ವಾರದ ಮುಂದೆ ಪ್ರವಾಸಿಗರು ನಿಂತು ಫೋಟೋ ತೆಗೆಸಿಕೊಳ್ಳುವಾಗ ಗುಮ್ಮಟದ ಮುಂಭಾಗದಲ್ಲಿ ಈ ವಸ್ತು ಸಂಗ್ರಹಾಲಯದ ನಕ್ಕರಖಾನಾ ಸ್ಮಾರಕವೇ ಕಾಣುತ್ತದೆ.

1892ರಲ್ಲಿ ಸ್ಥಾಪನೆಯಾಗಿರುವ ಈ ಐತಿಹಾಸಿಕ ವಸ್ತು ಸಂಗ್ರಹಾಲಯ ಭಾರತದ ಪ್ರಾದೇಶಿಕ ವಸ್ತು ಸಂಗ್ರಹಾಲಯಗಳಲ್ಲೇ ಅತಿ ಪ್ರಾಚೀನ ಎಂಬ ಹಿರಿಮೆ ಸಂಪಾದಿಸಿದೆ. ವಿಜಯಪುರ-ವಿಜಯನಗರ ಸಾಮ್ರಾಜ್ಯಗಳ ಇತಿಹಾಸದ ಮೇಲೆ ಹಾಗೂ ವಿಜಯಪುರ ಜಿಲ್ಲೆಯನ್ನು ಆಳಿದ ವಿವಿಧ ರಾಜರು, ಆಸ್ತಿತ್ವದಲ್ಲಿ ಇದ್ದ ಧರ್ಮ-ಸಂಸ್ಕೃತಿ, ಭಾಷೆ, ಪರಂಪರೆಗಳ ಮೇಲೆ ಬೆಳಕು ಚೆಲ್ಲುವ ಅಪರೂಪದ ವಸ್ತುಗಳು ಈ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಲ್ಪಟ್ಟಿವೆ. ಆದರೆ ಪ್ರವಾಸಿಗರಿಂದ ದೂರ ಇವೆ.

Advertisement

ಈ ಗೋಲಗುಮ್ಮಟ ವೀಕ್ಷಿಸುವ ಬಹುತೇಕ ಪ್ರವಾಸಿಗರಿಗೆ ಈ ವಸ್ತು ಸಂಗ್ರಹಾಲಯ ಕುರಿತು ಮಾಹಿತಿ ಇಲ್ಲದೇ ಸಂರಕ್ಷಿತ ವಸ್ತುಗಳು ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಇದ್ದರೂ ಸಂಗ್ರಹಾಲಯದಲ್ಲಿ ಬಂಧಿಯಾಗಿ ಪ್ರಚಾರವಿಲ್ಲದೇ ಅನಾಥವಾಗಿ ಕುಳಿತಿವೆ. ಪರಿಣಾಮ 2013-14ರಿಂದ 19 ಮಾರ್ಚ್‌ವರೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಕೇವಲ 21,78,750 ಮಾತ್ರ. ದೇಶಿ-ವಿದೇಶಿ ಪ್ರವಾಸಿಗರಿಗೆ ಪ್ರವೇಶ ಶುಲ್ಕ ಕೇವಲ 5. ರೂ. ಇದ್ದರೂ ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫ‌ಲವಾಗಿದೆ. ಕಳೆದ 6 ವರ್ಷಗಳಲ್ಲಿ ವಸ್ತು ಸಂಗ್ರಹಾಲಯ ವೀಕ್ಷಣೆಯಿಂದಲೇ ಪುರಾತ್ವ ಇಲಾಖೆಗೆ 1.08 ಕೋಟಿ ರೂ. ಆದಾಯ ಬಂದಿದೆ. ಒಂದೊಮ್ಮೆ ಈ ಸ್ಮಾರಕದ ಮಹತ್ವದ ಕುರಿತು ಸೂಕ್ತ ಪ್ರಚಾರ ನಡೆಸಿದ್ದರೆ ಪುರಾತತ್ವ ಇಲಾಖೆಗೆ ಐದು ಪಟ್ಟು ಆದಾಯ ಬರುತ್ತಿತ್ತು.

ಅಧಿಕಾರಿಗಳು ಮಾಡುತ್ತಿರುವ ತಪ್ಪಿನಿಂದಾಗಿ ಕೋಟಿ ಕೋಟಿ ರೂ. ಆದಾಯಕ್ಕೆ ಕೊಕ್ಕೆ ಬೀಳುತ್ತಿದೆ. ಅಚ್ಚರಿ ಸಂಗತಿ ಎಂದರೆ ಕರ್ನಾಟಕದ ಪ್ರವಾಸೋದ್ಯಮ ಇಲಾಖೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಪ್ರವಾಸಿ ಮಾಹಿತಿ ಕಿರು ಕೈಪಿಡಿಯಲ್ಲಿ ವಸ್ತು ಸಂಗ್ರಹಾಲಯದ ಕುರಿತು ಪ್ರಸ್ತಾಪವೇ ಇಲ್ಲ ಎಂಬುದು ನಕ್ಕರಖಾನಾ ಅನಾಮಧೇಯ ಸ್ಥಿತಿಯಲ್ಲಿದೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ.

ಇನ್ನು ವಿಜಯಪುರ ನಗರದಲ್ಲಿರುವ ಪ್ರವೇಶ ಶುಲ್ಕ ಇರುವ ಇನ್ನೊಂದು ಐತಿಹಾಸಿಕ ಸ್ಮಾರಕ ಇಬ್ರಾಹೀಂ ರೋಜಾ. ಈ ಸ್ಮಾರಕಕ್ಕೆ 2008-09 ರಿಂದ 2019 ಆರ್ಥಿಕ ವರ್ಷದ ಕೊನೆವರೆಗೆ 24,29,743 ಪ್ರವಾಸಿಗರು ಮಾತ್ರ ಭೇಟಿ ನೀಡಿದ್ದಾರೆ. ವಿದೇಶಿಗರ ಸಂಖ್ಯೆ ಕೇವಲ 23,850. ಕೇವಲ 5 ರೂ. ಪ್ರವೇಶ ಶುಲ್ಕ ಇರುವ ಈ ಸ್ಮಾರಕ ವೀಕ್ಷಣೆಯಿಂದ ಸಂಗ್ರಹವಾಗಿರುವ ಆದಾಯ 1,21,48,715 ರೂ. ಮಾತ್ರ. ಒಂದೊಮ್ಮೆ ಗೋಲಗುಮ್ಮಟ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಕರಿತಾಜ್‌ ಎಂದೇ ಕರೆಸಿಕೊಳ್ಳುವ ಹಾಗೂ ಅಪರೂಪದ ಧ್ವನಿ ತರಂಗಗಳ ಮೂಲಕ ಇಬ್ರಾಹಿಂ ರೋಜಾ ಮಸೀದಿಯಕ್ಕೂ ಕೂಗುವ ಆಜಾನ್‌ ಈ ಸ್ಮಾರಕ ನಿರ್ಮಿಸಿದ ಎರಡನೇ ಇಬ್ರಾಹೀಂ ಆದಿಲ್ ಶಹಾನ ವಾಸ್ತು ತಾಂತ್ರಿಕತೆ ಕುರಿತು ಸೂಕ್ತ ಪ್ರಚಾರ ಮಾಡಿದಲ್ಲಿ ಇಲ್ಲಿಂದಲೂ ಹತ್ತಾರು ಕೋಟಿ ರೂ. ಆದಾಯ ಸರ್ಕಾರಕ್ಕೆ ಬರುತ್ತಿತ್ತು. ಆದರೆ ಅಧಿಕಾರಿಗಳು ಈ ವಿಷಯದಲ್ಲಿ ಪ್ರಚಾರ ನೀಡದೇ ಕರ್ತವ್ಯ ಪ್ರಜ್ಞೆಯಿಂದ ದೂರ ಸರಿಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಪ್ರವೇಶ ಶುಲ್ಕ ಇರುವ ಈ ಮೂರು ಸ್ಮಾರಕದ ಕಥೆ ಇದಾದರೆ ಪ್ರವೇಶ ಶುಲ್ಕವೇ ಇಲ್ಲದೇ ಉಚಿತವಾಗಿ ವೀಕ್ಷಣೆಗೆ ಅವಕಾಶ ಇರುವ ಬಾರಾಕಮಾನ್‌, ಗಗನಮಹಲ್, ತೊರವಿ ಬಳಿ ಇರುವ ನವಸರಸಪುರ ಬಳಿ ಸಂಗೀತ ಮಹಲ್, ಕುಮಟಗಿ ಬಳಿ ಇರುವ ಆದಿಲ್ ಶಾಹಿ ಅರಸರ ಅಪರೂಪದ ಜಲ-ವಾಸ್ತು ತಂತ್ರಜ್ಞಾನ ಬೇಸಿಗೆ ಆರಮನೆ, ನಗರದ ಹೊರ ವಲಯದಲ್ಲಿರುವ ಸಹಸ್ರಪಾಣಿ ಮಸೀದಿ, ನಗರದಲ್ಲಿರುವ ಶತಮಾನ ಕಂಡಿರುವ ಸಿದ್ದೇಶ್ವರ ದೇವಸ್ಥಾನ ಮಾತ್ರವಲ್ಲ ಕಳೆದ 15 ವರ್ಷಗಳ ಹಿಂದೆ ಜನ್ಮ ತಳೆದಿರುವ ನಗರದ ಹೊರ ವಲಯದಲ್ಲಿರುವ ಖಾಸಗಿ ಒಡೆತನದ ಶಿವಗಿರಿಯ ಶಿವಮೂರ್ತಿ ಭಾವಚಿತ್ರಕ್ಕೆ ಅವಕಾಶ ನೀಡಿ, ಪ್ರಚಾರ ನೀಡಲಾಗಿದೆ. ಆದರೆ ಪುರಾತತ್ವ ಇಲಾಖೆಯ ಐತಿಹಾಸಿಕ ವಸ್ತು ಸಂಗ್ರಹಾಲಯ ಇರುವ ನಕ್ಕರಖಾನಾ ಕುರಿತು ಪ್ರಸ್ತಾಪವೇ ಇಲ್ಲ ಎಂಬುದು ಪ್ರವಾಸೋದ್ಯಮ ಇಲಾಖೆಯ ನಡೆ ಏನಿದೆ ಎಂಬುದನ್ನು ಮನದಟ್ಟು ಮಾಡಿಸುತ್ತದೆ.

ಇಷ್ಟೇ ಅಲ್ಲದೇ ಕೆ.ಬಿ. ಶಿವಕುಮಾರ ಅವರು ಜಿಲ್ಲಾಧಿಕಾರಿ ಆಗಿದ್ದ ಸಂದರ್ಭದಲ್ಲಿ ಮುದ್ರಿತವಾಗಿರುವ ಈ ಪ್ರವಾಸಿ ಮಾಹಿತಿಯ ಕಿರು ಕೈಪಿಡಿಯಲ್ಲಿ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ನಿರ್ಮಿಸಿರುವ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ಹಾಗೂ ವಿವಿಧ ಉದ್ಯಾನವನಗಳ ಕುರಿತು ಸಚಿತ್ರ ಮಾಹಿತಿ ನೀಡಲಾಗಿದೆ. ಆದರೆ 12ನೇ ಶತಮಾನದ ಸಾಮಾಜಿಕ ಕ್ರಾಂತಿ ಪುರುಷ ಬಸವೇಶ್ವರ ಜನ್ಮಸ್ಥಳದಲ್ಲಿ ನಿರ್ಮಾಣಗೊಂಡಿರುವ ಸ್ಮಾರಕದ ಕುರಿತು ಕನಿಷ್ಠ ಉಲ್ಲೇಖವೂ ಇಲ್ಲ. ದೇಶ-ವಿದೇಶಿ ಪ್ರವಾಸಿಗರನ್ನು ಸೆಳೆಯುವ ಪ್ರವಾಸೋದ್ಯಮ ಪ್ರಚಾರ ವ್ಯವಸ್ಥೆಯಲ್ಲಿ ಸೋಲುತ್ತಿವೆ. ಕಾರಣ ಈಚಿನ ವರ್ಷಗಳಲ್ಲಿ ಜಿಲ್ಲೆಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿರುವುದು ಎಚ್ಚರಿಕೆ ಗಂಟೆ ಬಾರಿಸುತ್ತಿದೆ.

ಇನ್ನು ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯ ಮಾತ್ರವಲ್ಲ ಶುಲ್ಕ ಇರುವ ಉದ್ಯಾನವನಗಳು ಹಾಗೂ ಸಂಗೀತ ವರ್ಣರಂಜಿತ ಕಾರಂಜಿಗಳ ವೀಕ್ಷಣೆಗೆ ಕೇವಲ 5 ವರ್ಷಗಳಲ್ಲಿ 39,33,399 ಪ್ರವಾಸಿಗರು ವೀಕ್ಷಿಸಿದ್ದರೆ, ಪ್ರಸಕ್ತ ವರ್ಷದ ಈ ವರೆಗೆ 3.66 ಲಕ್ಷ ಜನರು ಆಲಮಟ್ಟಿಯ ಶಾಸ್ತ್ರಿ ಜಲಾಶಯಕ್ಕೆ ಭೇಟಿ ನೀಡಿದ್ದಾರೆ. ಪ್ರವಾಸೋದ್ಯಮ ಇಲಾಖೆ ಕಿರು ಕೈಪಿಡಿ ಹಾಗೂ ಮಾಧ್ಯಮಗಳಲ್ಲಿನ ಪ್ರಚಾರದ ಫ‌ಲವಾಗಿ ಇಷ್ಟೆಲ್ಲ ಸಾಧ್ಯವಾಗಿದೆ.

ಪ್ರಚಾರದ ಕೊರತೆ, ಸೌಲಭ್ಯಗಳ ಅಭಾವಗಳಂಥ ಏನೆಲ್ಲ ಇಲ್ಲಗಳ ಮಧ್ಯೆಯೂ ಕೋಟಿ ಕೋಟಿ ಪ್ರವಾಸಿಗರು ವಿಜಯಪುರ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಜಿಲ್ಲೆ ಪ್ರವಾಸೋದ್ಯಮ ಅವಕಾಶ ಇರುವ ಸರ್ಕಾರಿ ಒಡೆತನದ ಸ್ಮಾರಕಗಳು, ಉದ್ಯಾನವನಗಳು, ನದಿ-ಜಲಾಶಯಗಳ ಕುರಿತು ಸೂಕ್ತ ಪ್ರಚಾರ ನೀಡಿದಲ್ಲಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಇನ್ನೂ ವೇಗ ಪಡೆಯಲಿದೆ ಎಂಬುದು ಸ್ಪಷ್ಟವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next