Advertisement

ನಕಲಿ ಪತ್ರಕರ್ತರ ವಿರುದ್ಧ ಕ್ರಮ

04:38 PM Dec 07, 2019 | Naveen |

ವಿಜಯಪುರ: ಸುಳ್ಳು ಮಾಹಿತಿ ಅಥವಾ ನೈಜತೆ ತಿರುಚಿ ಸುದ್ದಿ ಬಿತ್ತರಿಸುವ ನಕಲಿ ಪತ್ರಕರ್ತರು ಹಾಗೂ ಅನುಮತಿ ಇಲ್ಲದ ಯುಟ್ಯೂಬ್‌ ಚಾನೆಲ್‌ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

Advertisement

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್‌ (ರೆಗ್ಯೂಲೇಶನ್‌) ಆ್ಯಕ್ಟ್ 1995 ಅನ್ವಯ ಮೇಲ್ವಿಚಾರಣೆಯ ಜಿಲ್ಲಾಮಟ್ಟದ ನಿರ್ವಹಣಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಕಲಿ ಪತ್ರಕರ್ತರು, ಯುಟ್ಯೂಬ್‌ ಚಾನೆಲ್‌ ಗಳ ಮೇಲೆ ನಿಗಾವಹಿಸಬೇಕು. ಕೆಲವು ನಕಲಿ ಪತ್ರಕರ್ತರು ಸರ್ಕಾರಿ ಸಭೆ-ಸಮಾರಂಭ ಹಾಗೂ ಸಚಿವರು ಸೇರಿದಂತೆ ಗಣ್ಯರ ಪತ್ರಿಕಾಗೋಷ್ಠಿಗೆ ಆಗಮಿಸುವುದರಿಂದ ಸರ್ಕಾರಿ ಕೆಲಸಕ್ಕೆ ಅಡೆ-ತಡೆ ಉಂಟಾಗುತ್ತಿದೆ. ನೈಜ ಪತ್ರಕರ್ತರಿಗೂ ತೊಂದರೆಯಾಗುತ್ತಿದೆ. ಹೀಗಾಗಿ ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ವಿವರಿಸಿದರು.

ನಕಲಿ ಪತ್ರಕರ್ತರ ಹಾವಳಿ ತಪ್ಪಿಸಲು ಅಧಿಕೃತ ಪತ್ರಕರ್ತರಿಗೆ ಬಾರ್‌ಕೋಡ್‌ ನಮೂದಿಸಿದ ಐಡಿ ಕಾರ್ಡ್‌ ನೀಡಲು ಉದ್ದೇಶ ಹೊಂದಲಾಗಿದ್ದು, ಅಧಿಕೃತ ಪತ್ರಕರ್ತರ ಪಟ್ಟಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರು ಒದಗಿಸಬೇಕು. ಅದರಂತೆ ಅಧಿಕೃತ ಪತ್ರಕರ್ತರನ್ನು ಹೊರತುಪಡಿಸಿ ನಕಲಿ ಪತ್ರಕರ್ತರು ಸರ್ಕಾರಿ ಸಭೆ-ಸಮಾರಂಭಗಳಿಗೆ ಹಾಜರಾಗಿ ಸುದ್ದಿ ಪ್ರಕಟಿಸುವುದು ಗಮನಕ್ಕೆ ಬಂದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ವಿವಿಧ ಘಟನೆಗಳ ನೈಜತೆ ಅರಿಯದೇ ಸುದ್ದಿಗಳು ಬಿತ್ತರಿಸುವುದರಿಂದ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡುವುದರಿಂದ ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡದಿರಲು ಇಂದು ನಡೆದ ಸಭೆಯಲ್ಲಿ ನಿರ್ಧರಿಸಲಾಗಿದ್ದು, ತಪ್ಪಿತಸ್ಥ ನಕಲಿ ಪತ್ರಕರ್ತರ ವಿರುದ್ಧ ಪ್ರಕರಣ ದಾಖಲೆಗೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪತ್ರಕರ್ತರೆನ್ನುವ ನಕಲಿ ಪತ್ರಕರ್ತರಿಂದ ಯಾವುದೇ ಕಿರುಕುಳ ನೀಡುವ, ಹಣ ವಸೂಲಿಯಂಥ ಚಟುವಟಿಕೆ ಕಂಡು ಬಂದಲ್ಲಿ ತಕ್ಷಣ ಎಫ್‌ಐಆರ್‌ ದಾಖಲಿಸಲಾಗುತ್ತದೆ. ಈಗಾಗಲೇ ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್‌ ಆ್ಯಕ್ಟ್ 1995ರ ಅಡಿಯಲ್ಲಿ ಮೇಲ್ವಿಚಾರಣೆಗೆ ಜಿಲ್ಲಾಮಟ್ಟದ ಕೇಬಲ್‌ ಟೆಲಿವಿಷನ್‌ ನಿರ್ವಹಣಾ ಸಮಿತಿಯನ್ನು ಪುನರ್‌ ರಚಿಸಲಾಗಿದೆ.

Advertisement

ಅಲ್ಲದೇ ಜಿಲ್ಲೆಯಲ್ಲಿ ನೋಂದಾಯಿತ ಕೇಬಲ್‌ ಆಪರೇಟರ್‌ಗಳು ಗ್ರಾಹಕರಿಗೆ ಸೇವೆ ನೀಡುವಲ್ಲಿ ನಿಗದಿತ ಶುಲ್ಕದಲ್ಲೇ ಗುಣಮಟ್ಟದ ಸೇವೆ ನೀಡಬೇಕು ಎಂದು ಸೂಚಿಸಿದರು ಕೇಬಲ್‌ ಕಾಯ್ದೆ ವ್ಯಾಪ್ತಿಯ ಕಾರ್ಯಕ್ರಮ ಸಂಹಿತೆ ಹಾಗೂ ಜಾಹೀರಾತು ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ನಿಗಾ ಇಡಲಿದೆ. ಧರ್ಮ, ಜಾತಿ, ಜನಾಂಗ, ಭಾಷೆ ಅಥವಾ ಸಮುದಾಯಗಳ ನಡುವೆ ದ್ವೇಷ ಭಾವನೆ ಉಂಟು ಮಾಡುವ ಕಾರ್ಯಕ್ರಮ ಪ್ರಸಾರ ನಿಷೇಧಿಸಿದ್ದು, ನಿರ್ಬಂಧಕ್ಕೆ ವಿರುದ್ಧ ನಡೆಯುವ ಕೇಬಲ್‌ ಚಾನೆಲ್‌ ಮೆಲೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಯಿತು.

ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಕೇಬಲ್‌ ಟೆಲಿವಿಷನ್‌ ರೆಗ್ಯೂಲೇಶನ್‌ ಆ್ಯಕ್ಟ್ 1995ರಡಿ ರೂಪಿಸಲಾದ ನಿರ್ವಹಣಾ ಸಮಿತಿ ಸದಸ್ಯರಾದ ಎಸ್‌.ಬಿ. ಸಾವಳಸಂಗ, ವಿಜಯಲಕ್ಷ್ಮೀ ಬಾಳಿ, ಆರ್‌.ಪಿ. ಚವ್ಹಾಣ, ಎಸ್‌. ಎನ್‌. ಅತ್ತಾರ, ಪೀಟರ್‌ ಅಲೆಕ್ಸಾಂಡರ್‌, ಸಿಸ್ಟರ್‌ ಸೂಸಾನ್‌ ಇದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಸುಲೇಮಾನ ನದಾಫ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next