Advertisement

ಬೇಸಿಗೆ ತಾಪ ತಡೆಯಲು ಅಗತ್ಯ ಮುನ್ನೆಚ್ಛರಿಕೆಗೆ ಡಿಸಿ ಸೂಚನೆ

01:35 PM Mar 04, 2020 | Naveen |

ವಿಜಯಪುರ: ವಿಜಯಪುರ ಜಿಲ್ಲೆಯಾದ್ಯಂತ ಮುಂಬರುವ ದಿನಗಳಲ್ಲಿ ಗರಿಷ್ಠ ಉಷ್ಣಾಂಶ ಸಂದರ್ಭದಲ್ಲಿ ಅವಶ್ಯಕ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ಹವಾಮಾನ ಅಪಾಯಗಳಿಗೆ ಸ್ಪಂದಿಸಲು ಮತ್ತು ಹೊಂದಿಕೊಳ್ಳಲು ಪರಿಣಾಮಕಾರಿ ಸಿದ್ಧತೆಗಾಗಿ ಈಗಾಗಲೇ ಜಿಲ್ಲಾ ವಿಪತ್ತು ನಿರ್ವಹಣಾ ಕ್ರಿಯಾಯೋಜನೆ ರೂಪಿಸಲಾಗಿದೆ. ಅದರನ್ವಯ ವಿವಿಧ ಇಲಾಖೆಗಳಿಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾ ಧಿಕಾರದಿಂದ ನೀಡಲಾದ ನಿರ್ದೇಶನಗಳನ್ನು ತಪ್ಪದೇ ಪಾಲಿಸಿ, ಬೇಸಿಗೆ ಕಾಲದ ಗರಿಷ್ಠ ಉಷ್ಣಾಂಶ ಸಂದರ್ಭದಲ್ಲಿ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಸೂಕ್ತ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸುವಂತೆ ಸೂಚನೆ ನೀಡಿದರು.

ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರದ ಎಚ್ಚರಿಕೆಯಂತೆ ಪ್ರಸಕ್ತ ಬೇಸಿಗೆ ಕಾಲದಲ್ಲಿ ಜಿಲ್ಲೆಯ ಇಂಡಿ ಮತ್ತು ಚಡಚಣ ಭಾಗಗಳಲ್ಲಿ ಗರಿಷ್ಠ ಪ್ರಮಾಣದ ಉಷ್ಣಾಂಶದ ಮುನ್ಸೂಚನೆ ನೀಡಿದ್ದು, ಸಾರ್ವಜನಿಕರು ಈ ಕುರಿತು ಸೂಕ್ತ ಮುನ್ನೆಚ್ಚರಿಕೆಗೆ ಕ್ರಮ ಕೈಗೊಳ್ಳಬೇಕು. ಗರಿಷ್ಠ ಉಷ್ಣಾಂಶ ಸಂದರ್ಭದಲ್ಲಿ ಮಧ್ಯಾಹ್ನ ಸಮಯದಲ್ಲಿ ಹಿರಿಯ ನಾಗರಿಕರು, ಚಿಕ್ಕಮಕ್ಕಳು ಹಾಗೂ ಮಹಿಳೆಯರು ಅವಶ್ಯಕ ಜಾಗೃತಿ ವಹಿಸಬೇಕು. ಈ ಸಮಯದಲ್ಲಿ ವಿರಾಮ ವಹಿಸುವ ಜೊತೆಗೆ ಬಿಸಿಲಿನ ತಾಪದಿಂದ ಉಂಟಾಗುವ ಅಪಾಯಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಅವರು ತಿಳಿಸಿದ್ದಾರೆ.

ಬೇಸಿಗೆ ಕಾಲದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ವಿವಿಧ ಇಲಾಖೆಗಳ ಜವಾಬ್ದಾರಿಗಳ ಬಗ್ಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸೂಚಿಸಲು ತಿಳಿಸಿದ ಅವರು, ಇಲಾಖಾವಾರು ಯೋಜನೆ ಸಿದ್ಧಪಡಿಸಿಕೊಳ್ಳಬೇಕು. ಪಾಲಿಕೆ ಹಾಗೂ ಪುರಸಭೆಗಳಿಂದ ತೀವ್ರ ಉಷ್ಣಾಂಶ ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ವೃತ್ತಗಳಲ್ಲಿ ನೆರಳಿಗಾಗಿ ಸೂಕ್ತ ಮೇಲ್ಛಾವಣಿ ವ್ಯವಸ್ಥೆಯನ್ನು ವಿವಿಧ ನಗರ ಸ್ಥಳೀಯ ಸಂಸ್ಥೆಗಳ ನೆರವಿನೊಂದಿಗೆ ಮಾಡಬೇಕು ಎಂದರು.

Advertisement

ಮಹಾನಗರ ಪಾಲಿಕೆಯಿಂದ ತುರ್ತು ಕಂಟ್ರೋಲ್‌ ರೂಂ ತೆರೆಯಬೇಕು. ಆರೋಗ್ಯ ಇಲಾಖೆ ಮೂಲಕ 108 ಆಂಬ್ಯುಲೆನ್ಸ್‌, ತುರ್ತು ಚಿಕಿತ್ಸಾ ವಾರ್ಡ್‌ಗಳ ಸೌಲಭ್ಯ, ಅವಶ್ಯಕ ಔಷಧಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಮನೆ ಮನೆಗೆ ಕೈಗೊಳ್ಳಬೇಕಾದ ಅವಶ್ಯಕ ಮುಂಜಾಗೃತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಜೊತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಬಿಸಿಲಿನ ತಾಪಮಾನದಿಂದ ಸಾವು ನೋವುಗಳಾದಲ್ಲಿ, ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಸಹಾಯವಾಣಿ 1077ಗೆ ಸಾರ್ವಜನಿಕರು ಕರೆ ಮಾಡಬಹುದಾಗಿದೆ ಎಂದು ಹೇಳಿದರು.

ಇದಲ್ಲದೇ ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆ 2005 (ಸೆಂಟ್ರಲ್‌ ಆ್ಯಕ್ಟ್ 53 ಆಫ್‌ 205) ರನ್ವಯ ಜಿಲ್ಲಾ ಪ್ರಕೃತಿ ವಿಕೋಪ ಪ್ರಾಧಿಕಾರಗಳನ್ನು ರಾಜ್ಯದ 22 ಜಿಲ್ಲೆಗಳಲ್ಲಿ ಹೆಚ್ಚಿಸಲಾಗಿದ್ದು, ವಿಜಯಪುರ ಜಿಲ್ಲೆಯೂ ಒಳಗೊಂಡಿದೆ. ಜಿಲ್ಲಾಧಿಕಾರಿಗಳು ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ಜಿಪಂ ಅಧ್ಯಕ್ಷರು ಸಹ ಅಧ್ಯಕ್ಷರಾಗಿದ್ದಾರೆ. ಜಿಪಂ ಸಿಇಒ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರು ಸದಸ್ಯರಾಗಿದ್ದು, ಅಪರ ಜಿಲ್ಲಾಧಿಕಾರಿಗಳು ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಾಹಣಾ ಧಿಕಾರಿಗಳಾಗಿರುತ್ತಾರೆ.

ಜಿಪಂ ಸಿಇಒ ಗೋವಿಂದರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ| ಔದ್ರಾಮ, ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ವಿಪತ್ತು ನಿರ್ವಹಣಾಧಿ ಕಾರಿ ಜೈನಾಪುರ ಸೇರಿದಂತೆ ಇತರರು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next