Advertisement

ಗುಮ್ಮಟ ನಗರಿಗೆ ಹಣ್ಣುಗಳ ಲಗ್ಗೆ

10:42 AM May 16, 2019 | Naveen |

ವಿಜಯಪುರ: ಐತಿಹಾಸಿಕ ಬಸವನಾಡಿನಲ್ಲಿ ಬೇಸಿಗೆಯ ಬಿಸಿಲಿನ ಧಗೆ ಹಿನ್ನೆಲೆ ಹಣ್ಣುಗಳ ಪಾನೀಯಗಳಿಗೆ ಬೇಡಿಕೆ ಹೆಚ್ಚಿರುವ ಕಾರಣ ಹಣ್ಣು ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಹೆಚ್ಚಿದೆ. ಕಲ್ಲಂಗಡಿ, ಪೈನಾಫ‌ಲ್ ಹಣ್ಣುಗಳಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದ್ದು ಮಳೆ ಇಲ್ಲದೇ ಬರ ಆವರಿಸಿದ್ದರೂ ರೈತರು ಕಷ್ಟಪಟ್ಟು ಬೆಳೆದಿರುವ ಹಣ್ಣುಗಳು ವಿಜಯಪುರ ಹಣ್ಣಿನ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ.

Advertisement

ಬೇಸಿಗೆ ಹಂಗಾಮಿನಲ್ಲಿ ವಿವಿಧ ಹಣ್ಣುಗಳಿಗೆ ಸುಗ್ಗಿಯ ಕಾಲ. ಅದರಲ್ಲೂ ತಂಪು ಪಾನೀಯ ತಯಾರಿಸುವ ವ್ಯಾಪಾರಿಗಳಿಂದ ಕಲ್ಲಂಗಡಿ, ಪೈನಾಫ‌ಲ್ನಂಥ ಹಣ್ಣುಗಳಿಗೆ ಎಲ್ಲಿಲ್ಲದ ಬೇಡಿಕೆ ಹಾಗೂ ಬೆಲೆ ಇರುತ್ತದೆ. ಕಳೆದ ಮೂರು ವರ್ಷಗಳಲ್ಲಿ ಈ ಬಾರಿಯ ಹಿಂಗಾರಿನಲ್ಲಿ ಉತ್ತಮ ಮಳೆ ಇಲ್ಲದೇ ರೈತರ ಎಲ್ಲ ಬೆಳೆಗಳು ಕೈ ಕೊಟ್ಟಿದ್ದು, ರೈತರು ಅರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಮತ್ತೂಂದೆಡೆ ತಿಂಗಳ ಹಿಂದೆ ಸುರಿದ ಆಲಿಕಲ್ಲು ಮಳೆ ಕಷ್ಟ ಪಟ್ಟು ಬೆಳೆದ ಕಲ್ಲಂಗಡಿ ಹಣ್ಣನ್ನು ಹಾನಿ ಮಾಡಿದ್ದು, ರೈತರು ಕೈ ಸುಟ್ಟುಕೊಳ್ಳುವಂತೆ ಮಾಡಿದೆ. ಜಿಲ್ಲೆಯಲ್ಲಿ ಆಲಿಕಲ್ಲು ಮಳೆಗೆ ಸುಮಾರು 100 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆದಿದ್ದ ಕಲ್ಲಂಗಡಿ ಹಣ್ಣು ಹಾನಿಯಾಗಿದೆ.

ವಿಜಯಪುರ ತರಕಾರಿ ಹಾಗೂ ಹಣ್ಣುಗಳ ಮಾರುಕಟ್ಟೆಗೆ ಜಿಲ್ಲೆಯ ಸಿಂದಗಿ, ಅಂತರಂಗಿ, ಜುಮನಾಳ, ನೆರೆಯ ಕಲಬುರಗಿ ಜಿಲ್ಲೆಯ ಅಫ‌್ಜಲಪುರ, ಚಳ್ಳಗೇರ, ಕೊಕಟನೂರು ಮಾತ್ರವಲ್ಲದೇ ಮಹಾರಾಷ್ಟ್ರದ ಜತ್ತ, ಸೇಗಾಂ ಸೇರಿದಂತೆ ವಿವಿಧ ಭಾಗಗಳಿಂದ ಕಲ್ಲಂಗಡಿ ಹಣ್ಣು ವಿಜಯಪುರ ಮಾರುಕಟ್ಟೆಗೆ ಬರುತ್ತವೆ. ಜನೆವರಿ ತಿಂಗಳಿಂದ ಜುಲೈ ಅಂತ್ಯದವರೆಗೆ ಕಲ್ಲಂಗಡಿ ಹಣ್ಣಿನ ವಹಿವಾಟು ನಡೆಯುತ್ತದೆ.

ಸಗಟು ಮಾರುಕಟ್ಟೆಯಲ್ಲಿ ಗಾತ್ರಗಳಿಗೆ ತಕ್ಕಂತೆ ಬೆಲೆ ನಿಗದಿ ಮಾಡಲಾಗುತ್ತದೆ. ಪ್ರತಿ 50 ಹಣ್ಣುಗಳ ಗೂಡು ಮಾಡಿ ಗಾತ್ರಕ್ಕೆ ತಕ್ಕಂತೆ 300 ರೂ. 800 ರೂ.ವರೆಗೆ ಬೆಲೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಣ್ಣಿನ ಇಳುವರಿ ಕಡಿಮೆ ಇರುವ ಕಾರಣ ಬೆಲೆಯಲ್ಲಿ 1-2 ನೂರು ರೂ. ಬೆಲೆ ಏರಿಕೆಯಾಗಿದೆ.

ವಿಜಯಪುರ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಮಾರುಕಟ್ಟೆಯಿಂದ ಸುಮಾರು ನೂರಾರು ವ್ಯಾಪಾರಿಗಳಿದ್ದು, ಇಲ್ಲಿ ಕೊಳ್ಳುವ ಕಲ್ಲಂಗಡಿ ಹಣ್ಣುಗಳನ್ನು ಪ್ರತಿ ಹಣ್ಣಿಗೆ 1-2 ರೂ. ಲಾಭದ ಲೆಕ್ಕದಲ್ಲಿ ಚಿಲ್ಲರೆ ಮಾರುಕಟ್ಟೆಯ ವ್ಯಾಪಾರಿಗಳಿಗೆ ಮಾರುತ್ತಾರೆ.

Advertisement

ಇನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಭಾಗದಿಂದ ಜಿಲ್ಲೆಗೆ ಪೈನಾಫ‌ಲ್ ಹಣ್ಣುಗಳು ಆವಕ ಆಗುತ್ತದೆ. ವಾರದಲ್ಲಿ ಕನಿಷ್ಠ ಎರಡು ಬಾರಿ ಇಲ್ಲಿಗೆ 10 ಟನ್‌ ಪೈನಾಫ‌ಲ್ ಹಣ್ಣಿನ ಲೋಡ್‌ ಬರುತ್ತವೆ. ಕ್ವಿಂಟಲ್ ಲೆಕ್ಕದಲ್ಲಿ ಹಣ್ಣುಗಳನ್ನು ಖರೀದಿ ಮಾಡಲಾಗುತ್ತಿದ್ದು, ಇದೇ ಲೆಕ್ಕದಲ್ಲಿ ವ್ಯಾಪಾರಿಗಳಿಗೆ ಮಾರಾಟ ಮಾಡಲಾಗುತ್ತದೆ. ಬೇಸಿಗೆ ಹಂಗಾಮಿನಲ್ಲಿ ಪೈನಾಫ‌ಲ್ ಆವಕ ಹಾಗೂ ಬೆಲೆ ಹೆಚ್ಚಿರುತ್ತದೆ. ಬೇಸಿಗೆ ದಿನಗಳಲ್ಲಿ ಬೆಲೆ ಕ್ವಿಂಟಲ್ಗೆ 2,200 ರೂ. ಇದ್ದರೆ, ಇತರೆ ದಿನಗಳಲ್ಲಿ 1500 ರೂ. ಇರುತ್ತದೆ. ಬರ ಹಾಗೂ ಬೇಸಿಗೆ ಹೆಚ್ಚಿದ್ದರೂ ಪೈನಾಫ‌ಲ್ ವಹಿವಾಟಿನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂಬುದು ವ್ಯಾಪಾರಿಗಳ ಅನಿಸಿಕೆ.

ಒಂದೆಡೆ ಮಳೆಯ ಕೊರತೆ ಮತ್ತೂಂದೆಡೆ ಅಲ್ಲಲ್ಲಿ ಕೊಳವೆ ಬಾವಿ, ಕೆರೆ ನೀರಿನಿಂದ ಬೆಳೆದ ಕಲ್ಲಂಗಡಿ ಬೆಳೆ ಈಚೆಗೆ ಸುರಿದ ಆಲಿಕಲ್ಲು ಮಳೆಯಿಂದ ಹಾಳಾಗಿದೆ. ಇದರಿಂದ ನಿರೀಕ್ಷಿತ ಪ್ರಮಾಣ ಹಾಗೂ ನಿರೀಕ್ಷಿತ ಗುಣಮಟ್ಟದ ಹಣ್ಣು ಸಿಗುತ್ತಿಲ್ಲ. ಬೆಳೆ ಕಡಿಮೆ ಇರುವ ಕಾರಣ ಬೆಲೆಯೂ ಏರಿಕೆಯಾಗಿದೆ.
ಮುಸ್ತಾಕಹ್ಮದ್‌ ಬಿಳಗಿ,
ಕಲ್ಲಂಗಡಿ ಸಗಟು ವ್ಯಾಪಾರಿ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಭಾಗದಿಂದ ವಾರಕ್ಕೆ ಎರಡು ಬಾರಿ ಲ್ಲಿಗೆ ಪೈನಾಫ‌ಲ್ ಹಣ್ಣು ಸಣ್ಣ ಲಾರಿಗಳ ಲೋಡ್‌ ಬರುತ್ತವೆ. ಕೆ.ಜಿ. ಲೆಕ್ಕದಲ್ಲಿ ಮಾರಾಟ ಮಾಡುತ್ತೇವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಿದೆ.
ಇಸಾಕ್‌ ಸೋಲಾಪುರಕರ,
ಪೈನಾಫ‌ಲ್ ಮಧ್ಯವರ್ತಿ

50 ಹಣ್ಣಿನ ಗುಂಪು ಮಾಡಿ ಹಣ್ಣುಗಳನ್ನು ಸಗಟು ಮಾರುಕಟ್ಟೆಯಲ್ಲಿ ಕೊಂಡು, ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರಿಗಳಿಗೆ ಮಾರುತ್ತೇನೆ. ಮಾರುಕಟ್ಟೆ ಶುಲ್ಕ, ಸಾರಿಗೆ ವೆಚ್ಚ, ಹಮಾಲಿ, ಕೂಲಿ ಅಂತೆಲ್ಲ ಕಳೆದರೆ ದಿನಕ್ಕೆ 500 ರೂ. ಲಾಭ ಇರುತ್ತದೆ. ಇದರಲ್ಲೇ ಕಳೆದ ಹಲವು ವರ್ಷಗಳಿಂದ ಜೀವನ ರೂಪಿಸಿಕೊಂಡಿದ್ದೇನೆ.
•ಸಂತೋಷ ಆಥಣಿ,
ಹಣ್ಣಿನ ವ್ಯಾಪಾರಿ

ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next