Advertisement

28ರಂದು ಡಿಸಿಸಿ ಬ್ಯಾಂಕ್‌ ಶತಮಾನೋತ್ಸವ ಸಂಭ್ರಮ

05:19 PM Jul 27, 2019 | Naveen |

ವಿಜಯಪುರ: ನೂರು ವರ್ಷ ಪೂರೈಸಿರುವ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಜು. 28ರಂದು ಶತಮಾನೋತ್ಸವ ಆಚರಿಸುತ್ತಿದ್ದು, ನೂರರ ಸಂಭ್ರಮದ ಸ್ಮರಣೆಗಾಗಿ ಶತಮಾನೋತ್ಸವ ಭವನಕ್ಕೆ ಅಡಿಗಲ್ಲು ಸಮಾರಂಭ ನಡೆಯಲಿದೆ ಎಂದು ಮಾಜಿ ಸಚಿವ, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದರು.

Advertisement

ಶುಕ್ರವಾರ ಡಿಸಿಸಿ ಬ್ಯಾಂಕ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯದಲ್ಲೇ ಅತಿ ದೊಡ್ಡ ಜಿಲ್ಲೆ ಎಂಬ ಹಿರಿಮೆ ಹೊಂದಿರುವ ಬೆಳಗಾವಿ ಜಿಲ್ಲೆಯನ್ನೂ ಮೀರಿಸಿ ವಿಜಯಪುರ ಡಿಸಿಸಿ ಬ್ಯಾಂಕ್‌ ಠೇವಣಿ ಸಂಗ್ರಹ, ದುಡಿಯುವ ಬಂಡವಾಳ, ಸಾಲ ನೀಡಿಕೆ, ಸಾಲ ಮನ್ನಾ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಎಲ್ಲ ವಿಷಯಗಳಲ್ಲೂ ನಮ್ಮ ಬ್ಯಾಂಕ್‌ ಪ್ರಥಮ ಸ್ಥಾನದಲ್ಲಿದೆ. ಇಷ್ಟೇ ಅಲ್ಲದೇ ಎಲ್ಲ ಸಹಕಾರಿ ವ್ಯವಸ್ಥೆಯಲ್ಲೂ ಡಿಸಿಸಿ ಬ್ಯಾಂಕ್‌ ಮುಂಚೂಣಿ ಹೆಸರು ಗಳಿಸಿದೆ ಎಂದು ವಿವರಿಸಿದರು.

ಕಳೆದ ಆರ್ಥಿಕ ವರ್ಷದಲ್ಲಿ 13.03 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ನೂರು ವರ್ಷಗಳ ನಮ್ಮ ಬ್ಯಾಂಕ್‌ ಇತಿಹಾಸದಲ್ಲೇ ಈ ಮಟ್ಟದ ಲಾಭ ಪಡೆದಿರುವುದು ಕೂಡ ದಾಖಲೆಯ ಸಾಧನೆ ಎನಿಸಿದೆ. ಪ್ರಸಕ್ತ ಆರ್ಥಿಕ ವರ್ಷದದಲ್ಲಿ 104.61ಕೋಟಿ ರೂ. ಷೇರು ಬಂಡವಾಳ ಹೊಂದಿದ್ದು, ಕಳೆದ ಬಾರಿಗಿಂತ ಶೇ. 9.62 ಕೋಟಿ ರೂ. ಹೆಚ್ಚಳವಾಗಿದೆ. 208.53 ಕೋಟಿ ರೂ. ನಿಧಿ ಹೊಂದಿದ್ದು, ಕಳೆದ ಬಾರಿಗಿಂತ 6.79 ಕೋಟಿ ರೂ. ಹೆಚ್ಚಿನ ನಿಧಿ ಇದೆ. 2869.06 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದು ವಿವರಿಸಿದರು.

ಕೃಷಿ ಪ್ರಗತಿಯೇ ನಮ್ಮ ಬ್ಯಾಂಕ್‌ ಧ್ಯೇಯವಾಗಿದ್ದು, ಕೃಷಿ ಉದ್ದೇಶಕ್ಕಾಗಿ 857.18ಕೋಟಿ ರೂ. ಸಾಲ ಪಾವತಿಸಿದ್ದು, ಕೃಷಿಯೇತರ ಉದ್ದೇಶಗಳಿಗಾಗಿ 826.08 ಕೋಟಿ ರೂ. ಸೇರಿದಂತೆ 1683.26 ಕೋಟಿ ರೂ. ಸಾಲ ವಿತರಣೆ ಮಾಡಿದೆ. ಅದರಂತೆ ಸಾಲ ವಸೂಲಾತಿ ಪ್ರಮಾಣವೂ ಸಹ ಉತ್ತಮವಾಗಿದ್ದು, ಕೃಷಿ ಸಾಲ ವಸೂಲಾತಿ ಶೇ.98.14 ರಷ್ಟಾಗಿದ್ದು, ಕೃಷಿಯೇತರ ಸಾಲ ವಸೂಲಾತಿ ಪ್ರಮಾಣ ಶೇ. 86.78 ಆಗಿದೆ ಎಂದು ವಿವರಿಸಿದರು.

ರೈತರು ಸಹಕಾರ ಸಂಘಗಳಿಂದ, ಬ್ಯಾಂಕುಗಳಿಂದ ಪಡೆದ ಸಾಲ ದಿ. 20-6-2017ಕ್ಕೆ ಇರುವ ಹೊರ ಬಾಕಿಯಲ್ಲಿ ಗರಿಷ್ಠ 50 ಸಾವಿರ ರೂ.ಗಳವರೆಗೆ ಸಾಲಮನ್ನಾ ಮಾಡಿದೆ. ಈ ಯೋಜನೆಯಡಿ ಬ್ಯಾಂಕ್‌ ಹಾಗೂ ಪ್ಯಾಕ್ಸುಗಳಿಂದ ಬೆಳೆ ಸಾಲ ಪಡೆದ ಒಟ್ಟು 1,84,452 ರೈತರಿಂದ ಬರತಕ್ಕ ಒಟ್ಟು ಸಾಲ ಬಾಕಿ 838.01 ಕೋಟಿ ರೂ.ಗಳಷ್ಟಿದ್ದು, ಈ ಪೈಕಿ 685.48 ಕೋಟಿ ರೂ. ಮನ್ನಾ ಅರ್ಹತೆ ಇದ್ದು, ಇದರ ಪೈಕಿ 1.84 ಲಕ್ಷ ರೈತರಿಗೆ 680.18 ಕೋಟಿ ರೂ. ಹಣ ಬಿಡುಗಡೆಯಾಗಿದೆ ಎಂದರು.

Advertisement

ಅದರಂತೆ ಪ್ರಸ್ತುತ ರಾಜ್ಯ ಸರ್ಕಾರ ರೈತರ ಸಹಕಾರಿ ಸಂಘ ಹಾಗೂ ಬ್ಯಾಂಕುಗಳಿಂದ ಬೆಳೆ ಸಾಲ ಪಡೆದು ದಿನಾಂಕ 10-7-2018ಕ್ಕೆ ಹೊರ ಬಾಕಿಯಲ್ಲಿ ಪ್ರತಿ ಕುಟುಂಬಕ್ಕೆ ಗರಿಷ್ಠ 1 ಲಕ್ಷ ರೂ.ಗಳವರೆಗೆ ಬೆಳೆ ಸಾಲ ಮನ್ನಾ ಮಾಡಿದೆ. ಈ ಯೋಜನೆಯಡಿ ಷರತ್ತುಗೊಳಪಟ್ಟು ಪ್ಯಾಕ್ಸು ಹಾಗೂ ಜಿಲ್ಲಾ ಬ್ಯಾಂಕ್‌ನಿಂದ ಬೆಳೆ ಸಾಲ ಪಡೆದ ಒಟ್ಟು 1,60,748 ರೈತರ 670.03 ಕೋಟಿ ರೂ. ಸಾಲ ಮನ್ನಾ ಸೌಲಭ್ಯತೆ ಇರುವುದು ಬ್ಯಾಂಕಿನ ಮೇ 2019ರವರೆಗೆ 1,38,997 ರೈತರಿಗೆ ಸಂಬಂಧಿಸಿದಂತೆ ಒಟ್ಟು 575.17 ಕೋಟಿ ರೂ. ಕ್ಲೇಮ್‌ ಸಲ್ಲಿಸಲಾಗಿದ್ದು, ಇದುವರೆಗೆ 67,465 ರೈತರಿಗೆ 257.61 ಕೋಟಿ ರೂ. ಮನ್ನಾ ಹಣ ಬಿಡುಗಡೆಯಾಗಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿಯ ಪ್ಯಾಕ್ಸು ಹಾಗೂ ಕೇಂದ್ರ ಸಹಕಾರಿ ಬ್ಯಾಂಕ್‌ಗಳಿಂದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಗರಿಷ್ಠ 3 ಲಕ್ಷ ರೂ.ಗಳವರೆಗೆ ಅಲ್ಪಾವಧಿ ಬೆಳೆ ಸಾಲ ಹಾಗೂ ಕೃಷಿ, ಕೃಷಿ ಆಧಾರಿತ ಚಟುವಟಿಕೆಗಳಿಗಾಗಿ ಗರಿಷ್ಠ 10 ಲಕ್ಷ ರೂ.ಗಳವರೆಗೆ ಮಧ್ಯಮಾವಧಿ ಸಾಲಗಳನ್ನು ನೀಡಲಾಗುತ್ತಿದೆ. ಡಿಸಿಸಿ ಬ್ಯಾಂಕ್‌ನಲ್ಲಿ ಅತ್ಯಾಧುನಿಕ ಸೌಕರ್ಯಗಳನ್ನು ಸಹ ಕಲ್ಪಿಸಲಾಗುತ್ತಿದೆ. ಎಟಿಎಂ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ ವಿಜಯಪುರ ಕೇಂದ್ರ ಕಚೇರಿ, ಕೃಷ್ಣಾ ನಗರ ಶಾಖೆ, ನಿಡಗುಂದಿ ಹಾಗೂ ಮುದ್ದೇಬಿಹಾಳ ಶಾಖೆಯಲ್ಲಿ ಎಟಿಎಂ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಆಯ್ದ ಹಳ್ಳಿಗಳಲ್ಲಿ ಸಂಚಾರಿ ಎಟಿಎಂ ವಾಹನ ಸೇವೆ ಒದಗಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next