ವಿಜಯಪುರ: ಸ್ವಾಭಿಮಾನಿ ರಾಜಕಾರಣಿಯಾಗಿದ್ದ ಡಿ.ದೇವರಾಜ ಅರಸು ಅವರು ಶೋಷಿತ ದೀನ ದಲಿತರ ಧ್ವನಿಯಾಗಿ ರಾಜ್ಯದಲ್ಲಿ ಜನಪರ ಮುಖ್ಯಮಂತ್ರಿ ಎನಿಸಿದ್ದರು. ಸುದಿಧೀರ್ಘ ಆಡಳಿತ ನಡೆಸಿದರೂ ಶ್ರೇಷ್ಠ ನೇತಾರ ಎಂದು ಇಂದಿಗೂ ಜನಮನದಲ್ಲಿ ಉಳಿದಿರುವ ಅಪರೂಪದ ರಾಜಕೀಯ ನಾಯಕರಾಗಿದ್ದರು ಎಂದು ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಹೇಳಿದರು.
ಮಂಗಳವಾರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಘಟಕ, ಸಮಾನ ಅವಕಾಶ ಕೋಶ ಮತ್ತು ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಿ. ದೇವರಾಜ ಅರಸು ಅವರ 104ನೇ ಜನ್ಮೋತ್ಸವ ಸಮಾರಂಭದಲ್ಲಿ ಅರಸು ಅವರ ಜೀವನ-ಸಾಧನೆ ಲುರಿತು ಅವರು ಉಪನ್ಯಾಸ ನೀಡಿದರು.
ಅರಸು ಅವರನ್ನು ಪ್ರತ್ಯಕ್ಷವಾಗಿ ನೋಡಿದ ಭಾಗ್ಯ ನನ್ನದು. ಅರಸು ಅವರು ತಳ ಸಮುದಾಯದ ಹುಡುಗರಿಗೆ ಶಿಕ್ಷಣ ಕಲ್ಪಿಸಲು ಸಾಕಷ್ಟು ಶ್ರಮಿಸಿದ್ದಾರೆ. ಪ್ರಜಾಪ್ರತಿನಿಧಿಯಾಗಿ ಆಯ್ಕೆಯಾಗಿ ಬಂದ ಮೇಲೆ ನಮ್ಮ ಕ್ಷೇಮಕ್ಕಿಂತ ಜನಸೇವೆ ಮುಖ್ಯ ಹಾಗೂ ಅದುವೇ ಆದ್ಯತೆ ಆಗಬೇಕು ಎನ್ನುತ್ತಿದ್ದ ಅರಸು, ಅನ್ನದಾತರ ಶ್ರೇಯಕ್ಕಾಗಿ ಹಗಲಿರುಳು ದುಡಿದಿದ್ದಾರೆ. ಏಕೀಕರಣದ ಸಂದರ್ಭದಲ್ಲಿ ಸಾರಿಗೆ, ವಾರ್ತಾ, ಕಾರ್ಮಿಕ ಕಲ್ಯಾಣ ಇಲಾಖೆಗಳಲ್ಲಿ ಸಾಕಷ್ಟು ಆಡಳಿತ ಅನುಭವ ಪಡೆದುಕೊಂಡರು ಎಂದು ಹೇಳಿದರು.
ರಾಜ್ಯದ ಶಾಸನ ಸಭೆಗೆ ಮೊಟ್ಟ ಮೊದಲ ಬಾರಿಗೆ ಅವಿರೋಧ ಆಯ್ಕೆಯಾದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದರು. ಕೆಳ ಹಂತದ ನ್ಯಾಯಾಲಯಗಳಲ್ಲಿ ಆಡಳಿತದ ಎಲ್ಲ ವ್ಯವಹಾರಗಳು ಕನ್ನಡದಲ್ಲಿಯೇ ಇರಬೇಕು ಎಂಬ ನಿಲುವು ತಾಳಿದ್ದ ಅವರು ಅದನ್ನು ಕಾಯ್ದೆಯಾಗಿ ಜಾರಿಗೆ ತಂದರು. ಉಳುವವನೆ ಒಡೆಯ ಭೂಸುಧಾರಣೆ ಕಾಯ್ದೆ ಜಾರಿ ಮಾಡಿ, ಪ್ರತಿ ತಾಲೂಕುಗಳಿಗೆ ಭೂನ್ಯಾಯಾಲಯ ಸ್ಥಾಪಿಸಿ ಭೂ ರಹಿತರನ್ನು ಭೂಮಾಲೀಕ ಮಾಡಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದರು.
ರಾಷ್ಟ್ರ ಮಟ್ಟದಲ್ಲಿ ದೊಡ್ಡ ಮಂಡಳ ಅಯೋಗದ ವಿರೋಧಿ ಆಂದೋಲನ ನಡೆದರೂ ರಾಜ್ಯದಲ್ಲಿ ಇದಕ್ಕಾಗಿ ಆಯೋಗ ರಚಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ, ಯುವಜನರಿಗಾಗಿ, ಮಹಿಳೆಯರ ಶೈಕ್ಷಣಿಕ ಅಭಿವೃದ್ಧಿಗಾಗಿ ಮಹಿಳಾ ಹಾಸ್ಟೆಲ್ ನಿರ್ಮಿಸಿದರು. ವಿಕಲಚೇತನರು, ನಿರಾಶ್ರಿತ-ಅನಾಥರಿಗೆ ಸ್ವಾವಲಂಬನೆಯ ಸ್ವತಂತ್ರ ಬದುಕು ರೂಪಿಡಿಕೊಳ್ಳಲು ಮಾಸಾಶನ ಆರಂಭಿಸಿದರು. ಪಡಿತರ ಚೀಟಿ ಮೂಲಕ ಬಡವರಿಗೆ ಅನ್ನದ ಭದ್ರತೆ ನೀಡಿದರು. ಶೋಷಿತ ಬಡವರನ್ನು ರಾಜಕಿಯಕ್ಕೆ ತರುವ ಮೂಲಕ ರಾಜಕೀಯ ಹೊಸ ಕ್ರಾಂತಿಯನ್ನೇ ಮಾಡಿದರು ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಮೌಲ್ಯಮಾಪನ ಕುಲಸಚಿವ ಪ್ರೊ| ಪಿ.ಜಿ. ತಡಸದ ಮಾತನಾಡಿ, ಡಿ.ದೇವರಾಜ ಅರಸು ಅವರು ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಬದಲಾವಣೆಗಳ ಹರಿಕಾರ ಎನಿಸಿದ್ದರು. ಅಧಿಕಾರ ಸಿಕ್ಕಾಗ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಲು ಒಳ್ಳೆ ಮನಸ್ಸು ತುಂಬಾ ಮುಖ್ಯ ಎಂಬುದಕ್ಕೆ ಅರಸು ನಿದರ್ಶನವಾಗಿದ್ದರು. ಅರಸು ಅವರಂತೆ ಅಭಿವೃದ್ಧಿ ಪರಿಕಲ್ಪನೆಯ ರಾಷ್ಟ್ರೀಯ ಜನ ನಾಯಕರ ಕಾರ್ಯವೈಖರಿ, ಗಾಂಭಿರ್ಯ ಇರುವ ಧಿಧೀಮಂತ ನಾಯಕನನ್ನು ಇಂದು ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸದ್ಭಾವನಾ ದಿನಾಚರಣೆ ನಿಮಿತ್ತ ವಿದ್ಯಾರ್ಥಿನಿಯರಿಗೆ ಸದ್ಭಾವನಾ ಪ್ರತಿಜ್ಞೆ ಬೋಧಿಸಲಾಯಿತು. ಡಿ.ದೇವರಾಜ ಅರಸು ಜಯಂತಿ ನಿಮಿತ್ತ ಭಾಷಣ ಹಾಗೂ ಪ್ರಬಂಧ ಬರವಣಿಗೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ಸಂಯೋಜಕ ಡಾ| ಸಕ್ಪಾಲ ಹೂವಣ್ಣ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾ ಪೋಳ ಪರಿಚಯಿಸಿದರು. ಸಮಾನ ಅವಕಾಶ ಕೋಶದ ಸಂಯೋಜಕ ಡಾ| ಶ್ರೀನಿವಾಸ ವಂದಿಸಿದರು. ಜ್ಯೋತಿ ಗಾಜರೆ ನಿರೂಪಿಸಿದರು.