ವಿಜಯಪುರ: ಆಳುವವರಿಗೆ ಗುರಿ ಹಾಗೂ ಅಧಿಕಾರಿಗಳಿಗೆ ಕರ್ತವ್ಯ ಬದ್ದತೆ ಇದ್ದರೆ ಯಾವುದೇ ವ್ಯವಸ್ಥೆಯನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಅಭಿವೃದ್ದಿ ಸಾಧಿಸಬಲ್ಲರು ಎಂಬುದಕ್ಕೆ ಮೈಸೂರು ಜಿಲ್ಲೆ ನಿರ್ದಶನವಾಗಿದೆ. ಪ್ರವಾಸೋದ್ಯಮ ಇನ್ನೂ ಬಲಗೊಳಿಸುವ ಉದ್ದೇಶದಿಂದ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಸೈಕ್ಲಿಂಗ್ ಸವಾರಿ ಪ್ರವಾಸಿ ಟ್ರಿಣ್ ಟ್ರಿಣ್ ಯೋಜನೆ ಜಾರಿಗೆ ತಂದಿದೆ. ಇದರಿಂದ ವಾಹನ ದಟ್ಟಣೆ ನಿಯಂತ್ರಣ, ಪರಿಸರ ಸ್ನೇಹಿಯಾಗಿ ಸೈಕ್ಲಿಂಗ್ ಬಳಕೆ ಮೂಲಕ ಪ್ರವಾಸಿಗರನ್ನು ವಿಶಿಷ್ಟವಾಗಿ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಸೈಕ್ಲಿಂಗ್ ತವರು ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಇಂಥ ಕನಿಷ್ಠ ಯೋಚನೆಯೂ ನಡೆಯುತ್ತಿಲ್ಲ.
Advertisement
ಪ್ರವಾಸೋದ್ಯಮದಲ್ಲಿ ಶೂನ್ಯತೆ ಆವರಿಸಿರುವ ವಿಜಯಪುರ ಜಿಲ್ಲೆ ಸೈಕ್ಲಿಂಗ್ ಕ್ರೀಡಾ ಕ್ಷೇತ್ರದಲ್ಲಿ ತವರೂರು ಎನಿಸಿಕೊಂಡಿದೆ. ಪ್ರವಾಸೋದ್ಯಮದಲ್ಲಿ ಅದಾಗಲೇ ದೇಶ-ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿರುವ ಮೈಸೂರು ಪ್ರವಾಸೋದ್ಯಮವನ್ನು ಇನ್ನೂ ಬಲಪಡಿಸಲು ಇದೀಗ ಸೈಕ್ಲಿಂಗ್ ಸೇವೆ ಬಳಸಿಕೊಂಡು ಯಶಸ್ವಿಯಾಗಿದೆ. ಸರ್ಕಾರ, ಜಿಲ್ಲಾಡಳಿತ ಹಾಗೂ ಸ್ಥಳೀಯ ಅಡಳಿತಗಳೂ ಇದಕ್ಕೆ ಕೈ ಜೋಡಿಸಿದ್ದು, ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಪರಿಸರ ಸ್ನೇಹಿ ಟ್ರಿಣ್ ಟ್ರಿಣ್ ಎಂಬ ವಿಶಿಷ್ಟ ಯೋಜನೆ ಮೆಚ್ಚುಗೆ ಪಾತ್ರವಾಗಿದೆ.
Related Articles
Advertisement
ಜಾಗತಿಕ ತಾಪಮಾನ ತಡೆಯುವ ಉದ್ದೇಶದಿಂದ ಲಾಭಕ್ಕಿಂತ ಸೇವಾ ಯೋಜನೆಯಾಗಿ ಪರಿಸರ ರಕ್ಷಣೆಗಾಗಿ ವಿಶ್ವಬ್ಯಾಂಕ್‌ನ ಶೇ. 50ರ ನೆರವಿನಿಂದ ರಾಜ್ಯ ಸರ್ಕಾರದ 30 ಹಾಗೂ ಜಿಲ್ಲಾಡಳಿತ-ಸ್ಥಳೀಯ ಆಡಳಿತದಿಂದ ಶೇ. 20 ಅನುದಾನ ಸೇರಿ 20 ಕೋಟಿ ರೂ. ವೆಚ್ಚದಲ್ಲಿ ಸದರಿ ಯೋಜನೆ ಅನುಷ್ಠಾನಕ್ಕೆ ಬಂದಿದೆ. ಇದರಿಂದ ಪ್ರವಾಸಿಗರು ಸೈಕಲ್ ತುಳಿಯುತ್ತಲೇ ಮೈಸೂರು ನಗರದ ಸೌಂದರ್ಯ ಆಸ್ವಾದಿಸಲು ಪಾರಂಪರಿಕ ಮಾರ್ಗ ರೂಪಿಸಿ, 78 ಮಾರ್ಗ ಗುರುತಿಸಲಾಯಿತು. ಮೈಸೂರು ಮಹಾನಗರ ಪಾಲಿಕೆ ನಿರ್ವಹಣೆಯಲ್ಲಿ ಸೈಕ್ಲಿಂಗ್ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಟ್ರಿಣ್ ಟ್ರಿಣ್ ಯೋಜನೆ ಜಾರಿಗೆ ಬಂತು. ಸ್ಥಳೀಯರ ಸಹಕಾರದಿಂದ ಹಾಗೂ ಆಳುವ ಜನರ ರಾಜಕೀಯ ಇಚ್ಛಾಶಕ್ತಿ ಹಾಗೂ ಅಧಿಕಾರಿಗಳ ಕರ್ತವ್ಯ ಬದ್ಧತೆ ಇಲ್ಲಿ ಕೆಲಸ ಮಾಡಿತ್ತು.
ಟ್ರಿಣ್ ಟ್ರಿಣ್ ಯೋಜನೆಯಲ್ಲಿ ಮಹಾನಗರ ಪಾಲಿಕೆ ಮೈಸೂರು ಅರಮನೆ, ಪ್ರಾಣಿಸಂಗ್ರಹಾಲಯ, ರ್ಯೆಲು-ಬಸ್ ನಿಲ್ದಾಣ, ಜಿಲ್ಲಾಧಿಕಾರಿ, ಪಾಲಿಕೆ, ಮೂಡಾ ಕಚೇರಿ ಸೇರಿದಂತೆ ಹೀಗೆ ಪ್ರಮುಖ ಸುಮಾರು 52 ಕಡೆಗಳಲ್ಲಿ ಡಾಕೆಟ್ ಸೆಂಟರ್ ತೆರೆದಿದ್ದು, ಈ ಕೇಂದ್ರಗಳಲ್ಲಿ ಸುಮಾರು 450 ಸೈಕಲ್ಗಳನ್ನು ಇರಿಸಲಾಗಿದೆ. ಇದರಲ್ಲಿ ಚಾಮುಂಡಿ ಬೆಟ್ಟ ಏರುವ ಸಾಹಸಿ ಸೈಕ್ಲಿಸ್ಟ್‌ಗಳಿಗಾಗಿ 20 ಗೇರ್ ಸೈಕಲ್ ಕೂಡ ಸೇರಿವೆ.
ಸ್ಥಳೀಯರು ಸೈಕ್ಲಿಂಗ್ ಮಾಡಲು ಮಾಸಿಕ ಪಾಸ್ ವ್ಯವಸ್ಥೆಯೂ ಇದೆ. ಪ್ರವಾಸಿಗರು ಹಾಗೂ ಮಾಸಿಕ ಪಾಸ್ ವ್ಯವಸ್ಥೆ ಇಲ್ಲದವರು, ಅರಮನೆ, ಪ್ರಾಣಿ ಸಂಗ್ರಹಾಲಯ, ಆರ್‌ಟಿಒ ಕಚೇರಿ, ರೈಲ್ವೆ ನಿಲ್ದಾಣ, ನಗರ ಹಾಗೂ ಕೇಂದ್ರ ಬಸ್ ನಿಲ್ದಾಣಗಳ ಡಾಕೇಟ್ ಕೇಂದ್ರಗಳಲ್ಲಿ ಹೆಸರು ನೋಂದಣಿ ಕೇಂದ್ರಗಳನ್ನು ತೆರೆದಿದೆ. ನೋಂದಣಿ ಬಳಿಕ ಬೆಳಗ್ಗೆ 5ರಿಂದ ರಾತ್ರಿ 10ರವರೆಗೆ ನಿರ್ದಿಷ್ಟ ಹಾಗೂ ಕನಿಷ್ಠ ದರದಲ್ಲಿ ಮೈಸೂರಿನಲ್ಲಿ ಎಲ್ಲಿ ಬೇಕಾದರೂ ಸೈಕಲ್ ಪಡೆದು ಎಲ್ಲಿ ಬೇಕಾದರೂ ಟ್ರಿಣ್ ಟ್ರಿಣ್ ಸವಾರಿ ಮಾಡಬಹುದು.
ಟ್ರಿಣ್ ಟ್ರಿಣ್ ಯೋಜನೆಗೆ ಸೌಲಭ್ಯ ಬಳಸುವ ವ್ಯಕ್ತಿ ನಿರ್ದಿಷ್ಟ ಆರು ಕೇಂದ್ರಗಳಲ್ಲಿ ತನ್ನ ಗುರುತಿನ ದಾಖಲೆಗಳನ್ನು ನೀಡಿ 360 ರೂ. ನೀಡಿದರೆ ಹೆಸರು ನೋಂದಣಿ ಮಾಡಿ, ಸದಸ್ಯತ್ವದ ಸ್ಮಾರ್ಟ್‌ಕಾರ್ಡ್ ನೀಡಲಾಗುತ್ತದೆ. ಇದರಲ್ಲಿ 50 ರೂ. ದಾಖಲೆ ನಿರ್ವಹಣಾ ವೆಚ್ಚವಿದ್ದು, ಕಾರ್ಡ್‌ನಲ್ಲಿರುವ 60 ರೂ. ಬ್ಯಾಲೆನ್ಸ್ ಸದಸ್ಯರು ಸೈಕಲ್ ಬಳಸಿದ ಸಮಯದಷ್ಟು ಹಣವನ್ನು ಕಡಿತ ಮಾಡಿಕೊಳ್ಳಲಾಗುತ್ತದೆ. ಭದ್ರತೆಗೆ ಇರಿಸಿಕೊಂಡ 250 ರೂ. ಹಣ ಮರುಪಾವತಿ ಆಗಲಿದೆ. ಎಟಿಎಂ ಕೇಂದ್ರಲ್ಲಿರುವ ಯಂತ್ರದ ಮಾದರಿಯಲ್ಲಿ ನೋಂದಣಿ ಬಳಿಕ ನೀಡುವ ಶಾಸ್ವತವಾದ ಸ್ಮಾರ್ಟ್‌ಕಾರ್ಡ್ ಬಳಸಿ ಸೈಕಲ್ ಲಾಕ್-ಅನ್‌ಲಾಕ್ ಮಾಡುವ ವ್ಯವಸ್ಥೆ ಇದೆ. ಇದರಿಂದ ಸೈಕಲ್ ಬಳಸಿದ ಸದಸ್ಯ ಎಲ್ಲಿಂದ ಸೈಕಲ್ ಪಡೆದು, ಎಲ್ಲಿವರೆಗೆ ಓಡಿಸಿ, ಎಲ್ಲಿ ನಿಲ್ಲಿಸಿದ ಎಂಬೆಲ್ಲ ನಿಖರ ಮಾಹಿತಿ ದಾಖಲಾಗಲಿದೆ. ಡಾಕಿಂಗ್ ಕೇಂದ್ರಗಳು ಮಾನವ ರಹಿತವಾಗಿದ್ದು, ಸೈಕಲ್ ಹಾಳಾಗದಂತೆ ಹಾಗೂ ಕಳ್ಳರ ಹಾವಳಿ ತಡೆಗೆ ಸಿಸಿ ಕ್ಯಾಮರಾದಂಥ ಅಗತ್ಯ ಭದ್ರತಾ ವ್ಯವಸ್ಥೆ ಇರುವುದರಿಂದ ಕಳ್ಳರ ಭಯವೂ ಇಲ್ಲ.
ಮೈಸೂರು ಮಹಾನಗರಕ್ಕೆ ಪ್ರವಾಸಕ್ಕೆ ಬರುವ ವಿದೇಶಿಗರು, ವೀಕೆಂಡ್ ಮಸ್ತಿ ಮಾಡಲು ಬರುವ ಯುವ ಸಮೂಹಗಳಿಗೆ ಟ್ರಿಣ್ ಟ್ರಿಣ್ ಹೆಚ್ಚು ಆಕರ್ಷಿತವಾಗಿದೆ. ಬೆಂಗಳೂರು ನಿವಾಸಿಗಳಾಗಿ ಮೈಸೂರಿನಲ್ಲಿ ಉದ್ಯೋಗದಲ್ಲಿ ಇರುವವರು ಮೈಸೂರು ನಗರದಲ್ಲಿ ಆಟೋಗಳನ್ನು ಬಳಸದೇ ಬಹುತೇಕ ಈ ಟ್ರಿಣ್ ಟ್ರಿಣ್ ಯೋಜನೆಯನ್ನೇ ಬಳಸುತ್ತಿದ್ದಾರೆ. ಇದರಿಂದ ಮೈಸೂರು ನಗರದಲ್ಲಿ ವಾಹನ ದಟ್ಟಣೆಯಿಂದ ಹೊಗೆ ಆವರಿಸಿ ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದನ್ನು ನಿಯಂತ್ರಿಸುವಲ್ಲಿ ಟ್ರಿಣ್ ಟ್ರಿಣ್ ಸಹಕಾರಿಯಾಗಿದೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.