ವಿಜಯಪುರ: ಜಾಗತಿಕ ತಾಪಮಾನ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಪರಿಸರ ರಕ್ಷಣೆಗೆ ಎಲ್ಲರ ಕರ್ತವ್ಯವಾಗಿದೆ. ವಾಹನ ದಟ್ಟಣೆಯಿಂದ ಉಂಟಾಗುವ ಪರಿಸರ ಮಾಲಿನ್ಯ ತಡೆಯಲು ಹಾಗೂ ಕರ್ಕಶ ಧ್ವನಿಯಿಂದ ಶಬ್ದ ಮಾಲಿನ್ಯ ತಡೆಯಲು ಸೈಕ್ಲಿಂಗ್ ಸಹಕಾರಿ. ಹೀಗಾಗಿ ಭೂತನಾಳ ಬಳಿ ನಡೆಯುತ್ತಿರುವ ವೆಲೋಡ್ರೋಮ್ ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ಕುರಿತು ಮುಂದಿನ ವಾರ ಸ್ಥಳಕ್ಕೆ ಭೇಟಿ ನೀಡುವುದಾಗಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ರವಿವಾರ ನಗರದಲ್ಲಿ ವಿಜಯಪುರ ಸೈಕ್ಲಿಂಗ್ ಗ್ರೂಪ್ ನಿಂದ ಹಮ್ಮಿಕೊಂಡಿದ್ದ ಸೈಕ್ಲಿಂಗ್ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಸ್ವಯಂ ಸೈಕಲ್ ತುಳಿಯುತ್ತ ನಗರದಲ್ಲಿ ಸಂಚರಿಸಿದರು. ಗೋಲಗುಮ್ಮಟದಿಂದ ಆರಂಭಗೊಂಡ ಸೈಕ್ಲಿಂಗ್ ಯಾತ್ರೆ ಡಾ| ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕೊನೆಗೊಂಡಾಗ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಿಸರ ರಕ್ಷಣೆಯಲ್ಲಿ ಸೈಕಲ್ ಬಳಕೆ ಅತ್ಯಂತ ಪರಿಣಾಮಕಾರಿ ಎಂದರು.
ಇದಲ್ಲದೇ ಭವಿಷ್ಯದ ದಿನಗಳಲ್ಲಿ ನಗರದಲ್ಲಿ ಜನರ ಸಮಸ್ಯೆ ಆಲಿಸಲು ವಿವಿಧ ಬಡಾವಣೆಗಳಿಗೆ ಸೈಕ್ಲಿಂಗ್ ನಲ್ಲಿ ಸುತ್ತುವ ಮೂಲಕ ಬಡಾವಣೆಗಳ ರಸ್ತೆ, ಚರಂಡಿ, ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳ ಸ್ಥಿತಿ-ಗತಿ ಅರಿಯುವ ಮೂಲಕವೇ ಜನರಲ್ಲಿ ಸೈಕಲ್ ಬಳಕೆ ಹಾಗೂ ಪರಿಸರ ರಕ್ಷಣೆ ಕುರಿತು ಜಾಗೃತಿ ಮೂಡಿಸುವುದಾಗಿ ಹೇಳಿದರು. ಪರಿಸರ ಹಾಳಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಹೊಣೆ. ಪ್ರತಿಯೊಬ್ಬರೂ ಸೈಕಲ್ ಬಳಸಿದರೆ ಒಂದೆಡೆ ಪರಿಸರ ರಕ್ಷಣೆ ಮತ್ತೂಂದೆಡೆ ಇಂಧನ ಹಾಗೂ ಹಣ ಉಳಿತಾಯದ ಮೂಲಕ ದೇಶಕ್ಕೆ ವಿಶಿಷ್ಟ ಕೊಡುಗೆ ನೀಡಲು ಸಾಧ್ಯ. ಇದಕ್ಕಾಗಿ ನಿತ್ಯವೂ ಸೈಕಲ್ ತುಳಿಯುವುದರಿಂದ ದೇಹದಲ್ಲಿ ಅದ್ಬುತ ಬದಲಾವಣೆ ಕಾಣಿಸಿಕೊಳ್ಳುವ ಜೊತೆಗೆ ಮಾನಸಿಕ ಸದೃಢತೆ ಉಂಟಾಗುತ್ತದೆ. ನಗರದಲ್ಲಿ ಅನಗತ್ಯ ವಾಹನ ಸಂಚಾರ ದಟ್ಟಣೆ ತಪ್ಪಿಸುವಲ್ಲಿ ರಕ್ಷಣೆಗಾಗಿ ಸೈಕ್ಲಿಂಗ್ ಪರ್ಯಾಯ ಸಾರಿಗೆ ವ್ಯವಸ್ಥೆ ಎಂದರು. ವಿಜಯಪುರ ಸೈಕ್ಲಿಂಗ್ ಗ್ರುಪ್ ಪ್ರಮುಖ ಡಾ| ಮಹಾಂತೇಶ ಬಿರಾದಾರ ಮಾತನಾಡಿ, ನಿತ್ಯವೂ ಸೈಕ್ಲಿಂಗ್ ತುಳಿಯುವುದರಿಂದ ಸಂಧಿವಾತ, ಬೆನ್ನು-ಕೀಲು ನೋವು ಹೋಗು ತ್ತವೆ ಎಂದರು.
ಈ ವೇಳೆ ಸೈಕ್ಲಿಂಗ್ ಗ್ರೂಪ್‌ನಿಂದ ವಿಜಯಪುರದ ಸಿಂದಗಿ ನಾಕಾದಿಂದ ಅಥಣಿ ಬೈಪಾಸ್‌ವರೆಗೆ ಮುಖ್ಯ ರಸ್ತೆಯಲ್ಲಿ ಸೈಕ್ಲಿಂಗ್‌ಗಾಗಿ ಚಿಕ್ಕಲೇನ್ ಮೀಸಲಿಡಬೇಕು.
ಬೇಗಂ ತಲಾಬ್ ಕೆರೆಯ ಸುತ್ತಲಿನ 7 ಕಿ.ಮೀ. ಎರಿಯನ್ನು ಡಾಂಬರೀಕರಣಗೊಳಿಸಿ, ಸೈಕ್ಲಿಸ್ಟ್‌ಗಳ ಹಾಗೂ ವಾಕಿಂಗ್ ಸಲುವಾಗಿಯೇ ಮೀಸಲಿಡಬೇಕು ಎಂದು ವಿಜಯಪುರ ಸೈಕ್ಲಿಂಗ್ ಗ್ರುಪ್ ಪರವಾಗಿ ಶಾಸಕ ಬಸನಗೌಡ ಯತ್ನಾಳ ಹಾಗೂ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ಅವರಿಗೆ ಮಾಡಲಾಯಿತು.
ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ ಇನಾಮದಾರ, ಯುವಜನ ಸೇವಾ ಕ್ರೀಡಾ ಇಲಾಖೆ ನಿರ್ದೇಶಕ ಎಸ್ .ಜಿ. ಲೋಣಿ, ಪಾಲಿಕೆ ಮಾಜಿ ಸದಸ್ಯ ಪ್ರೇಮಾನಂದ ಬಿರಾದಾರ, ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಸುರೇಶ ಘೋಣಸಗಿ, ಉದ್ಯಮಿ ಶಾಂತೇಶ ಕಳಸಗೊಂಡ, ವಿವೇಕಾನಂದ ಸೇನೆಯ ರಾಘವೇಂದ್ರ ಅಣ್ಣಿಗೇರಿ, ಪೊಲೀಸ್ ಅಧಿಕಾರಿಗಳಾದ ರವೀಂದ್ರ ನಾಯ್ಕೋಡಿ, ಆರೀಫ್ ಮುಶಾಪುರೆ, ಶರಣಗೌಡ ಗೌಡರ, ಗಂಗು ಬಿರಾದಾರ, ಗಜಾನನ ಮಂದಾಲಿ, ಸುರೇಶ ಜಾಧವ, ಶಿವನಗೌಡ ಪಾಟೀಲ, ಅಲ್ಕಾ ಪಡತಾರೆ, ಗುರು ಗಚ್ಚಿನಮಠ, ಅಮೀತ್ ಬಿರಾದಾರ, ವಾಜೀದ್ ಅಲಿ, ವಿಶಾಲ ಹಿರಾಸ್ಕರ್, ಮನಿಶ ದೇವಗಿರಿಕರ, ವಿನಾಯಕ ಕೋಟಿ, ಪ್ರಶಾಂತ ಶೆಟ್ಟಿ ಸೇರಿದಂತೆ ನೂರಾರು ಯುವಕರು, ಮಹಿಳೆಯರು, ಬಾಲಕರು ಸೈಕ್ಲಿಂಗ್ ಜಾಥಾದಲ್ಲಿ ಪಾಲ್ಗೊಂಡಿದ್ದರು.