Advertisement

ನಮ್ಮ ಬದುಕೇ ನಮಗೆ ಮಾರ್ಗದರ್ಶಿ

03:07 PM Sep 22, 2019 | Naveen |

ವಿಜಯಪುರ: ನಮ್ಮ ಬದುಕಿನಲ್ಲಿ ಎದುರಿಸುವ ಸಮಸ್ಯೆಗಳನ್ನು ಮೆಟ್ಟಿ ನಿಂತು ಸಮಾಜಕ್ಕೆ ಮಾದರಿಯಾಗುವಂತೆ ಬದುಕು ರೂಪಿಸಿಕೊಳ್ಳುವಲ್ಲಿ ನಮ್ಮ ಬದುಕೇ ನಮಗೆ ಮಾರ್ಗದರ್ಶಿ. ಇದಕ್ಕಾಗಿ ಸತತ ಪ್ರಯತ್ನ ಬೇಕು ಎಂದು ಪ್ಯಾರಾ ಒಲಿಂಪಿಕ್ಸ್‌ ನೂರಾರು ಪದಕ ವಿಜೇತ ಸನ್‌ರೈಜ್‌ ಕ್ಯಾಂಡಲ್ಸ್‌ ಅಂಧ ಉದ್ಯಮಿ ಡಾ| ಭಾವೇಶ ಭಾಟಿಯಾ ಹೇಳಿದರು.

Advertisement

ನಗರದ ಕುಮುದಬೇನ್‌ ದರಬಾರ ಮಹಾವಿದ್ಯಾಲಯದ ಕ್ರೀಡಾ, ಜಿಮಖಾನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಂಧನಾದ ನಾನು ಹಾಗೂ ಈ ನನ್ನ ಸಂಸ್ಥೆ ಉತ್ಪಾದಿಸಿದ ಮೇಣದ ಬತ್ತಿಗಳು ಜಗತ್ತಿನ ಹಲವು ಮನೆ‌ಗಳಲ್ಲಿ ಬೆಳಕು ನೀಡುತ್ತಿದೆ. ಜೊತೆಗೆ ನನ್ನಂಥ 9,000 ಅಂಧರ ಕೈಗಳಿಗೆ ಉದ್ಯೋಗ ಕಲ್ಪಿಸಿ, ಅವರ ಸ್ವಾವಲಂಬಿ ಜೀವನದಲ್ಲೂ ಸಹಕಾರಿ ಆಗಿದೆ ಎಂದು ವಿವರಿಸಿದರು.

ವಿಕಲಚೇತನನಾದ ನಾನು ಹಿಮಾಲಯ ಪರ್ವತ ಏರಿರುವೆ, ಪ್ಯಾರಾ ಒಲಿಂಪಿಕ್ಸ್‌ನಲ್ಲಿ 100ಕ್ಕೂ ಅ ಧಿಕ ಪದಕ ಗೆದ್ದಿರುವೆ. ಕಣ್ಣಿಲ್ಲದ ನಾನೇ ಇಷ್ಟೆಲ್ಲ ಸಾಧಿಸಲು ಸಾಧ್ಯ ಎಂದಾದರೆ ಕಣ್ಣು ಸೇರಿದಂತೆ
ಎಲ್ಲ ಅವಯವ ಸರಿ ಇರುವ ನೀವು ಕೂಡ ಸತತ ಪರಿಶ್ರಮದಿಂದ ನಿರ್ದಿಷ್ಟ ಗುರಿ ಕಡೆಗೆ ಹೆಜ್ಜೆ ಹಾಕಿದಲ್ಲಿ ಸಾಧಿಸಲು ಸಾಧ್ಯವಿದೆ. ವಾರ್ಷಿಕ ನೂರು ಕೋಟಿ ವಹಿವಾಟು ಹೊಂದಿರುವ ನನಗೆ ನನ್ನ ಬದುಕೇ ಮಾರ್ಗದರ್ಶಿ ಎಂದರು.

ಮೇಣದ ಬತ್ತಿ ತಯಾರಿಕೆ ಉದ್ಯಮ ಆರಂಭಿಸುವ ಮುನ್ನ ನಾನು ಸಾಕಷ್ಟು ಕಷ್ಟಪಟ್ಟೆ. ತರಬೇತಿಗಾಗಿ ಮುಂಬೈ ನಗರಕ್ಕೆ ಹೋದರೂ ಪೂರ್ಣ ಅಂಧರಿಗೆ ಮಸಾಜ್‌ ತರಬೇತಿ ಇದೆ,
ಮೇಣದ ತರಬೇತಿ ಅರ್ಧ ಕುರುಡರಿಗೆ ಮಾತ್ರ ಎಂದಾಗ ನನ್ನ ಮನೋಬಲವೇ ಕುಂದಿತ್ತು. ಮಸಾಜ್‌ ಕಲಿಕೆ ಜೊತೆಗೆ ಮೇಣದ ಬತ್ತಿ ತರಬೇತುದಾರರನ್ನು ಕಾಡಿಬೇಡಿ ಕೊನೆಗೂ ಮೇಣದ ಬತ್ತಿ ತಯಾರಿಕೆ ಕಲಿತು ಮಹಾಬಲೇಶ್ವರಕ್ಕೆ ಮರಳಿದೆ. ಆರಂಭದಲ್ಲಿ ಮೊದಲು ಮಸಾಜ್‌ ಮಾಡಿ ಸ್ವಲ್ಪ ದುಡ್ಡು ಸಂಪಾದಿಸಿ. ನಂತರ ಮೇಣದ ಬತ್ತಿ ಉದ್ಯಮ ಆರಂಭಿಸಿದೆ. ಇದೇ ಹಂತದಲ್ಲಿ ಮಹಾಬಲೇಶ್ವರ ಪ್ರವಾಸಕ್ಕೆ ಬಂದು ತಂಗಿದ್ದ ನೀತಾ ಎಂಬ ಯುವತಿ 17 ದಿನಗಳ ಕಾಲ ನನ್ನೊಂದಿಗೆ ಮೇಣದ ಬತ್ತಿ ಮಾರಲು ಸಹಾಯ ಮಾಡಿದಳು. ಅದೊಂದು ದಿನ ನನ್ನನ್ನು ಮದುವೆ ಆಗಿ ಎಂದಳು, ಶ್ರೀಮಂತರ ಮಗಳಾದ ನೀತಾ ನನಗಾಗಿ ತನ್ನೆಲ್ಲ ಸಿರಿಯನ್ನು ಬಿಟ್ಟು ಬಂದಳು. ಸರಳ ವಿವಾಹ ಮಾಡಿಕೊಂಡ ನಾವು, ನಮ್ಮ ಬದುಕಿನಲ್ಲಿ ಅಂಧರಿಗೆ ನೆರವಾಗುವ ಕೆಲಸದಲ್ಲಿ ತೊಡಗಿದ್ದೇವೆ ಎಂದು ವಿವರಿಸಿದರು.

ರಿಲಯನ್ಸ್‌ನ ಮುಕೇಶ ಅಂಬಾನಿ ಮತ್ತು ನೀತಾ ಅಂಬಾನಿ ನಮ್ಮನ್ನು ಸನ್ಮಾನಿಸಿದರು. ಅವರ ಮಾನ್ಯೇಜರ್‌ ನಮಗೆ 51 ಲಕ್ಷ ರೂ. ದಾನ ನೀಡಲು ಬಂದಾಗ, ನಿಮ್ಮ ಹಣಕ್ಕಿಂತ ನಮಗೆ ಉದ್ಯೋಗ ಬೇಕು. ಹೀಗಾಗಿ 51 ಲಕ್ಷ ರೂ. ಮೊತ್ತ ಮೇಣದ ಬತ್ತಿ ಖರೀದಿಸಿದರು. ಇದಲ್ಲದೇ ಈವರೆಗೆ ನಾವು ಅಂಬಾನಿ ಸಂಸ್ಥೆಯೊಂದಿಗೆ 110 ಕೋಟಿ ರೂ. ವ್ಯವಹಾರ ನಡೆಸಿದ್ದೇವೆ ಎಂದು ತಮ್ಮ ಅಂಧತ್ವದ ಬದುಕಿನ ಸ್ವಾಭಿಮಾನದ ಕಥೆಯನ್ನು ವಿವರಿಸಿದರು. ನೂತನವಾಗಿ ನಾನು ಬರೆದ ಪುಸ್ತಕವನ್ನು ಪ್ರಧಾನಿ ನರೇಂದ್ರ ಮೋದಿ ಬಿಡಿಗಡೆಗೊಳಿಸಿ ನಮ್ಮನ್ನು ಹರಸಿದ್ದಾರೆ ಎಂದರು.

Advertisement

ರಾಣಿ ಚನ್ನಮ್ಮ ವಿವಿ ಸಿಂಡಿಕೇಟ್‌ ಸದಸ್ಯ ನರಸಿಂಹ ರಾಯಚೂರು ಮಾತನಾಡಿ, ಭಾಟಿಯಾ ಈಗಿನ ಯುವಕರಿಗೆ ಮಾದರಿ. ಕೆಲಸ ಇಲ್ಲ ಅಂತ ಸರಕಾರವನ್ನು ದೂರುವ ಇಂದಿನ ವಿದ್ಯಾವಂತ ಯುವ ಸಮೂಹಕ್ಕೆ ಅಂಧರಾದರೂ ಭಾವೇಶ ಭಾಟಿಯಾ ಅವರಲ್ಲಿನ
ಛಲಗಾರಿಕೆ ಹಾಗೂ ಸ್ವಾಭಿಮಾನದ ನಡೆಯನ್ನು ಗುರುತಿಸಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿದೆ ಎಂದರೆ ಅವರ ಸಾಧನೆ ಇತರರಿಗೆ ಸ್ಫೂರ್ತಿಯಾಗಲಿ ಎಂದರು.

ರಾಜೇಶ ದರಬಾರ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಪ್ರಕಾಶ ಉಡುಪಿಕರ, ವಿಕಾಸ ದರಬಾರ, ಗಿರೀಶ ಮಣೂರ ವೇದಿಕೆಯಲ್ಲಿದ್ದರು.

ರಘೋತ್ತಮ ಅರ್ಜುಣಗಿ, ಅರುಣಕುಮಾರ, ವಿನೋದ ಪಾಟೀಲ, ದುರ್ಗಾಲಕ್ಷ್ಮೀ ಆಚಾರ್ಯ, ಅಜಿತ ಶಿರೂರ, ಪ್ರವೀಣ ಬಾದಾಮಿ, ಸಚಿನ ಬಾಗೇವಾಡಿ, ಪ್ರಶಾಂತ ಕೃಷ್ಣಮೂರ್ತಿ ಇದ್ದರು.
ಪ್ರಾಂಶುಪಾಲ ವಿನಾಯಕ ಗ್ರಾಮಪುರೋಹಿತ ಸ್ವಾಗತಿಸಿದರು. ಸುಚಿತ್ರಾ ಮಹಾಜನ್‌, ರಾಜೇಶ್ವರಿ ಪಾಠಕ ನಿರೂಪಿಸಿದರು. ಮಹೇಶ ಸಾತಗೊಂಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next