ವಿಜಯಪುರ: ಜಿಲ್ಲೆಯ ಇಂಡಿ ಪಟ್ಟಣದಲ್ಲಿ 2023ರಲ್ಲಿ ನಡೆದ ಮಹಿಳೆಯ ಕೊಲೆ ಮತ್ತು ಆಕೆಯ ಮಗನ ಕೊಲೆ ಯತ್ನ ಪ್ರಕರಣದ ಆರೋಪಿಗೆ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 86 ಸಾವಿರ ರೂಪಾಯಿಗಳ ದಂಡ ವಿಧಿಸಿ ಆದೇಶಿಸಿದೆ. ಹುಸೇನ್ ಬಾಷಾ ಆಲಿಯಾಸ್ ಬಾಷಾ ದಾದಾಪೀರ್ ಶೇಖ್ ಎಂಬಾತನೇ ಶಿಕ್ಷೆಗೆ ಗುರಿಯಾದ ಅಪರಾಧಿ.
ಇಂಡಿ ಪಟ್ಟಣದ ಟಿಪ್ಪು ಸರ್ಕಲ್ ಹತ್ತಿರದ ಅಂಜುಮನ್ ಸ್ಕೂಲ್ ಬಳಿಯ ರಸ್ತೆಯಲ್ಲಿ 2023ರ ಫೆಬ್ರವರಿ 21ರಂದು ಸಂಜೆ ದಿಲ್‌ಶಾದ ಬೇಗಂ ಎಂಬಾಕೆಯನ್ನು ಹುಸೇನ್ ಬಾಷಾ ಕೊಲೆ ಮಾಡಿದ್ದ. ತನ್ನ ತಂಗಿಯ ಗಂಡನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬ ಸಂಶಯಪಟ್ಟು ಆಕೆಯ ತಲ್ವಾರಗಳಿಂದ ಆರೋಪಿ ದಾಳಿ ಮಾಡಿದ್ದ. ಅಲ್ಲದೇ, ಈಕೆಯ ಮಗ ಮಹ್ಮದ್ ಮುಜಮಿಲ್ ಮೇಲೂ ದಾಳಿ ಮಾಡಿ ಗಾಯಗೊಳಿಸಿ ಹತ್ಯೆಗೆ ಯತ್ನಿಸಿದ್ದ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶ ಸುಭಾಸ್ ಸಂಕದ ಅವರು ನಡೆಸಿ, ಅಪರಾಧಿಗೆ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ಐಪಿಸಿ ಕಲಂ 302ರಡಿ ಜೀವಾವಧಿ ಶಿಕ್ಷೆ, 50 ಸಾವಿರ ರೂ. ದಂಡ, ಕಲಂ 307ರಡಿ 8 ವರ್ಷ ಜೈಲು ಶಿಕ್ಷೆ, 25 ಸಾವಿರ ರೂ. ದಂಡ, ಕಲಂ 448ರಡಿ 1 ವರ್ಷ ಜೈಲು, 1 ಸಾವಿರ ರೂ. ದಂಡ ಹಾಗೂ ಭಾರತೀಯ ಆಯುಧ ಕಾಯ್ದೆ 25ರಡಿ 8 ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ತಮ್ಮ ತೀರ್ಪು ಪ್ರಕಟಿಸಿದ್ದಾರೆ.
ಅಲ್ಲದೇ, ಮೃತಳ ಮಕ್ಕಳಾದ ಗಾಯಾಳು ಮುಜಮಿಲ್ ಹಾಗೂ ದೂರುದಾರ ಮುದಸ್ಸರ್ ಅವರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಸೂಕ್ತ ಪರಿಹಾರ ನೀಡಲು ಸಹ ನ್ಯಾಯಾಧೀಶರು ಶಿಫಾರಸ್ಸು ಮಾಡಿದ್ದಾರೆ. ಸರ್ಕಾರದ ಪರವಾಗಿ 1ನೇ ಅಧಿಕ ಅಭಿಯೋಜಕಿ ವಿ.ಎಸ್.ಇಟಗಿ ವಾದ ಮಂಡಿಸಿದ್ದರು.
ಇದನ್ನೂ ಓದಿ: Israel ಯುದ್ಧಕ್ಕೆ ಭಾರತೀಯರನ್ನು ನೇಮಿಸಿಕೊಳ್ಳಲು ಮೋದಿ ಸರಕಾರ ನೆರವು: ಖರ್ಗೆ ಆರೋಪ