Advertisement

29ರಂದು ಶಿಕ್ಷಕರ ಕಡ್ಡಾಯ ವರ್ಗಾವಣೆ ಕೌನ್ಸೆಲಿಂಗ್‌

10:32 AM Aug 28, 2019 | Naveen |

ವಿಜಯಪುರ: ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಕಡ್ಡಾಯ ವರ್ಗಾವಣೆಗೆ ಮುಂದಾಗಿದ್ದು, ವಿಜಯಪುರ ಜಿಲ್ಲೆಯಲ್ಲಿ 237 ಶಿಕ್ಷಕರ ಕಡ್ಡಾಯ ವರ್ಗಾವಣೆ ಪಟ್ಟಿ ಮಾಡಲಾಗಿದೆ. ಆದರೆ ಶಿಕ್ಷಣ ಇಲಾಖೆ ಅಧಿಕಾರಿ-ಸಿಬ್ಬಂದಿ ಸರ್ಕಾರ ಕಡ್ಡಾಯ ವರ್ಗಾವಣೆಗೆ ರೂಪಿಸಿರುವ ನಿಯಮಗಳ ವ್ಯಾಪ್ತಿಗೆ ಬರದಿದ್ದರೂ ಕೆಲವು ಶಿಕ್ಷಕರನ್ನು ಕಡ್ಡಾಯ ವರ್ಗಾವಣೆ ಪಟ್ಟಿಗೆ ಸೇರಿಸುವ ಮೂಲಕ ಶಿಕ್ಷಕರಿಗೆ ಶಿಕ್ಷೆ ನೀಡಲು ಮುಂದಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಸರ್ಕಾರದ ನಿಯಮದಂತೆ ಒಂದೇ ಸ್ಥಳದಲ್ಲಿ ಹೆಚ್ಚು ಕಾಲ ಸೇವೆಯಲ್ಲಿರುವ ಸರ್ಕಾರಿ ಶಾಲೆಗಳ ಶಿಕ್ಷಕರನ್ನು ಕಡ್ಡಾಯ ವರ್ಗಾವಣೆ ಮಾಡುವ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಪಟ್ಟಿ ತಯಾರಿಸಿದೆ. ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿರುವ ವರದಿಯಂತೆ ಜಿಲ್ಲೆಯಲ್ಲಿ 237 ಶಿಕ್ಷಕರನ್ನು ಕಡ್ಡಾಯ ವರ್ಗಾವಣೆಗೆ ಗುರುತಿಸಲಾಗಿದೆ. ಈ ತಿಂಗಳ 29ರಂದು ಜಿಲ್ಲೆಯಲ್ಲಿ ಕಡ್ಡಾಯ ವರ್ಗಾವಣೆ ಪಟ್ಟಿಯಲ್ಲಿರುವ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ ನಡೆಯಲಿದೆ.

ಹೀಗೆ ಕಡ್ಡಾಯ ವರ್ಗಾವಣೆಗೆ ಗುರುತಿಸಲಾದ ಶಿಕ್ಷಕರಲ್ಲಿ ಪತಿ-ಪತ್ನಿ ಉದ್ಯೋಗದಲ್ಲಿದ್ದರೆ, ವಿಧವೆಯರು, ಶೇ. 40ಕ್ಕಿಂತ ಹೆಚ್ಚಿನ ಅಶಕ್ತತೆ ಇರುವ ಕುರಿತು ಜಿಲ್ಲಾ ಶಸ್ತಚಿಕಿತ್ಸಕರು ಪ್ರಮಾಣೀಕರಿಸಿದ ಪ್ರಕರಣ, ರಾಜ್ಯ ಸರ್ಕಾರದಿಂದ ಮನ್ನಣೆ ಪಡೆದ ನೌಕರರ ಸಂಘಗಳ ಚುನಾಯಿತ ಪದಾಧಿಕಾರಿಗಳು ಹೀಗೆ ಕೆಲವು ನಿರ್ದಿಷ್ಟ ಪ್ರಕರಣದಲ್ಲಿರುವ ಶಿಕ್ಷಕರನ್ನು ಕಡ್ಡಾಯ ವರ್ಗಾವಣೆಗೆ ಪರಿಗಣಿಸಬಾರದು ಎಂದು ಕಡ್ಡಾಯ ವರ್ಗಾವಣೆಗೆ ಕುರಿತು ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಹೇಳಿದೆ.

ಇಷ್ಟಿದ್ದರೂ ಜಿಲ್ಲೆಯಲ್ಲಿ ಕಡ್ಡಾಯ ವರ್ಗಾವಣೆಗೆ ರೂಪಿಸಿರುವ ಶಿಕ್ಷಕರ ಪಟ್ಟಿಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಸುಮಾರು 10ಕ್ಕೂ ಹೆಚ್ಚು ಶಿಕ್ಷಕರನ್ನು ನಿಯಮ ಮೀರಿ ಕಡ್ಡಾಯ ವರ್ಗಾವಣೆ ಪಟ್ಟಿಗೆ ಸೇರಿಸಿರುವ ಕುರಿತು ವರದಿಯಾಗಿದೆ. ತಮ್ಮ ಹೆಸರು ಕಡ್ಡಾಯ ವರ್ಗಾವಣೆಗೆ ಬರುತ್ತಲೇ ಕೆಲವು ಶಿಕ್ಷಕರು ಕಡ್ಡಾಯ ವಾರ್ಗವಣೆ ನಿಯಮಗಳ ವ್ಯಾಪ್ತಿಗೆ ಬಾರದ ಕುರಿತು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ಮೊರೆ ಹೋಗಿದ್ದು, ಹಲವು ಶಿಕ್ಷಕರು ಈಗಾಗಲೇ ತಮ್ಮನ್ನು ಕಡ್ಡಾಯ ವರ್ಗಾವಣೆಗೆ ಪರಿಗಣಿಸದಂತೆ ನ್ಯಾಯಾಲಯದ ಆದೇಶ ತಂದಿದ್ದಾರೆ.

ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪ ನಿರ್ದೇಶಕರ ಕಚೇರಿಯಲ್ಲಿ ಕಡ್ಡಾಯ ವರ್ಗಾವಣೆ ಪಟ್ಟಿಗೆ ಶಿಕ್ಷಕರ ಹೆಸರು ಸಮೀಕ್ಷೆ ಮಾಡುವಲ್ಲಿ ಕೆಲವು ಶಿಕ್ಷಕರನ್ನು ಉದ್ದೇಶ ಪೂರ್ವಕವಾಗಿ ಪಟ್ಟಿಗೆ ಸೇರಿಸಲಾಗಿದೆ. ಮತ್ತೆ ಕೆಲವು ಶಿಕ್ಷಕರು ವರ್ಗಾವಣೆ ಪಟ್ಟಿಗೆ ಸೇರಲು ಸಿಬ್ಬಂದಿಗಳ ಆರೆಜ್ಞಾನವೂ ಕಾರಣ ಎಂಬ ಆರೋಪಗಳಿವೆ. ಇನ್ನು ಕೆಲವು ಶಿಕ್ಷಕರನ್ನು ರಾಜಕೀಯ ಪ್ರಭಾವದಿಂದಾಗಿ ನಿಯಮ ಮೀತಿ ಕಡ್ಡಾಯ ವರ್ಗಾವಣೆ ಪಟ್ಟಿಗೆ ಸೇರಿಸಲಾಗಿದೆ. ಮತ್ತೆ ಕೆಲವು ಶಿಕ್ಷಕರನ್ನು ನಿಮಯ ಮೀರಿ ವರ್ಗಾವಣೆ ಪಟ್ಟಿಗೆ ಸೇರಿಸಿ, ಅವರನ್ನು ಬೆದರಿಸಿ ದುಡ್ಡಿಗೆ ಬೇಡಿಕೆ ಇಡುವ ಹುನ್ನಾರವೂ ಅಡಗಿದೆ. ಮತ್ತೂಂದೆಡೆ ಕಡ್ಡಾಯ ವರ್ಗಾವಣೆಗೆ ಅರ್ಹತೆ ಇದ್ದರೂ ಪ್ರಭಾವಿಗಳ ಒತ್ತಡದಿಂದಾಗಿ ಕೆಲವು ಶಿಕ್ಷಕರನ್ನು ವರ್ಗಾವಣೆ ಪಟ್ಟಿಗೆ ಸೇರಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

Advertisement

ಹೀಗೆ ಶಿಕ್ಷಕರ ಕಡ್ಡಾಯ ವರ್ಗಾವಣೆ ಪಟ್ಟಿ ಹೊರ ಬೀಳುತ್ತಲೇ ಕೆಲವು ಶಿಕ್ಷಕರು ತಾವು ಕಡ್ಡಾಯ ವರ್ಗಾವಣೆ ವ್ಯಾಪ್ತಿಗೆ ಬರುತ್ತಿಲ್ಲ ಎಂಬ ಕುರಿತು ಅಗತ್ಯ ದಾಖಲೆ ಸಮೇತ ಆಕ್ಷೇಪಣೆ ಸಲ್ಲಿಸಿದರೂ ಅಧಿಕಾರಿಗಳು ಪರಿಗಣಿಸಿಲ್ಲ. ಅಲ್ಲದೇ ಕೆಲವು ಶಿಕ್ಷಕರು ಅವಧಿ ಮೀರಿ ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದು ಷರಾ ಹಾಕಿದ್ದಾರೆ ಎನ್ನಲಾಗಿದೆ.

ಶಿಕ್ಷಕರ ಕಡ್ಡಾಯ ವರ್ಗಾವಣೆ ಪ್ರಕರಣ ಜಿಲ್ಲೆಯ ಶಿಕ್ಷಣ ಇಲಾಖೆಯಲ್ಲಿ ಗೊಂದಲ ಹಾಗೂ ಹಲವು ಅನುಮಾನ ಹುಟ್ಟುಹಾಕಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಡಿರುವ ಯಡವಟ್ಟಿನಿಂದಾಗಿ ಜಿಲ್ಲೆಯ ಕೆಲವು ಶಿಕ್ಷಕರು ಕಡ್ಡಾಯ ವರ್ಗಾವಣೆ ವ್ಯಾಪ್ತಿಗೆ ಬರರಿದ್ದರು. ಪಟ್ಟಿಯಲ್ಲಿ ಅವರ ಹೆಸರು ಇರುವ ಕಾರಣ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ. ಕಡ್ಡಾಯ ವರ್ಗಾವಣೆಯನ್ನು ನೆಪ ಮಾಡಿಕೊಂಡು ಅಧಿಕಾರಿಗಳು ಕೆಲವು ಶಿಕ್ಷಕರನ್ನು ಗುರಿ ಮಾಡಿಕೊಂಡೊರುವ ದೂರುಗಳೂ ಕೇಳಿ ಬಂದಿವೆ. ಇತ್ತ ಕಡ್ಡಾಯ ವರ್ಗಾವಣೆ ವ್ಯಾಪ್ತಿಗೆ ಬಾರದ ಶಿಕ್ಷಕರು ಕೆಎಟಿ ನ್ಯಾಯಾಲಯದ ಆದೇಶದ ಪ್ರತಿ ಸಮೇತ ಶಿಕ್ಷಣ ಶಿಕ್ಷಣ ಇಲಾಖೆ ಅಧಿಕಾರಿಗಳು ತಮ್ಮನ್ನು ಕಡ್ಡಾಯ ವರ್ಗಾವಣೆಯಿಂದ ಮುಕ್ತಿಗೊಳಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಇದಕ್ಕೆ ಸೂಕ್ತ ಸ್ಪಂದನೆ ನೀಡಿಲ್ಲ ಎಂಬ ಅಸಮಾಧಾನ ನೊಂದ ಶಿಕ್ಷಕರಿಂದ ಕೇಳಿ ಬಂದಿದೆ. ಒಂದೊಮ್ಮೆ ನ್ಯಾಯಾಲಯದ ಆದೇಶ ಉಲ್ಲಂಘಿಸಿ ತಮ್ಮನ್ನು ವರ್ಗಾವಣೆ ಮಾಡಿದರೆ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ದ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲು ಬಾಧಿತ ಶಿಕ್ಷಕರು ಕಾನೂನು ಸಲಹೆಗಾರರ ಮೊರೆ ಹೋಗಿದ್ದಾರೆ.

ಇಂಥ ಎಲ್ಲ ಲೋಪಗಳ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿರುವ ಡಿಡಿಪಿಐ ಪ್ರಸನ್ನಕುಮಾರ, ನಿಯಮ ಮೀರಿ ವರ್ಗಾವಣೆ ಪಟ್ಟಿಗೆ ಸೇರಿರುವ ಹಾಗೂ ನ್ಯಾಯಾಲಯದ ಮೊರೆ ಹೋಗಿ ತಮ್ಮ ಪರ ಆದೇಶ ತಂದಿರುವ ಶಿಕ್ಷಕರ ಆಕ್ಷೇಪಣೇ ಹಾಗೂ ಅರ್ಜಿಯನ್ನು ಕೂಲಂಕುಷವಾಗಿ ಪರಿಗಣಿಸಿ, ಕಾನೂನು ರಿತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿ ಕಡ್ಡಾಯ ವರ್ಗಾವಣೆ ನೆಪದಲ್ಲಿ ಕೆಲವು ಶಿಕ್ಷಕರನ್ನು ನಿಮಯ ಮೀರಿ ವರ್ಗಾವಣೆ ಪಟ್ಟಿಗೆ ಸೇರಿಸಲಾಗಿದೆ. ಶಿಕ್ಷಣ ಇಲಾಖೆಯ ಸಿಬ್ಬಂದಿ ಮಾಡಿರುವ ತಪ್ಪಿಗೆ ಶಿಕ್ಷಕರು ಮಾನಸಿಕ ಹಿಂಸೆಯ ಶಿಕ್ಷೆ ಅನುಭವಿಸುವಂತಾಗಿದೆ. ಇದರಿಂದ ಕೆಲವು ಶಿಕ್ಷಕರು ಕೆಎಟಿ ನ್ಯಾಯಾಲಯದಿಂದ ವರ್ಗಾವಣೆ ಮಾಡದಂತೆ ಆದೇಶ ತಂದಿದ್ದರೂ ಅಧಿಕಾರಿಗಳು ಪರಿಗಣಿಸುತ್ತಿಲ್ಲ. ಒಂದೊಮ್ಮೆ ನ್ಯಾಯಾಲಯದ ಆದೇಶ ಮೀರಿ ವರ್ಗಾವಣೆ ಮಾಡಿದರೆ, ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲಾಗುತ್ತದೆ.
ಎಂ.ಎಚ್. ರೋಜೆವಾಲೆ ,
 ಬಾಧಿತ ಶಿಕ್ಷಕರ ಪರ ವಕೀಲ, ವಿಜಯಪುರ
ನಾನು ನಗರದ ಉರ್ದು ಶಾಲೆಯಲ್ಲಿ ಶಿಕ್ಷಕನಾಗಿದ್ದು, ನನ್ನ ಪತ್ನಿ ಮಲಘಾಣದ ಕೆಜಿಎಸ್‌ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಪತಿ-ಪತ್ನಿ ಪ್ರಕರಣದ ವ್ಯಾಪ್ತಿಯಲ್ಲಿದ್ದರೂ ನನ್ನ ಹೆಸರನ್ನು ಇಲಾಖೆ ಅಧಿಕಾರಿಗಳು ಕಡ್ಡಾಯ ವರ್ಗಾವಣೆ ಪಟ್ಟಿಗೆ ಸೇರಿಸಿ, ಕೌನ್ಸಿಲಿಂಗ್‌ಗೆ ಹಾಜರಾಗಲು ಸೂಚಿಸಿದ್ದಾರೆ. ಪಟ್ಟಿಯಿಂದ ಕೈ ಬಿಡಲು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಹೀಗಾಗಿ ನಾನು ಕೆಎಟಿ ಮೋರೆ ಹೋಗಿ, ಆದೇಶ ತಂದಿದ್ದರೂ ಪರಿಗಣಿಸದೇ ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿದೆ.
ಅಯಾಜ್‌ ಅಹ್ಮದ್‌ ಕೊಟ್ನಾಳ,
ಸಹ ಶಿಕ್ಷಕ, 7ನೇ ನಂ. ಉರ್ದು ಶಾಲೆ, ವಿಜಯಪುರ
ಕಡ್ಡಾಯ ವರ್ಗಾವಣೆ ಪಾರದರ್ಶಕ ನಡೆಯಲಿದೆ. ಸರ್ಕಾರಿ ನಿಯಮಾವಳಿ ವ್ಯಾಪ್ತಿಯಲ್ಲಿ ಮಿರಿಯೂ ಶಿಕ್ಷಕರನ್ನು ವರ್ಗಾವಣೆ ಪಟ್ಟಿಗೆ ಸೇರಿಸಿದ್ದರೆ ಹಾಗೂ ನ್ಯಾಯಾಲಯದ ಆದೇಶಗಳಿದ್ದರೆ ಕೌನ್ಸಿಲಿಂಗ್‌ ವೇಳೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಉದ್ದೇಶಪೂರ್ವಕವಾಗಿ ವರ್ಗಾವಣೆ ಪಟ್ಟಿಗೆ ಶಿಕ್ಷಕ ಹೆಸರು ಸೇರಿಸಿ, ಹಣಕ್ಕೆ ಬೇಡಿಕೆ ಇಟ್ಟಿರುವ ಕುರಿತು ನಿರ್ದಿಷ್ಟವಾಗಿ ಲಿಖೀತ ದೂರು ನೀಡಿದರೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. •ಪ್ರಸನ್ನಕುಮಾರ, ಉಪ ನಿರ್ದೇಶಕರು,
ಸಾರ್ವಜನಿಕ ಶಿಕ್ಷಣ ಇಲಾಖೆ, ವಿಜಯಪುರ
Advertisement

Udayavani is now on Telegram. Click here to join our channel and stay updated with the latest news.

Next