ವಿಜಯಪುರ: ಚರಂಡಿ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕದಲ್ಲಿ ಬಿದ್ದು ಮೂವರು ಮಕ್ಕಳ ದುರಂತ ಘಟನೆ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ತಂಡ ನಗರಕ್ಕೆ ಭೇಟಿ ನೀಡಿದೆ.
ಶುಕ್ರವಾರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸುಂಬೆ, ಶೇಖರಗೌಡ ರಾಮತ್ನಾಳ ಅವರ ತಂಡ ವಿಜಯಪುರ ನಗರಕ್ಕೆ ಭೇಟಿ ನೀಡಿದ್ದು, ಮೇ 13 ರಂದು ದುರಂತದಲ್ಲಿ ಮೂವರು ಮಕ್ಕಳು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ಪೋಷಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದೆ.
ನಗರದ ಇಂಡಿ ರಸ್ತೆಯಲ್ಲಿರುವ ವಿಜಯಪುರ ನಗರದ ಒಳಚರಂಡಿ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಚರಂಡಿ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕದಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಬರುವ ಒಂದು ವಾರದೊಳಗೆ ಘಟಕದ ಸುತ್ತಲೂ ತಂತಿಬೇಲಿ ಅಳವಡಿಸಿ, ಗೇಟ ಹಾಕಿ, ಸಿ.ಸಿ. ಕೆಮೆರಾ ಕಣ್ಗಾವಲು ವ್ಯವಸ್ಥೆ ಮಾಡಬೇಕು. ಇದಲ್ಲದೇ ಮೃತ ಮಕ್ಕಳ ಪೋಷಕರಿಗೆ ಮಹಾನಗರ ಪಾಲಿಕೆ ಸೂಕ್ತ ಪರಿಹಾರವನ್ನೂ ನೀಡಬೇಕು ಎಂದು ಸೂಚಿಸಿದರು.
ಬರುವ ಒಂದು ವಾರದಲ್ಲಿ ಘಟಕದ ಸುತ್ತ ಸುರಕ್ಷತಾ ಕ್ರಮ ಹಾಗೂ ಮೃತ ಮಕ್ಕಳ ಪೋಷಕರಿಗೆ ಪರಿಹಾರ ವಿತರಿಸದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ದೂರು ನೀಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರಕ್ಕೂ ಈ ಬಗ್ಗೆ ವರದಿ ನೀಡುವುದಾಗಿ ಎಚ್ಚರಿಸಿದರು.