ವಿಜಯಪುರ: ವಿಜಯಪುರದ ಗಾಂಧಿ ವೃತ್ತದ ಪಕ್ಕದಲ್ಲಿರುವ ರಸ್ತೆಗೆ ಹೊಂದಿಕೊಂಡಿರುವ ನೆಹರೂ ಮಾರುಕಟ್ಟೆಯಲ್ಲಿದ್ದ ತರಕಾರಿಯ ಗೂಡಂಗಡಿಗಳನ್ನು ಗುರುವಾರ ತೆರವುಗೊಳಿಸಲಾಯಿತು. ಪೊಲೀಸ್ ಬಿಗಿ ಭದ್ರತೆ ನಡುವೆ ನಸುಕಿನ ಆರು ಗಂಟೆ ಸುಮಾರಿಗೆ ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ ನೇತೃತ್ವದ ಪಾಲಿಕೆ ಅ ಧಿಕಾರಿಗಳ ತಂಡವು ಈ ಕಾರ್ಯಾಚರಣೆ ನಡೆಸಿತು. ನೆಹರೂ ಮಾರುಕಟ್ಟೆಯಲ್ಲಿದ್ದ ತರಕಾರಿ ಮಾರುಕಟ್ಟೆಯ ಶೆಡ್, ಗೂಡಂಗಡಿ, ನಾಮಫಲಕಗಳನ್ನು ಮಹಾನಗರ ಪಾಲಿಕೆಯ ಜೆಸಿಬಿ ಯಂತ್ರಗಳು ತೆರವು ಗೊಳಿಸಿದವು. ಮಹಾನಗರ ಪಾಲಿಕೆಯ ನೂರಾರು ಪೌರ ಕಾರ್ಮಿಕರು ತೆರವುಗೊಳಿಸಿದ ಪತ್ರಾಸ್ ಶೆಡ್, ಪ್ಲೆಕ್ಸ್ ಮೊದಲಾದವುಗಳನ್ನು ಪಾಲಿಕೆಯ ಟ್ರ್ಯಾಕ್ಟರ್‌ಗೆ ತುಂಬಿದರು.
ನಸುಕಿನ ಜಾವದಲ್ಲಿಯೇ ಕಾರ್ಯಾಚರಣೆ ನಡೆಯುವ ಹಿನ್ನೆಲೆಯಲ್ಲಿ ನಿನ್ನೆಯೇ ಪಾಲಿಕೆ ಅ ಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು. ಪ್ರಸ್ತುತ ತರಕಾರಿ ವ್ಯಾಪಾರ ನಡೆಯುವ ರಸ್ತೆಯನ್ನು ಸೂಕ್ತ ರೀತಿಯಲ್ಲಿ ಅಭಿವೃದ್ಧಿ ಪಡಿಸಿ, ಅದನ್ನು ಇಂಡಿ ರಸ್ತೆಯವರೆಗೆ ಸಂಪರ್ಕ ಕಲ್ಪಿಸಿ ನಗರದ ಹೃದಯ ಭಾಗದಲ್ಲಿ ಇನ್ನೊಂದು ಸಂರ್ಪಕ ರಸ್ತೆ ನಿರ್ಮಾಣದ ದೃಷ್ಟಿಯಿಂದ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಕಾನೂನಿನ ನಿಯಮಾವಳಿಗಳನ್ನು ಪಾಲಿಸಿಯೇ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಶ್ರೀಹರ್ಷ ಶೆಟ್ಟಿ ವಿವರಿಸಿದರು.
ವ್ಯಾಪಾರಸ್ಥರಿಂದ ಧರಣಿ: ಅಂಗಡಿ, ಶೆಡ್ ಹಾಗೂ ಗೂಡಂಗಡಿಗಳನ್ನು ಕಳೆದುಕೊಂಡ ವ್ಯಾಪಾರಸ್ಥರು ಕಣ್ಣೀರು ಸುರಿಸಿ ಅಳಲು ತೋಡಿಕೊಂಡರು. ನಂತರ ಮಾರುಕಟ್ಟೆಯ ಪ್ರವೇಶಿಸುವ ಸ್ಥಳದಲ್ಲಿಯೇ ಜಮಾಯಿಸಿದ ನೂರಾರು ವ್ಯಾಪಾರಸ್ಥರು ಅಲ್ಲಿಯೇ ಮೌನ ಪ್ರತಿಭಟನೆ ನಡೆಸಿ ಮಹಾನಗರ ಪಾಲಿಕೆಯ ಧೋರಣೆ ಖಂಡಿಸಿದರು. ಪರ್ಯಾಯ ಜಾಗ ಕಲ್ಪಿಸದೇ ಏಕಾಏಕಿ ಮಾರುಕಟ್ಟೆ ತೆರವುಗೊಳಿಸಿದ್ದರಿಂದ ನಮಗೆ ದಿಕ್ಕು ತೋಚದಂತಾಗಿದೆ. ನಮ್ಮ ಉಪಜೀವನ ನಡೆಯುವುದಾದರೂ ಹೇಗೆ? ಎಂದು ಅಳಲು ತೋಡಿಕೊಂಡರು.
ಕಾಂಗ್ರೆಸ್ ಮುಖಂಡ ಅಬ್ದುಲ್‌ಹಮೀದ್ ಮುಶ್ರೀಪ್, ಅಬ್ದುಲ್‌ರಜಾಕ ಹೊರ್ತಿ, ನ್ಯಾಯವಾದಿ ಸೈಯ್ಯದ್ ಆಸೀಫುಲ್ಲಾ ಖಾದ್ರಿ, ಸಲೀಂ ಮುಂಡೇವಾಡಿ, ಫಯಾಜ್ ಕಲಾದಗಿ, ಇರ್ಫಾನ್ ಶೇಖ, ಮೈಣುದ್ದೀನ್ ಬೀಳಗಿ ಮೊದಲಾದವರು ಧರಣಿಗೆ ಬೆಂಬಲ ವ್ಯಕ್ತಪಡಿಸಿದರು. ನಂತರ ಈ ಎಲ್ಲ ಮುಖಂಡರ ನೇತೃತ್ವದಲ್ಲಿ ತರಕಾರಿ ವ್ಯಾಪಾರಸ್ಥರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.