Advertisement

ಸಮನ್ವಯ ಕೊರತೆಯಿಂದ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತ

10:41 AM Jun 12, 2019 | Naveen |

ವಿಜಯಪುರ: ವಿಶ್ವದೆಲ್ಲೆಡೆ ಪ್ರತಿ ವರ್ಷ ಜೂ. 12ರಂದು ಬಾಲಕಾರ್ಮಿಕರ ವಿರೋಧಿ ದಿನ ಆಚರಿಸಲಾಗುತ್ತದೆ. ಮಕ್ಕಳ ಬಾಲ್ಯದ ಹಕ್ಕುಗಳ ರಕ್ಷಣೆಗಾಗಿ ವಿವಿಧ ಇಲಾಖೆಗಳು, ಹತ್ತಾರು ಸಂಸ್ಥೆಗಳು ಕೆಲಸ ಮಾಡಿದರೂ ಇಲಾಖೆಗಳ ಮಧ್ಯೆ ಸಮನ್ವಯ ಕೊರತೆಯಿದೆ. ಅಧಿಕಾರ-ವ್ಯಾಪ್ತಿ ನೆಪದಲ್ಲಿ ನುಣುಚಿಕೊಳ್ಳುವ ವ್ಯವಸ್ಥೆಯಿಂದ ಜಿಲ್ಲೆಯಲ್ಲಿ ಇನ್ನೂ ಸಾವಿರಾರು ಮಕ್ಕಳು ಬೀದಿಯಲ್ಲಿ ನಿಂತಿದ್ದಾರೆ. ಇಂಥ ಸ್ಥಿತಿಯಲ್ಲೂ ಇದೀಗ ಮತ್ತೂಮ್ಮೆ ಬಾಲಕಾರ್ಮಿಕರ ವಿರೋಧಿ ದಿನಾಚರಣೆಗೆ ಬಸವನಾಡು ಸಿದ್ಧವಾಗುತ್ತಿದೆ.

Advertisement

ಬಾಲಕಾರ್ಮಿಕರ ಹಿತ ರಕ್ಷಣೆ, ಪುನರ್ವಸತಿ, ಶಿಕ್ಷಣ ಅಂತೆಲ್ಲ ಸರ್ಕಾರ ಹಲವು ಇಲಾಖೆಗಳ ಅಧಿಕಾರಿಗಳ ಮೂಲಕ ಮಕ್ಕಳನ್ನು ಬಾಲಕಾರ್ಮಿಕ ವ್ಯವಸ್ಥೆಯಿಂದ ಮುಕ್ತಗೊಳಿಸಲು ನಿಯೋಜಿಸಿದೆ. ಕಾರ್ಮಿಕ ಇಲಾಖೆ, ಬಾಲಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬಾಲಕಾರ್ಮಿಕರ ಯೋಜನಾ ಸಂಘ, ಮಕ್ಕಳ ಸಹಾಯವಾಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಾಲ ನ್ಯಾಯ ಮಂಡಳಿ, ಮಕ್ಕಳ ಹಕ್ಕುಗಳ ಆಯೋಗ ಹೀಗೆ ಹಲವು ವ್ಯವಸ್ಥೆಗಳಿವೆ.

ಮಕ್ಕಳ ಹೆಸರಿನಲ್ಲೇ ಹಲವು ಸ್ಥರಗಳಲ್ಲಿ ಹತ್ತಾರು ಸರ್ಕಾರಿ-ಸರ್ಕಾರೇತರ ಸಂಸ್ಥೆಗಳು ಬಾಲಾಕಾರ್ಮಿಕರನ್ನು ಮುಖ್ಯವಾಹಿನಿಗೆ ತರುತ್ತೇವೆ ಎಂದೇ ಕೆಲಸ ಮಾಡುತ್ತಿವೆ. ಇದಕ್ಕಾಗಿ ಸರ್ಕಾರ ಕೋಟಿ ಕೋಟಿ ರೂ. ವೆಚ್ಚ ಮಾಡುತ್ತಿದೆ. ಇದರ ಹೊರತಾಗಿ ಜಿಲ್ಲೆಯ ಬಾಲ ಕಾರ್ಮಿಕರ ಸಂಖ್ಯೆಯನ್ನು ಶೂನ್ಯಕ್ಕೆ ತರಲು ಸಾಧ್ಯವಾಗಿಲ್ಲ.

ಬಾಲಕಾರ್ಮಿಕ ಕಾಯ್ದೆ 1986ರನ್ವಯ ಯಾವುದೇ ಉದ್ದಿಮೆಗಳಲ್ಲಿ 14 ವರ್ಷದೊಳಗಿನ ಹಾಗೂ ತಿದ್ದುಪಡಿ ಕಾಯ್ದೆ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ 2016 ಕಾಯ್ದೆಯನ್ವಯ ಸೂಚಿಸಿದ ಅಪಾಯಕಾರಿ ಉದ್ದಿಮೆಯಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡವರಿಗೆ 50 ಸಾವಿರ ರೂ. ದಂಡ ಅಥವಾ 2 ವರ್ಷದವರೆಗೆ ಜೈಲು ಶಿಕ್ಷೆಗೆ ಅವಕಾಶವಿದೆ ಎಂದು ಎಚ್ಚರಿಕೆಯನ್ನೂ ನೀಡಲಾಗುತ್ತದೆ. ಇದರ ಜಾಗೃತಿಗಾಗಿ ಜೂ. 12ರಂದು ಜಿಲ್ಲೆಯಲ್ಲೂ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಹಮ್ಮಿಕೊಳ್ಳಲಾಗಿದೆ. ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳದಂತೆ ಪ್ರತಿ ವರ್ಷದಂತೆ ಬೀದಿ ನಾಟಕ, ಜಾಥಾ ಸೇರಿದಂತೆ ಬಾಲಕಾರ್ಮಿಕ ಕುರಿತು ಅಗತ್ಯ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ವೇದಿಕೆ ಭಾಷಣಗಳು, ಬಾಲಕಾರ್ಮಿಕರ ವಿರೋಧಿ ವ್ಯವಸ್ಥೆಯಲ್ಲಿ ಕೆಲಸ ಮಾಡಿದ್ದಾರೆ ಎಂದು ಸಾಧಕರಿಗೆ ಸನ್ಮಾನಗಳು ನಡೆಯುತ್ತವೆ.

ಇಷ್ಟೆಲ್ಲದ ಮಧ್ಯೆ 2018ರಲ್ಲಿ ಜಿಲ್ಲೆಯಲ್ಲಿ ಬಾಲ ಕಾರ್ಮಿಕರ ಇರುವಿಕೆ ಕುರಿತು ಸರ್ಕಾರೇತರ 7 ಸಂಸ್ಥೆಗಳು ಸಮೀಕ್ಷೆ ನಡೆಸಿದ್ದವು. ಈ ಸಮೀಕ್ಷೆಗಾಗಿ ಸರ್ಕಾರ ಸುಮಾರು 1 ಲಕ್ಷ ರೂ. ವೆಚ್ಚ ಮಾಡಿತು. ಈ ಸಮೀಕ್ಷೆಯಲ್ಲಿ ಜಿಲ್ಲೆಯಲ್ಲಿ 69 ಮಕ್ಕಳು ಮಾತ್ರ ಬಾಲಕಾರ್ಮಿಕ ವ್ಯವಸ್ಥೆಯಲ್ಲಿ ದುಡಿಯುತ್ತಿದ್ದಾರೆ. ಇದರಲ್ಲಿ ವಿಜಯಪುರ ನಗರದಲ್ಲಿ 5, ಮುದ್ದೇಬಿಹಾಳ ತಾಲೂಕಿನ ತಾಳಿಕೋಟೆ-4, ಮುದ್ದೇಬಿಹಾಳ ಪಟ್ಟಣ-12, ಸಿಂದಗಿ ಪಟ್ಟಣ-12 ಆಲಮೇಲ-4, ದೇವರಹಿಪ್ಪರಗಿ-10 ಸೇರಿದಂತೆ ಸಿಂದಗಿ ತಾಲೂಕಿನಲ್ಲಿ 26, ಇಂಡಿ ಪಟ್ಟಣದಲ್ಲಿ 7, ಚಡಚಣ ಪಟ್ಟಣದಲ್ಲಿ 15 ಸೇರಿದಂತೆ ಇಂಡಿ ತಾಲೂಕಿನಲ್ಲಿ ಒಟ್ಟು 22 ಬಾಲ ಕಾರ್ಮಿಕರಿದ್ದಾರೆ ಎಂದು ವಿಳಾಸ ಸಹಿತ ಬಾಲ ಕಾರ್ಮಿಕ ಮಕ್ಕಳ ಪಟ್ಟಿ ಮಾಡಿತ್ತು.

Advertisement

ಸರ್ಕಾರೇತರ ಸಂಸ್ಥೆಗಳು ನೀಡಿದ ವರದಿ ಅಧಾರದಲ್ಲಿ ಕಾರ್ಮಿಕ ಇಲಾಖೆ ಬಾಲಕಾರ್ಮಿಕರು ಇರುವ ಸ್ಥಳಗಳಿಗೆ ಹೋದರೆ ಅಲ್ಲಿ ಮಕ್ಕಳೇ ಇರಲಿಲ್ಲ. ಹೀಗಾಗಿ ಬಾಲಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳ ಸಂರಕ್ಷಣೆ ಮಾಡಿ ಪುನರ್ವಸತಿ ಕಲ್ಪಿಸಿ, ಶಿಕ್ಷಣ ಕೊಡಿಸಲು ಬಾಲಕಾರ್ಮಿಕರ ಶಾಲೆ ತೆರೆಯುವ ಕೆಲಸವೇ ಅಗಲಿಲ್ಲ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಹಾಗಾದರೆ ಸರ್ಕಾರೇತರ ಸಂಸ್ಥೆಗಳು ನಡೆಸಿದ ಸಮೀಕ್ಷೆ ಸುಳ್ಳೆ ಆಥವಾ ಅಧಿಕಾರಿಗಳು ನೀಡುತ್ತಿರುವ ಹೇಳಿಕೆಗಳು ಸುಳ್ಳೇ ಎಂಬುದು ಸಾರ್ವಜನಿಕರನ್ನು ಕಾಡುವಂತೆ ಮಾಡುತ್ತಿವೆ. ಹೊಟೇಲ್, ಡಾಬಾ, ಗ್ಯಾರೇಜು, ವಿವಿಧ ಮಾರುಕಟ್ಟೆಗಳು, ಇಟ್ಟಂಗಿ ಭಟ್ಟಿಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ಈಗಲೂ ಸಾರ್ವನಿಕರ ಕಣ್ಣೆದುರಿನಲ್ಲೇ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವುದು ನಡೆದೇ ಇದೆ. ಮತ್ತೂಂದೆಡೆ ಬಡತನನ ಬೇಗೆಯಲ್ಲಿ ಬೇಯುತ್ತಿರುವ ಕುಟುಂಬಗಳ ಮಕ್ಕಳು ಬಾಲಕಾರ್ಮಿಕ ವ್ಯವಸ್ಥೆಯಲ್ಲಿ ಸಾವಿರಾರು ಮಕ್ಕಳು ಧ್ವನಿ ಕಳೆದುಕೊಂಡು, ಅಕ್ಷರ ಲೋಕದಿಂದಲೇ ದೂರ ಉಳಿದಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಇನ್ನಾದರೂ ಮಕ್ಕಳ ಹೆಸರಿನಲ್ಲಿ ಕೆಲಸ ಮಾಡುವ ಎಲ್ಲ ಇಲಾಖೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತಂದು, ಹೊಣೆಗಾರಿಕೆಯನ್ನು ಬೇರೆಯವರತ್ತ ಹೊರಿಸುವ ಬದಲು ಪರಸ್ಪರ ಸಮನ್ವಯದಿಂದ ಬದ್ಧತೆ ಪಾಠ ಮಾಡಿಸಬೇಕು. ಆ ಮೂಲಕ ಬಾಲ ಕಾರ್ಮಿಕರ ವ್ಯವಸ್ಥೆಯನ್ನು ಸಂಪೂರ್ಣ ನಿರ್ಮೂಲನೆಗೆ ಸರ್ಕಾರ ಮಾಡುತ್ತಿರುವ ಪ್ರಯತ್ನ, ವ್ಯಯಿಸುತ್ತಿರುವ ಕೋಟಿ ಕೋಟಿ ರೂ. ಹಣಕ್ಕೆ ಅರ್ಥ ಬರುತ್ತದೆ. ಇಲ್ಲವಾದಲ್ಲಿ ಬಾಲ ಕಾರ್ಮಿಕ ಪದ್ಧತಿ ನಿಗ್ರಹ ಕಾಯ್ದೆ ಅಣಕವಾಗುತ್ತದೆ, ಬಾಲ ಕಾರ್ಮಿಕರ ನಿರ್ಮೂಲನೆ ಕನಸಾಗಿ ಉಳಿಯುತ್ತದೆ.

ಕಳೆದ ಮೇ 18ರಂದು ‘ಉದಯವಾಣಿ’ ಪತ್ರಿಕೆ ‘ಸ್ಲಂ ಮಕ್ಕಳೆ ಇಲ್ಲಿ ಕಾರ್ಮಿಕರು!’ ತಲೆ ಬರಹದಲ್ಲಿ ವಿಶೇಷ ವರದಿ ಪ್ರಕಟಿಸಿ, ನಗರದ ಎಪಿಎಂಸಿ ಹಣ್ಣು-ತರಕಾರಿ ಮಾರುಕಟ್ಟೆಯಲ್ಲಿ ಬಾಲ ಕಾರ್ಮಿಕರ ದುಡಿಯುತ್ತಿರುವ ಕುರಿತು ಬೆಳಕು ಚೆಲ್ಲಿತ್ತು. ಈ ಮಕ್ಕಳ ರಕ್ಷಣೆಗಾಗಿ ಕಾರ್ಯಾಚರಣೆಗೆ ಇಳಿದಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗೆ ಮಕ್ಕಳ ಪಾಲಕರು ಅಡ್ಡಿಪಡಿಸಿ ತಮ್ಮ ಮಕ್ಕಳನ್ನು ಬಾಲಕಾರ್ಮಿಕರ ವ್ಯವಸ್ಥೆಯಲ್ಲೇ ಪೋಷಿಸಲು ಪ್ರೋತ್ಸಾಹಿಸಿದ್ದು ಕಂಡು ಬಂದಿದೆ. ಹೀಗಾಗಿ ಮೇ 27ರಂದು ಬಾಲಕಾರ್ಮಿಕ ಇಲಾಖೆಗೆ ಪತ್ರ ಬರೆದಿರುವ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ತಕ್ಷಣ ಮಕ್ಕಳ ರಕ್ಷಣೆ ಮಾಡಿ, ಪುರ್ನವಸತಿ ಕಲ್ಪಿಸುವಂತೆ ಪತ್ರ ಬರೆದಿದ್ದಾರೆ. ಆದರೆ ಈವರೆಗೆ ಈ ಮಕ್ಕಳ ರಕ್ಷಣೆಯಾಗಿಲ್ಲ. ಅಧಿಕಾರಿಗಳು ಮಾತ್ರ ಮಕ್ಕಳ ರಕ್ಷಣೆಯಾಗಿದೆ ಎಂದು ಮಾಹಿತಿ ನೀಡುತ್ತಿರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ.

ಎಪಿಎಂಸಿ ಆವರಣದಲ್ಲಿ ದುಡಿಯುತ್ತಿದ್ದ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಿಸಿ, ಪುನರ್ವಸತಿ ಕಲ್ಪಿಸಿದೆ. ಇದಲ್ಲದೇ ನಮ್ಮ ಇಲಾಖೆ ಕೂಡ 12 ಮಕ್ಕಳನ್ನು ರಕ್ಷಿಸಿದೆ. 2018ರಲ್ಲಿ ಎನ್‌ಜಿಒಗಳು ನಡೆಸಿದ ಸಮೀಕ್ಷೆ ಸ್ಥಳಗಳಿಗೆ ಹೋದರೆ ಮಕ್ಕಳೇ ಕಂಡು ಬಂದಿಲ್ಲ. ಹೀಗಾಗಿ ಸಮೀಕ್ಷಾ ವರದಿ ಅನುಮಾನ ಮೂಡಿಸುತ್ತಿದೆ.
ಅಶೋಕ ಬಾಳಿಕಟ್ಟಿ
ಕಾರ್ಮಿಕ ಇಲಾಖೆ ಅಧಿಕಾರಿ, ವಿಜಯಪುರ

ಮಕ್ಕಳ ರಕ್ಷಣಾ ಘಟಕದಿಂದ ಎಪಿಎಂಸಿ ಆವರಣದಲ್ಲಿ ಬಾಲ ಕಾರ್ಮಿಕರನ್ನು ರಕ್ಷಿಸುವುದಕ್ಕೆ ಪಾಲಕರ ಆಡ್ಡಿಪಡಿಸಿದರು. ಹೀಗಾಗಿ ನಮ್ಮಿಂದ ಮಕ್ಕಳ ರಕ್ಷಣೆ ಆಸಾಧ್ಯವಾಗಿದ್ದು, ಪುನರ್ವಸತಿಯೂ ಸಾಧ್ಯವಾಗಿಲ್ಲ. ಕಾರ್ಮಿಕ ಇಲಾಖೆಗೆ ಈ ಮಕ್ಕಳ ರಕ್ಷಣೆ ಮಾಡಿ, ಪುರ್ನಸತಿ ಕಲ್ಪಿಸುವಂತೆ ಪತ್ರ ಬರೆಯಲಾಗಿದೆ. ಈ ಕುರಿತು ಎಪಿಎಂಸಿ ಪೊಲೀಸ್‌ ಠಾಣೆಗೂ ಪತ್ರ ಬರೆಯಲಾಗಿದೆ.
ನಿರ್ಮಲಾ ಸುರಪುರ
ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಿಜಜಯಪುರ

Advertisement

Udayavani is now on Telegram. Click here to join our channel and stay updated with the latest news.

Next