ವಿಜಯಪುರ: ರಾಷ್ಟ್ರೀಯ ಕ್ಷಯ ರೋಗ ನಿಗ್ರಹಕ್ಕಾಗಿ ಸರ್ಕಾರ ರೂಪಿಸಿರುವ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನ ಮಾಡಲು ಜು.15ರಿಂದ 27ರ ವರೆಗೆ ಮನೆ-ಮನೆಗೆ ಭೇಟಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸದರಿ ಕಾರ್ಯಕ್ರಮ ಯಶಸ್ವಿಯಾಗಿಸಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಮೋಹನಕುಮಾರಿ ಸೂಚನೆ ನೀಡಿದರು.
ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಪ್ಲೋರೋಸಿಸ್, ಆರ್‌ಎನ್‌ಟಿಸಿಪಿ ಡೆಂಘೀ, ಮಲೇರಿಯಾ ಹಾಗೂ ತಂಬಾಕು ಕಾರ್ಯಕ್ರಮಗಳ ಕುರಿತ ತಾಲೂಕು ಮಟ್ಟದ ಚಾಲನಾ ಸಮಿತಿ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ರಾಷ್ಟ್ರೀಯ ಕ್ಷಯ ರೋಗ ಕಾರ್ಯಕ್ರಮ ಪರಿಣಾಮಕಾರಿ ಅನುಷ್ಠಾನಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಸೂಕ್ಷ್ಮ ಪ್ರದೇಶಗಳಲ್ಲಿ ಮನೆ-ಮನೆಗೆ ತೆರಳಿ ಕ್ಷಯ ರೋಗದ ಲಕ್ಷಣಗಳ ಕುರಿತು ಜಾಗೃತಿ ಮೂಡಿಸಬೇಕು. ಚಿಕಿತ್ಸೆ ಅವಶ್ಯಕ ಇರುವವರಿಗೆ ಕಫ-ಎಕೆúೕಗೊಳಪಡಿಸಿ, ಚಿಕಿತ್ಸೆ ನೀಡಲು ಮುಂದಾಗಬೇಕು ಎಂದರು.
ಈ ಕಾರ್ಯಕ್ರಮಕ್ಕೆ 109 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. 116 ತಂಡಗಳನ್ನು ರಚಿಸಿ ಕ್ರಮ ಜರುಗಿಸಬೇಕು. ಸಾರ್ವಜನಿಕರು ಕ್ಷಯ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಸಮೀಪದ ಸರಕಾರಿ ಆಸ್ಪತ್ರೆಗೆ ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಲು ಜನರಿಗೆ ಸಲಹೆ ನೀಡಬೇಕು ಎಂದು ಸೂಚಿಸಿದರು.
ಆರೋಗ್ಯಾಧಿಕಾರಿ ಡಾ| ಗುಂಡಬಾವಡಿ ಮಾತನಾಡಿ, ಪ್ಲೋರೋಸಿಸ್ ತಡೆಗಟ್ಟಲು ಕ್ಯಾಲ್ಸಿಯಂ ಇರುವ ಬೆಲ್ಲ, ನುಗ್ಗೆಕಾಯಿ ಮತ್ತು ಇ-ಅನ್ನಾಂಗ ಇರುವ ಮಳಕೆ ಕಾಳು, ಹಸಿರು ತರಕಾರಿ ಸೇವನೆ ಮಾಡಬೇಕು. ಕರಿ ಉಪ್ಪು, ಅಡಕಿ, ತಂಬಾಕು ಇವುಗಳಲ್ಲಿ ಹೆಚ್ಚಿನ ಪ್ಲೋರೈಡ್ ಇರುವುದರಿಂದ ಸೇವನೆ ತ್ಯಜಿಸಬೇಕು ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಆರ್. ಬಾಗವಾನ್ ಮಾತನಾಡಿ, ಸೊಳ್ಳೆಯಿಂದ ಕಚ್ಚುವ ರೋಗಗಳಾದ ಮಲೇರಿಯಾ-ಡೆಂಘೀ, ಚಿಕೂನ್ ಗುನ್ಯಾ, ಮೆದುಳು ಜ್ವರ ಇತ್ಯಾದಿ ತಡೆಟ್ಟಲು ಆರೋಗ್ಯ ಇಲಾಖೆಯಿಂದ ಪ್ರತಿ ಶುಕ್ರವಾರ, ಶನಿವಾರ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಡೆಂಘೀ-ಚಿಕೂನ್‌ಗುನ್ಯಾ ರೋಗಗಳನ್ನು ನಿಯಂತ್ರಿಸಲು ಸಾರ್ವಜನಿಕರೂ ಸಹ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಸಾರ್ವಜನಿಕರು ಆರೋಗ್ಯ ಇಲಾಖೆ ನೀಡಿರುವ ಸಲಹೆಗಳನ್ನು ತಪ್ಪದೇ ಪಾಲಿಸಿದಲ್ಲಿ ಮಾತ್ರವೇ ರೋಗಗಳನ್ನು ನಿಯಂತ್ರಣ ಮಾಡಲು ಸಾಧ್ಯ ಎಂದು ವಿವರಿಸಿದರು.
ವಿಜಯ ಮಹಾಂತೇಶ ಪ್ಲೋರೋಸಿಸ್ ಕುರಿತು ವಿವರಿಸಿದರು. ಹಿರಿಯ ಆರೋಗ್ಯ ಸಹಾಯಕ ಎಸ್.ಎಸ್.ಚಟ್ಟೇರ ವಂದಿಸಿದರು.