ವಿಜಯಪುರ: ದೈಹಿಕ ಶಿಕ್ಷಣ ಕ್ಷೇತ್ರದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಜ್ಞಾನವನ್ನು ಮಕ್ಕಳಿಗೆ ನೀಡಲು ಹೆಚ್ಚು ಹೆಚ್ಚು ಕೃತಿಗಳ ಅಗತ್ಯವಿದೆ. ಅದರಲ್ಲಿಯೂ ದೈಹಿಕ ಶಿಕ್ಷಣ ಕುರಿತು ಕನ್ನಡ ಮಾಧ್ಯಮ ಪುಸ್ತಕಗಳು ಕಡಿಮೆ ಇರುವ ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ ಕೃತಿಯು ಹೊರ ಬಂದಿರುವುದು ಔಚಿತ್ಯಪೂರ್ಣ ಎಂದು ಕಲಬುರಗಿ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ| ಎಂ.ಎಸ್. ಪಾಸೋಡಿ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಜ್ಞಾನಶಕ್ತಿ ಆವರಣದ ಶಿಕ್ಷಣ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಹಾಯಕ ಪ್ರಾಧ್ಯಾಪಕ ಡಾ| ಹನುಮಂತಯ್ಯ ಪೂಜಾರಿ ರಚಿಸಿದ ದೈಹಿಕ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೊರ ಜಗತ್ತಿನ ಬುದ್ಧಿವಂತರು ಅಕ್ಷರ ಜಗತ್ತಿನ ಮಿತಿಯನ್ನು ತಮ್ಮ ಜಗತ್ತಿಗೆ ಹೋಲಿಕೆ ಮಾಡಬಾರದು. ಅಕ್ಷರ ಜಗತ್ತಿನಿಂದ ಬಂದವರು ವಿಜ್ಞಾನಿಗಳಾಗುತ್ತಾರೆ. ಸಮಾಜದ ದೊಡ್ಡ ಜ್ಞಾನವು ಪುಸ್ತಕಗಳಲ್ಲಿರುತ್ತದೆ. ಪುಸ್ತಕ ಬರೆಯುವುದು ಸುಲಭದ ಕೆಲಸವಲ್ಲ, ಅದು ನಿರಂತರ ಓದಿನ ಪರಿಶ್ರಮದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಮಹಿಳಾ ವಿವಿ ಕುಲಸಚಿವೆ ಆರ್.ಸುನಂದಮ್ಮ ಮಾತನಾಡಿ, ಮೊದಲು ನಾವು ಅಕ್ಷರಗಳನ್ನು ಜೋಡಿಸುವ ಕಲೆಯನ್ನು ರೂಢಿಸಿಕೊಳ್ಳಬೇಕು. ಅಂದಾಗ ಮಾತ್ರ ಒಂದು ವಾಕ್ಯವನ್ನು ರಚಿಸಲು ಸಾಧ್ಯವಾಗುತ್ತದೆ. ಸವಲತ್ತುಗಳು ಸಿಕ್ಕಾಗ ಅವುಗಳನ್ನು ಅನುಭವಿಸಿ, ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಅವಕಾಶಗಳನ್ನು ಬಳಸದಿದ್ದರೆ ನಾವು ಮೂರ್ಖರಾಗುತ್ತೇವೆ. ನಮ್ಮ ಬದುಕನ್ನು ಕಟ್ಟಿಕೊಡುವುದು ನಮ್ಮ ಕಾಯಕ. ಆದ್ದರಿಂದ ನಾವು ನಿರಂತರ ಕಾಯಕದಲ್ಲಿ ತೊಡಗಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ನಾವು ಸಣ್ಣ ಸಣ್ಣ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಅದು ನಮ್ಮನ್ನು ಒಂದು ಹೆಜ್ಜೆ ಮುಂದೆ ಕರೆದುಕೊಂಡು ಹೋಗುವುದಕ್ಕೆ ಸಹಾಯ ಮಾಡುತ್ತದೆ. ನಮ್ಮ ನಿಜವಾದ ಮೌಲ್ಯಮಾಪಕರು ವಿದ್ಯಾರ್ಥಿಗಳೇ ಆಗಿರುತ್ತಾರೆ. ದೈಹಿಕ ಚಟುವಟಿಕೆ, ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆ ಇವು ಒಬ್ಬ ಅಧ್ಯಾಪಕನಿಗೆ ಇರಬೇಕಾದ ಮುಖ್ಯ ಲಕ್ಷಣ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿ ಕುಲಪತಿ ಪ್ರೊ| ಸಬಿಹಾ ಮಾತನಾಡಿ, ಬರವಣಿಗೆಯಲ್ಲಿ ಆತಂಕ, ಅತೃಪ್ತಿ, ಅಂಜಿಕೆ, ಇರುವುದು ಸಹಜ. ಆದರೆ ನಾವು ಅವುಗಳನ್ನೆಲ್ಲ ಮೆಟ್ಟಿ ನಿಲ್ಲಬೇಕು. ಮೊದಲು ನಮ್ಮ ಸಾಮರ್ಥ್ಯವನ್ನು ತುಲನೆ ಮಾಡಿಕೊಳ್ಳುವ ವಿಮರ್ಶಕರಾಗಬೇಕು. ನಮ್ಮತನವನ್ನು ನಾವೇ ತಟ್ಟಿ ಎಚ್ಚರಿಸಬೇಕು. ನಮ್ಮ ಬದುಕಿನ ಪರಿಸರವು ಓದು, ಬರಹದ ಜೀವನವನ್ನು ರೂಪಿಸುತ್ತವೆ ಎಂದು ಸಲಹೆ ನೀಡಿದರು.
ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಮುಖ್ಯಸ್ಥ ಧಮ್ಮ ಜ್ಯೋತಿ ಪ್ರಕಾಶ ಮತ್ತು ಶಿಕ್ಷಣ ನಿಖಾಯದ ಡೀನ್ ಬಿ.ಎಲ್. ಲಕ್ಕಣ್ಣವರ, ಮಹಿಳಾ ವಿವಿಯ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಇದ್ದರು.
ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ವಿಷ್ಣು ಶಿಂಧೆ ನಿರೂಪಿಸಿದರು. ದೈಹಿಕ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಪ್ರಕಾಶ ಬಡಿಗೇರ ವಂದಿಸಿದರು.