Advertisement

Vijayapura; ಸಿದ್ದು ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನಾ ಮೆರವಣಿಗೆ

03:30 PM Feb 23, 2024 | keerthan |

ವಿಜಯಪುರ: ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ದಲಿತರಿಗೆ ಮೀಸಲಿರುವ ವಿಶೇಷ ಘಟಕ ಯೋಜನೆ ಅನುದಾನ ಕಿತ್ತುಕೊಂಡಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಗರದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.

Advertisement

ಶುಕ್ರವಾರ ನಗರದ ಮಹಾತ್ಮಾ ಗಾಂಧೀಜಿ ವೃತ್ತದಿಂದ ಜಿಲ್ಲಾಧಿಕಾರಿ ಕಛೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಅವರ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ರಾಜ್ಯ ಕಾಂಗ್ರೆಸ್ ಸರಕಾರ ಎಸ್.ಸಿ – ಎಸ್.ಟಿ ಸಮುದಾಯಕ್ಕೆ ಮೀಸಲಾದ ಎಸ್.ಇ.ಪಿ. ಟಿ.ಇ.ಪಿ. ಯೋಜನೆಯಲ್ಲಿನ ಅಂದಾಜು 11600 ಕೋಟಿ ರೂ ಅನುದಾನ ಕಡಿತ ಮಾಡಿ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಿದೆ. ಇದರಿಂದ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಖಂಡಿಸಿ ಬಿಜೆಪಿ ಎಸ್ಸಿ-ಎಸ್ಟಿ ಮೋರ್ಚಾ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ರಾಜ್ಯ ಕಾಂಗ್ರೆಸ್ ಸರಕಾರದ ಬಿಟ್ಟಿ ಭಾಗ್ಯ ಯೋಜನೆಗಳಿಂದ ಇಡಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದಿಂದ ಪ್ರತಿ ವರ್ಷ 6 ಸಾವಿರ ರೂ. ರಾಜ್ಯ ಸರಕಾರದಿಂದ 4 ಸಾವಿರ ರೂ. ಸೇರಿ ಒಟ್ಟು 10 ಸಾವಿರ ರೂ. ಹಣ ಬರುತ್ತಿಲ್ಲ ಎಂದು ದೂರಿದರು.

ಬಸವರಾಜ ಬೊಮ್ಮಾಯಿ ಸರ್ಕಾರ ಅಧಿಕಾರದಲ್ಲಿದ್ದಾಗ ಜಾರಿಗೆ ತಂದಿದ್ದ ರೈತರ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಜಾರಿಗೆ ತಂದಿದ್ದ ವಿದ್ಯಾನಿಧಿ ಯೋಜನೆ ಸ್ಥಗಿತಗೊಂಡಿದೆ. ಹೀಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜನಪರ ಯೋಜನೆಗಳನ್ನು ನಿಲ್ಲಿಸಿದೆ ಎಂದು ದೂರಿದರು.

Advertisement

ಸರಕಾರ ಅಧಿಕಾರಕ್ಕೆ ಬಂದು 9 ತಿಂಗಳಾದರೂ ಈ ವರೆಗೆ ಒಂದೂ ಹೊಸ ಯೋಜನೆ ಜಾರಿಗೆ ಬಂದಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ ಕಾರಜೋಳ ಮಾತನಾಡಿ, ರಾಜ್ಯದಲ್ಲಿ ಭೀಕರ ಬರದಿಂದ ತತ್ತರಿಸಿರುವ ಜನರು, ರೈತರ ನೆರವಿಗೆ ಧಾವಿಸದ ರಾಜ್ಯ ಸರಕಾರ ತನ್ನ ಜವಾಬ್ದಾರಿಯಿಂದ ನುಣಚಿಕೊಳ್ಳಲು ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ಈ ಹಿಂದೆ ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಆಗಿದ್ದಾಗ ಬಿಜೆಪಿ ಸರಕಾರ ರೈತರು ಸೇರಿದಂತೆ ಜನರ ನೆರವಿಗೆ ಬಂದಿತ್ತು. ಅತಿವೃಷ್ಟಿಯಲ್ಲಿ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ನೀಡಿತ್ತು. ಈಗಿನ ಕಾಂಗ್ರೆಸ್ ಸರಕಾರ ಬರದಲ್ಲೂ ರಾಜಕೀಯ ಮಾಡುತ್ತಿದೆ. ತನ್ನಿಂದ ಪರಿಸ್ಥಿತಿ ನಿಭಾಯಿಸಲಾಗದೆ ಕೇಂದ್ರ ಸರಕಾರ, ಪ್ರಧಾನಿ ಮೋದಿ ಅವರ ವಿರುದ್ಧ ಅಪಪ್ರಚಾರ ಮಾಡುತ್ತಾ ಕಾಲಹರಣ ಮಾಡುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದರು.

ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಮೀಸೆ ಮಾತನಾಡಿ, ರಾಜ್ಯ ಸರಕಾರ ವಿವಾದಗಳನ್ನು ಸೃಷ್ಟಿಸುತ್ತ ಜನರ ಮನಸ್ಸನ್ನು ಬೇರೆಡೆ ಸೆಳೆಯುತ್ತಿದೆ. ದಲಿತ ಸಮುದಾಯಗಳಿಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದ ನೀವು ಅವರಿಗೆ ಮೀಸಲಿಟ್ಟ ಎಸ್.ಇ.ಪಿ. ಟಿ.ಇ.ಪಿ. ಯೋಜನೆಯಲ್ಲಿನ ಅಂದಾಜು 11600 ಕೋಟಿ ರೂ. ಕಿತ್ತುಕೊಂಡಿದ್ದು, ಕೂಡಲೇ ಮರಳಿ ನೀಡಬೇಕು ಎಂದು ಆಗ್ರಹಿಸಿದರು.

ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ರವಿಕಾಂತ ವಗ್ಗೆ, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮಾಜಿ ಶಾಸಕ ಅರುಣ ಶಹಪುರ, ಮುಖಂಡ ವಿಜುಗೌಡ ಪಾಟೀಲ, ಸಂಜೀವ ಐಹೊಳ್ಳೆ, ಪ್ರಕಾಶ ಅಕ್ಕಲಕೋಟ, ಅನೀಲ ಜಮಾದಾರ, ಚಂದ್ರಶೇಖರ ಕವಟಗಿ, ಕಾಸುಗೌಡ ಬಿರಾದಾರ, ಭರತ ಕೋಳಿ, ಶೀತಲಕುಮಾರ ಓಗಿ, ಪ್ರವೀಣ ನಾಟಿಕಾರ, ರಾಜು ಮಗಿಮಠ, ಶ್ರೀನಿವಾಸ ಕಂದಗಲ್, ಗೋಪಾಲ ಘಟಕಾಂಬಳೆ, ಚಿದಾನಂದ ಚಲವಾದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next