ವಿಜಯಪುರ: ದೇಶದಾದ್ಯಂತ ದಲಿತರ ವಿರೋಧದ ಮಧ್ಯೆಯೂ ಜನತಾ ಪರಿವಾರ ತೊರೆದು ಬಿಜೆಪಿ ಸೇರಿದ ರಾಜಕೀಯ ಹಿರಿಯನಾದ ನನ್ನನ್ನು ಬಿಜೆಪಿ ಸರಿಯಾಗಿ ಬಳಸಿಕೊಳ್ಳಲಿಲ್ಲ. ಇದಕ್ಕಾಗಿ ನನಗೆ ಬೇಸರವಿದೆ, ವೈಯಕ್ತಿಕವಾಗಿ ನೋವಾಗಿದೆ ಎಂದು ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಪಕ್ಷದ ನಡೆಯ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.
ಸತತ 7ನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿ ಸಂಸತ್ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಬಿಜೆಪಿ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ನನ್ನ ಹಿರಿತನವನ್ನು ಅನುಭವವನ್ನು ಬಳಕೆ ಮಾಡಿಕೊಳ್ಳಲಿಲ್ಲ. ಒಬ್ಬರೂ ನನ್ನ ಏನು ಮಾಡಬೇಕೆಂದು ಕೇಳಲಿಲ್ಲ ಎಂದು ಕೇಂದ್ರ ಸರ್ಕಾರದಲ್ಲಿ ತಮಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ದಲಿತನಾದ ನನ್ನನ್ನು ಜಿಲ್ಲೆಯ ಜನ ಅಭಿಮಾನದಿಂದ ಬೆಂಬಲ ನೀಡಿ ಗೆಲ್ಲಿಸಿಕೊಂಡು ಬರುತ್ತಿರುವುದು ನನ್ನ ಜೀವನದ ಪುಣ್ಯ. ಕೆಲವರು ಚುನಾವಣೆ ಇದ್ದಾಗ ನಾಲ್ಕು ದಿನ ಓಡಾಡಿ ಮರೆಯಾಗುತ್ತಾರೆ, ಆದರೆ ನಾನು ಭಾವನಾತ್ಮಕವಾಗಿ ಪಕ್ಷದ ಕಾರ್ಯಕರ್ತರ ಜೊತೆಗೆ ಕೆಲಸ ಮಾಡುತ್ತೇನೆ ಎಂದರು.
ನನ್ನ ರಾಜಕಾರಣ ಅಷ್ಟು ಸುಲಭವಲ್ಲ, ನಾನು ಸುಲಭವಾಗಿ ರಾಜಕಾರಣ ಬಿಡಲ್ಲ. ಜಿಲ್ಲೆಯ ಜನರ ಆಶೀರ್ವಾದದಿಂದ ಈ ವರೆಗೆ ರಾಜಕೀಯದಲ್ಲಿ ನಾನು ಇತಿಹಾಸ ನಿರ್ಮಿಸುತ್ತಲೇ ಬಂದಿದ್ದು, ಮುಂದೆ ಗುರಿ ಇದೆ ಹಿಂದೆ ದೇವರಿದ್ದಾನೆ ಎಂದರು.
ಯಾರಾದರೂ ಅಳಿಸಬಹುದು ಎಂದು ದೇವರು ನನ್ನ ಹಣೆ ಬರಹವನ್ನು ಹಣೆಯಲ್ಲಿ ಬರೆಯದೇ ಬೆನ್ನ ಮೇಲೆ ಬರೆದಿದ್ದಾನೆ. ಮುಂದೆ ಏನೋ ಆಗಲಿದೆ, ಏನು ಎಂಬುದನ್ನು ಈಗಲೇ ಹೇಳಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಪಕ್ಷದ ನಾಯಕರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.
ನಾನು ಬಿಜೆಪಿ ಪಕ್ಷ ಸೇರ್ಪಡೆ ಸಂದರ್ಭದಲ್ಲಿ ದೇಶದ ಎಲ್ಲಾ ರಾಜ್ಯದಲ್ಲಿರುವ ದಲಿತ ನಾಯಕರು ಬಿಜೆಪಿ ಸೇರ್ಪಡೆ ಬೇಡವೆಂದು ಆಕ್ಷೇಪಿಸಿದ್ದರು. ಆದರೆ ನಾನು ಬಿಜೆಪಿ ಸೇರುತ್ತೇನೆ ಎಂದು ಪ್ರಮೋದ ಮಹಾಜನ್, ಅನಂತ್ ಕುಮಾರ್, ಅಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ವೆಂಕಯ್ಯ ನಾಯ್ಡು ಅವರಿಗೆ ಮಾತು ಕೊಟ್ಟಿದ್ದೆ ಎಂಬ ಕಾರಣಕ್ಕೆ ಬಿಜೆಪಿ ಸೇರಿದೆ ಎಂದು ವಿವರಿಸಿದರು.
ಜನತಾ ಪರಿವಾರದ ಹಿನ್ನೆಲೆಯ ನಾನು ರಾಮಕೃಷ್ಣ ಹೆಗಡೆ, ಜಿ.ಎಚ್.ಪಟೇಲ್ ಗರಡಿಯಲ್ಲಿ ಬೆಳೆದವನು. ಬಿಜೆಪಿ ಪಕ್ಷದವರು ಆಗಲೇ ನನ್ನನ್ನು ಪಕ್ಷ ಸೇರ್ಪಡೆಗೆ ಆಹ್ವಾನಿಸಿದರೂ ಹೆಗಡೆ-ಪಟೇಲ್ ಇರುವವರೆಗೂ ಬಿಜೆಪಿ ಸೇರಲ್ಲ ಎಂದಿದ್ದೆ. ಅವರು ಇಲ್ಲದ ಬಳಿಕ ನಿಮ್ಮ ಬಳಿ ಬರುತ್ತೇನೆ ಎಂದು ಕೊಟ್ಟ ಮಾತಿನಂತೆ ದಲಿತರ ವಿರೋಧದ ಮಧ್ಯೆಯೂ ಬಿಜೆಪಿ ಸೇರಿದೆ ಎಂದು ವಿವರಿಸಿದರು.
2004ರಲ್ಲಿ ರಾಮಕೃಷ್ಣ ಹೆಗಡೆ ಅವರು ನಿಧನರಾದ ಬಳಿಕ ಆಗ ವಿಧಾನಸಭೆ ವಿಪಕ್ಷ ನಾಯಕರಾಗಿದ್ದ ಜಗದೀಶ್ ಶೆಟ್ಟರ್ ಅವರ ಮನೆಗೆ ಹೋಗಿ ಬಿಜೆಪಿ ಸೇರುತ್ತೇನೆ ಎಂದೆ. ಬಳಿಕ ಯಡಿಯೂರಪ್ಪ, ಅನಂತಕುಮಾರ ಅವರನ್ನು ಭೇಟಿಯಾದೆ. ಅಂತಿಮವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ವೆಂಕಯ್ಯ ನಾಯ್ಡು ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದೆ ಎಂದು ತಮ್ಮ ಬಿಜೆಪಿ ಸೇರ್ಪಡೆ ಹಿನ್ನೆಲೆ ವಿವರಿಸಿದರು.
ಈ ವರೆಗೆ ಸತತ ಏಳು ಬಾರಿ ಲೋಕಸಭೆ ಚುನಾವಣೆಗೆ ಗೆದ್ದಿರುವ ದಕ್ಷಿಣ ಭಾರತದ ದಲಿತ ನಾಯಕನಾದ ನನ್ನನ್ನು ಬಿಜೆಪಿ ಪಕ್ಷದಲ್ಲಿ ಯಾರೂ ಏತಕ್ಕೂ ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಜಿಗಜಿಣಿ, ನಾನು ಯಾರ ಮೈಮೇಲೆ ಬಿದ್ದು ಏನೋ ಹೇಳಲಿಲ್ಲ. ಇದಕ್ಕಾಗಿ ಯಾರ ಮನೆಗೂ ಹೋಗಲಿಲ್ಲ, ಯಾರ ಹಿಂದೆಯೂ ಅಲೆದಿಲ್ಲ. ರಾಜಕೀಯ ಜೀವನದಲ್ಲೇ ಅಂತಹ ಚಟ ನನಗೆ ಇಲ್ಲ ಎಂದರು.
ಇತ್ತ ಪಕ್ಷದವರೂ ಇಂಥ ಕೆಲಸ ಮಾಡು ಎಂದು ನನಗೆ ಯಾರೂ ಏನನ್ನೂ ಹೇಳಲಿಲ್ಲ. ಕೆಲಸ ಕೊಡಿ ಎಂದು ನಾನೂ ಯಾರ ಬೆನ್ನು ಬೀಳಲಿಲ್ಲ. ಅವರೆಲ್ಲ ಇವನು ವಿಚಿತ್ರ ಮನುಷ್ಯ ಎಂದುಕೊಂಡರು. ನಾನು ಇರುವುದೇ ಹಾಗೆ, ನಾನು ಅಧಿಕಾರಕ್ಕಾಗಿ ಯಾರ ಮನೆ ಬಾಗಿಲು ಹೋಗಿಲ್ಲ ಕೇಳಿಲ್ಲ ಎಂದರು.
ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಪ್ರಧಾನಿ ಆಗಿದ್ದಾಗ ನನ್ನ ಮೇಲೆ ವಿಶ್ವಾಸವಿಟ್ಟು ಮೂರು ವರ್ಷ ಕೇಂದ್ರದಲ್ಲಿ ಸಚಿವನನ್ನಾಗಿ ಮಾಡಿದ್ದರು. ಅದನ್ನು ಬಿಟ್ಟು ಯಾವುದಕ್ಕೂ ನನ್ನನ್ನು ಮಾತನಾಡಿಸಲಿಲ್ಲ ಆದರೂ ನಾನು ಪಕ್ಷವನ್ನು ಬಿಟ್ಟು ಕೊಟ್ಟಿಲ್ಲ ಎಂದರು.
ಇಷ್ಟಕ್ಕೂ ನನ್ನ ನಿರ್ಲಕ್ಷ್ಯ ಮಾಡಿದ್ದರಿಂದ ನನಗೆ ಹಾನಿಯಾಗಿಲ್ಲ, ಹಾನಿ ಆಗಿರುವುದು ಬಿಜೆಪಿ ಪಕ್ಷಕ್ಕೆ. ಈತ ಸಂಘ ಪರಿವಾರದ ಹಿನ್ನೆಲೆಯವನಲ್ಲ ಎಂಬ ಕಾರಣಕ್ಕೆ ಪಕ್ಷದ ಕೆಲಸ ಕಾರ್ಯದಲ್ಲಿ ಬಳಸಿಕೊಳ್ಳಲಿಲ್ಲ. ಈ ಬಾರಿ ಕೇಂದ್ರದ ಮಂತ್ರಿ ಮಂಡಲ ರಚನೆ ಸಂದರ್ಭದಲ್ಲೂ ರಾಜ್ಯದ ಯಾವೊಬ್ಬ ನಾಯಕರೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಹೆಸರು ಹೇಳಲಿಲ್ಲ, ಇದು ನನಗೆ ಭಾರಿ ನೋವು ತರಿಸಿದೆ ಎಂದು ಹರಿಹಾಯ್ದರು.
ಸುದೀರ್ಘ ರಾಜಕೀಯ ಜೀವನದಲ್ಲಿ ನಾನು ಎಂದೂ ಅಧಿಕಾರ, ಹಣ ಬಯಸಿಲ್ಲ. ಚುನಾವಣೆ ಸಂಧರ್ಭದಲ್ಲೂ ನಾನು ಸಾಕಷ್ಟು ಸಹಿಸಿಕೊಂಡು ಬಂದೆ. ಚುನಾವಣೆ ಸಂದರ್ಭದಲ್ಲಿ ಅನ್ಯ ಸಮಾಜದವರು ನನ್ನನ್ನು ಪ್ರೀತಿ ಮಾಡಿದರೂ, ನನ್ನ ಜನರೇ ನನ್ನನ್ನು ಪ್ರೀತಿಸಲಿಲ್ಲ ಎಂದು ನೋವು ಹೊರ ಹಾಕಿದರು.
ಈ ಬಾರಿಯ ಚುನಾವಣೆ ಸಂದರ್ಭದಲ್ಲಿ ವಿಚಿತ್ರವಾದ ಸನ್ನಿವೇಶ ಎದುರಿಸಿದ್ದೇನೆ. ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಕೂಡಲೇ ಚುನಾವಣೆ ಕಣಕ್ಕೆ ಧುಮುಕಿದ್ದೆ. ಆಪರೇಷನ್ ಆಗಿದ್ದರಿಂದ ತಲೆಯಲ್ಲಿ ರಕ್ತ ಇನ್ನೂ ಜಿನಗುತ್ತಿತ್ತು. ಕಾಟನ್ ಇಟ್ಟುಕೊಂಡು ಮೇಲೆ ಟೋಪಿ ಹಾಕಿಕೊಂಡು ಚುನಾವಣಾ ಪ್ರಚಾರ ಮಾಡಿದ್ದೇನೆ ಎಂದು ಅಳಲು ತೋಡಿಕೊಂಡರು.
ಆದರೆ ಕ್ಷೇತ್ರದ ಮತದಾರರು ಮಾತ್ರ ನೀವು, ಮನೆಯಲ್ಲಿರಿ ನಿಮಗೆ ವೋಟ್ ಹಾಕುತ್ತೇವೆ ಎಂದು ಭರವಸೆ ನೀಡಿದ್ದರು. ಗ್ರಾಮೀಣ ಭಾಗದ ಮತದಾರರು ನನಗೆ ಕರೆ ಮಾಡಿ ನೀ ಟಿಕೆಟ್ ತೆಗೆದುಕೊಂಡು ಬಾ, ನಿನಗೆ ವೋಟ್ ಹಾಕುತ್ತೇವೆ. ನೀನು ಸತ್ತರೂ ನಿನ್ನ ಶವಕ್ಕೆ ವೋಟ್ ಹಾಕುತ್ತೇವೆ ಎಂದಿದ್ದ ಜನರು, ನನ್ನನ್ನು ಕೊಟ್ಟ ಮಾತಿನಂತೆ ಗೆಲ್ಲಿಸಿದ್ದಾರೆ ಎಂದರು.