Advertisement

ಬೇಡಿಕೆ ಈಡೇರಿಕೆಗೆ ಅನ್ನದಾತರ ಒತ್ತಾಯ

10:17 AM Jun 20, 2019 | Team Udayavani |

ವಿಜಯಪುರ: ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಭಾರತೀಯ ಕೃಷಿಕ ಸಮಾಜದ ಜಂಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಈ ವೇಳೆ ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಲ್. ಪಾಟೀಲ ಕುದರಿಸಾಲೋಡಗಿ ಮಾತನಾಡಿ, ವಿಜಯಪುರ ಜಿಲ್ಲೆಯ ಅನೇಕ ತಾಲೂಕುಗಳನ್ನು ಬರಗಾಲ ಪಟ್ಟಿಯಿಂದ ಹೊರಗಿಟ್ಟು ಇನ್ನುಳಿದ ತಾಲೂಕುಗಳನ್ನು ಸರ್ಕಾರ ಬರಗಾಲ ಪೀಡಿತ ಎಂದು ಘೋಷಣೆ ಮಾಡಿದೆ. ಬಸವನಬಾಗೇವಾಡಿ ತಾಲೂಕಿನ ಕೃಷಿ ನಿರ್ದೇಶಕರು ಹಾಗೂ ತಹಶೀಲ್ದಾರ್‌ರು ಬರಗಾಲದ ಕುರಿತು ಸಮೀಕ್ಷೆ ಮಾಡಿ ಬರ ಪರಿಸ್ಥಿತಿ ಮತ್ತು ಬೆಳೆ ಹಾನಿಯ ಒಟ್ಟು ಮೊತ್ತದ ವರದಿಯನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ. ಆದರೆ ಈ ಸಮೀಕ್ಷೆಯನ್ನು ಬದಿಗೊತ್ತಿ ಈ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇಲ್ಲ ಎಂದು ತನ್ನಷ್ಟಕ್ಕೆ ತಾನೇ ಮನಗಂಡು ಬರಪೀಡಿತ ತಾಲೂಕು ಪಟ್ಟಿಯಿಂದ ಹೊರಗಿಟ್ಟಿರುವುದು ಖಂಡನೀಯ ಎಂದರು.

ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, 2018-19ನೇ ಸಾಲಿನಲ್ಲಿ ಮುಂಗಾರು ಬೆಳೆಯ ಒಟ್ಟು ಅಂದಾಜು 31,20,8600 ರೂ.ಗಳವರೆಗೆ ಬೆಳೆ ಹಾನಿಯಾಗಿತ್ತು, ಅದರಂತೆ ಹಿಂಗಾರು ಹಂಗಾಮಿಯಲ್ಲಿಯೂ 24,49,63,200 ರೂ.ಗಳಷ್ಟು ಬೆಳೆ ಹಾನಿಯಾಗಿತ್ತು ಎಂದು ಅಧಿಕಾರಿಗಳು ಸಮೀಕ್ಷಾ ವರದಿ ಕಳುಹಿಸಿದ್ದರು. ಆದರೆ ತಹಶೀಲ್ದಾರ್‌ ಹಾಗೂ ಕೃಷಿ ಅಧಿಕಾರಿಗಳ ವರದಿಯನ್ನು ಗಣನೆಗೆ ತೆಗೆದುಕೊಳ್ಳದೆ ಮೂರು ತಾಲೂಕುಗಳನ್ನು ಕೈ ಬಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಬರಗಾಲ ಆವರಿಸಿದ್ದು ನಿಜವಿದ್ದರು ಕೂಡ ಇದನ್ನು ಮರೆಮಾಚಿ ಕರ್ನಾಟಕ ರಾಜ್ಯ ನೈಸರ್ಗಿಕ ಬರಗಾಲ ನಿರ್ವಹಣಾ ಕೋಶದ ಅಧಿಕಾರಿಗಳು ಸಕಾಲಕ್ಕೆ ಮಳೆಯಾಗಿದೆ. ಬೆಳೆಗಳು ಕೂಡ ಉತ್ತಮವಾಗಿದೆ ಎಂದು ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ಮೂರು ತಾಲೂಕುಗಳನ್ನು ಕೈ ಬಿಟ್ಟಿರುವುದು ದೊಡ್ಡ ಅನ್ಯಾಯ ಎಂದು ದೂರಿದರು.

ನಾಲ್ಕು ಗೋಡೆಗಳ ಮಧ್ಯೆ ಕುಳಿತುಕೊಂಡು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುವುದು ಸಮಂಜಸವಲ್ಲ. ಬೇಕಿದ್ದರೆ ಬರಗಾಲ ನಿರ್ವಹಣಾ ಕೋಶದ ಮುಖ್ಯಸ್ಥರು ಖುದ್ದಾಗಿ ಬಸವನಬಾಗೇವಾಡಿಗೆ ಆಗಮಿಸಿ ಮಾಹಿತಿ ಪಡೆದುಕೊಂಡರೆ ಸತ್ಯಾಂಶ ಏನೆಂಬುವುದು ತಿಳಿಯುತ್ತದೆ. ಅದನ್ನು ಬಿಟ್ಟು ಮನಸ್ಸಿಗೆ ಬಂದಂತೆ ವರದಿ ಸಲ್ಲಿಸಿ ತಾಲೂಕಿನ ರೈತರಿಗೆ ದ್ರೋಹ ಎಸಗಿದ್ದಾರೆ ಎಂದರು.

Advertisement

ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಬಸವನಬಾಗೇವಾಡಿ, ನಿಡಗುಂದಿ ಹಾಗೂ ಕೋಲ್ಹಾರ ಇವುಗಳನ್ನು ಬರಪೀಡಿತವೆಂದು ಘೋಷಣೆ ಮಾಡಿ ಶೀಘ್ರದಲ್ಲಿ ಸೂಕ್ತ ಪರಿಹಾರ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಹಾಗೂ ಜಿಲ್ಲಾ ಕೃಷಿಕ ಸಮಾಜದ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿವಿಧ ರೈತ ಸಂಘಟನೆ ಮುಖಂಡರಾದ ಸದಾಶಿವ ಬರಟಗಿ, ಸಿದ್ರಾಮ ಅಂಗಡಗೇರಿ, ಹೊನಕೇರಪ್ಪ ತೆಲಗಿ, ಜಯಶ್ರೀ ಜಂಗಮಶೆಟ್ಟಿ, ಬಸವರಾಜ ಜಂಗಮಶೆಟ್ಟಿ, ಗುರು ಕೋಟ್ಯಾಳ, ಚಂದ್ರಾಮ ತೆಗ್ಗಿ, ಗೌರವಾಧ್ಯಕ್ಷ ಈರಣ್ಣ ದೇವರಗುಡಿ, ಶಾಂತಗೌಡ ಬಿರಾದಾರ, ಹನುಮಂತರಾಯ ಗುಣಕಿ, ಎಂ.ಎಸ್‌. ಲಚ್ಯಾಣ, ಬಿ.ಜಿ. ಪಾಟೀಲ ಅಗಸಬಾಳ, ಬಾಬುಲಾಲ ಕೌಜಗೇರ, ಸಂಗಪ್ಪ ಮುಂಡಗನೂರ, ಕೃಷ್ಣಪ್ಪ ಬಮ್ಮರಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next