ವಿಜಯಪುರ: ಶಿಕ್ಷಕನಾಗಿ ಕಳೆದ 27 ವರ್ಷಗಳಿಂದ ಸಲ್ಲಿಸಿದ ಸೇವೆ ಹಾಗೂ ಕರ್ತವ್ಯ ಬದ್ಧತೆ ಗುರುತಿಸಿ ನನ್ನ ಇಲಾಖೆ ನೀಡಿರುವ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಶಿಕ್ಷಕನಾಗಿ ಗುರಿ ಮುಟ್ಟಿದ ಸಂತೃಪ್ತಿ ತಂದಿದೆ. ನನ್ನಲ್ಲಿ ಇನ್ನೂ ಹೆಚ್ಚಿನ ಉತ್ಸಾಹ ಹಾಗೂ ಹೊಣೆಗಾರಿಕೆ ಹೆಚ್ಚಿಸಿದೆ.
Advertisement
ಹೀಗೆ ಪ್ರತಿಕ್ರಿಯಿಸಿದವರು ಈ ಬಾರಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಜಿಲ್ಲೆಯ ತಿಕೋಟಾ ಪಟ್ಟಣದ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಮಲ್ಲಿಕಾರ್ಜುನ ಶಿವಲಿಂಗಪ್ಪ ಭೂಸಗೊಂಡ. ಸರ್ಕಾರಿ ಬಾಲಕರ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಇವರು, ಶಿಕ್ಷಣಕ್ಕೆ ಬೇಕಾದ ಬಿಎ, ಬಿಎಡ್ ಪದವಿ ಜೊತೆಗೆ ಸಂಗೀತ ಹಾಗೂ ರೇಷ್ಮೆ ಕೃಷಿಯಲ್ಲೂ ಶಿಕ್ಷಣ ಪಡೆದಿದ್ದಾರೆ. ಹಿಂದಿ ರಾಜ ಭಾಷಾ ಪದವಿಯನ್ನೂ ಸಂಪಾದಿಸಿದ್ದಾರೆ.
Related Articles
Advertisement
ತಮ್ಮಲ್ಲಿರುವ ಪ್ರತಿಭೆ ಮೂಲಕವೇ ಈಗಾಗಲೇ ತಾಲೂಕು, ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಮಲ್ಲಿಕಾರ್ಜುನ ಭೂಸಗೊಂಡ ಇದೀಗ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಗಮನೀಯ ಅಂಶ ಎಂದರೆ ಮಲ್ಲಿಕಾರ್ಜುನ ಭೂಸಗೊಂಡ ಅವರ ಹಿರಿಯ ಸಹೋದರ ಸಿಂದಗಿ ತಾಲೂಕಿನ ಚಾಂದಕವಠೆ ಪರಮಾನಂದ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ ಜಿ.ಎಸ್. ಭೂಸಗೊಂಡ ಕೂಡ ಕಳೆದ 4 ವರ್ಷಗಳ ಹಿಂದೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದರು. ಇವರ ಬಳಿಕ ತಮ್ಮನ ಮೂಲಕ ಜಿಲ್ಲೆಗೆ ಮತ್ತೂಮ್ಮೆ ಪ್ರಶಸ್ತಿಯ ಗರಿ ಮೂಡಿಸಿದ್ದಾರೆ. ಇವರ ಇನ್ನೋರ್ವ ಸಹೋದರ ಸಿದ್ದಪ್ಪ ಭೂಸಗೊಂಡ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನಲ್ಲಿರುವ ಮಾಳಿ ವಸ್ತಿ ಜಿಪಂ ಕನ್ನಡ ಶಾಲೆಯಲ್ಲಿ ಗಡಿನಾಡ ಶಿಕ್ಷಕರಾಗಿ ವಿಭಾಗ ಮಟ್ಟದ ಪ್ರಶಸ್ತಿ ಪಡೆದಿರುವುದು ವಿಶೇಷ. ಹೀಗೆ ಶಿಕ್ಷಕರಾಗಿರುವ ಭೂಸಗೊಂಡ ಕುಟುಂಬದ ಮೂವರೂ ಸಹೋದರರು ರಾಜ್ಯ-ವಿಭಾಗ ಮಟ್ಟದಲ್ಲಿ ತಮ್ಮ ಸೇವೆ ಮೂಲಕವೇ ಪ್ರಶಸ್ತಿಗಳನ್ನು ಬಾಚಿರುವುದು ಅವರಲ್ಲಿರುವ ಪ್ರತಿಭೆ ಹಾಗೂ ಸೇವಾ ಬದ್ಧತೆಗೆ ಸಾಕ್ಷಿ.
ಯಾವುದೇ ಶಿಕ್ಷಕ ತನ್ನಲ್ಲಿರುವ ಶೈಕ್ಷಣಿಕ ಪ್ರತಿಭೆಯನ್ನು ಮಕ್ಕಳಿಗೆ ಧಾರೆ ಎರೆದು ಸಮಾಜಕ್ಕೆ ಉತ್ತಮ ನಾಗರಿಕರನ್ನಾಗಿ ಕೊಡುಗೆ ನೀಡಬೇಕಿದ್ದರೆ ಗುಣಮಟ್ಟದ ಶಿಕ್ಷಣ ಅಗತ್ಯ. ಆದರೆ ಪ್ರಸ್ತುತ ಸಂದರ್ಭದಲ್ಲಿ ಸರ್ಕಾರಿ ಶಾಲೆ ಶಿಕ್ಷಕರಿಗೆ ಶಿಕ್ಷಣ ಕಲಿಕೆ ಹೊರತಾದ ಜನ-ದನ ಗಣತಿ, ಚುನಾವಣೆ ಆಂತೆಲ್ಲ ಹಲವು ಹೊರೆಗಳನ್ನು ನೀಡಿ ಶಾಲೆ ಹೊರಗೆ ಅವರ ಸೇವೆ ಸಮಯ ಕಳೆಯುವ ಸ್ಥಿತಿ ಇದೆ. ಇದರಿಂದ ಸರ್ಕಾರಿ ಶಾಲೆ ಶಿಕ್ಷಕರಲ್ಲಿ ಕಲಿಕಾ ನೈಪುಣ್ಯತೆ ಹಾಳಾಗುತ್ತಿದೆ. ಮತ್ತೂಂದೆಡೆ ಸಮಾಜದಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರ ಕುರಿತು ನಕಾರಾತ್ಮಕ ಸಂದೇಶ ರವಾನೆಯಾಗಿ, ಗೌರವ ಇಲ್ಲದಂತಾಗಿದೆ. ಮಕ್ಕಳಲ್ಲಿ ಗುಣಮಟ್ಟದ ಹಾಗೂ ನೈತಿಕ ಶಿಕ್ಷಣ ಮೌಲ್ಯ ಕುಸಿಯುವಂತೆ ಮಾಡಿದೆ ಎಂಬ ಕೊರಗು ಇವರನ್ನು ಕಾಡುತ್ತಿದೆ.
ಸರ್ಕಾರ ಇನ್ನಾದರೂ ಶಿಕ್ಷಕರಿಗೆ ಅನ್ಯ ಕೆಲಸಗಳ ಹೊರೆ ಮಾತ್ರವಲ್ಲ, ಬಿಸಿಯೂಟದ ಹೊರೆಯಿಂದಲೂ ಮುಕ್ತಿಗೊಳಿಸಬೇಕು. ಬಿಸಿಯೂಟ ಯೋಜನೆಯನ್ನು ಗ್ರಾಪಂ ವ್ಯಾಪ್ತಿಗೆ ನೀಡಿ, ಶಿಕ್ಷಕರನ್ನು ಕೇವಲ ಕಲಿಸುವಿಕೆಗೆ ಸೀಮಿತಗೊಳಿಸಬೇಕು. ಇದರಿಂದ ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣದ ಮೂಲಕ ಉತ್ತಮ ಫಲಿತ ಸಾಧ್ಯವಾಗಲಿದೆ ಎಂದು ಅಭಿಪ್ರಾಯ ಹಂಚಿಕೊಳ್ಳುತ್ತಾರೆ ಪ್ರಶಸ್ತಿ ವಿಜೇತ ಶಿಕ್ಷಕ ಮಲ್ಲಿಕಾರ್ಜುನ ಭೂಸಗೊಂಡ.