ವಿಜಯಪುರ: ವಿಶ್ವಗುರು ಬಸವೇಶ್ವರರು ಸುಂದರ ಹಾಗೂ ಸಂತಸದ ಜೀವನಕ್ಕೆ ಬೋಧಿಸಿದ ಸಪ್ತಸೂತ್ರ ವಚನಗಳು ಇಂದಿನ ಸಮಾಜಕ್ಕೆ ಹಾಗೂ ಜಗತ್ತಿಗೆ ಮಾದರಿ ಆಗಿವೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.
ಜಿಲ್ಲಾಡಳಿತದಿಂದ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ರವಿವಾರ ನಡೆದ ಜಗಜ್ಯೋತಿ ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಶೋಷಿತರ ಪರ ಧ್ವನಿಯಾಗಿ ಸಮಾಜದಲ್ಲಿನ ಲೋಪ ತಿದ್ದುವಲ್ಲಿ ಮುಂಚೂಣಿಯಲ್ಲಿ ನಿಂತಿದ್ದ ಬಸವೇಶ್ವರರು, ಮಹಿಳೆಯರ ಸಮಾನತೆ ಹಾಗೂ ಹಕ್ಕುಗಳಿಗಾಗಿ ಧ್ವನಿ ಎತ್ತಿದವರು. ಲಿಂಗ, ಬೇಧ ಮರೆತು ಮಾನವರ ಏಕತೆಗಾಗಿ, ಕಾಯಕಜೀವಿ ಶ್ರಮಿಕರ ಕಲ್ಯಾಣಕ್ಕಾಗಿ, ಬದುಕನ್ನೇ ಸವೆಸಿದವರು ಎಂದು ಬಣ್ಣಿಸಿಸಿದರು.
ಬಸವೇಶ್ವರರು ಕಾಯಕ ಹಾಗೂ ದಾಸೋಹ, ದಾನದ ಮಹತ್ವವನ್ನು ಸಾರಿದ್ದು, ಜಗತ್ತನ್ನು ಬಾಧಿಸುತ್ತಿರುವ ಕೋವಿಡ್-19 ಕೊರೊನಾ ರೋಗ ನಿಗ್ರಹದ ಹೋರಾಟದ ಸಂಕಷ್ಟದ ಪರಿಸ್ಥಿತಿಯಲ್ಲಿ ಉಳ್ಳವರು ಬಡಜನರಿಗೆ ನೆರವಾಗುವಂತೆ ಮನವಿ ಮಾಡಿದರು. ಕಾರ್ಯಕ್ರಮಕ್ಕೂ ಮೊದಲು ನಗರದ ಬಸವೇಶ್ವರ ವೃತ್ತದಲ್ಲಿನ ಅಶ್ವಾರೂಢ ಶ್ರೀ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ಪಿ ಅನುಪಮ್ ಅಗರವಾಲ್, ಜಿಪಂ ಸಿಇಒ ಗೋವಿಂದರೆಡ್ಡಿ, ಎಡಿಸಿ ಡಾ| ಔದ್ರಾಮ್, ಉಪವಿಭಾಗಾ ಧಿಕಾರಿ ಸೋಮಲಿಂಗ ಗೆಣ್ಣೂರ, ಎಎಸ್ಪಿ ರಾಮ್ ಅರಸಿದ್ದಿ, ಡಿಎಸ್ಪಿ ಲಕ್ಷ್ಮೀ ನಾರಾಯಣ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋದ್ದಾರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪೂಜಾರಿ, ಸಮಾಜದ ಮುಖಂಡರಾದ ಸಿದ್ರಾಮಪ್ಪ ಉಪ್ಪಿನ, ಬಸಯ್ಯ ಹಿರೇಮಠ, ಶರಣು ಸಬರದ, ಸೋಮನಗೌಡ ಕಲ್ಲೂರ ಇತರರು ಉಪಸ್ಥಿತರಿದ್ದರು.