Advertisement
ಜಗತ್ತಿಗೆ ಮನುಕುಲದ ಮಹತ್ವ, ಕಾಯಕದ ಸಿದ್ಧಾಂತ, ಲಿಂಗ ತಾರತಮ್ಯ ನಿವಾರಣೆ, ಸಮಾನತೆಯ ಸಮಾಜ ನಿರ್ಮಾಣದಂಥ ಕ್ರಾಂತಿಕಾರ ನಡೆಗಳ ಮೂಲಕ ವಿಶ್ವಕ್ಕೆ ಆದ್ಬುತ ಸಂದೇಶ ನೀಡಿದ ಬಸವ ನೆಲದಲ್ಲಿ ಬಸವೇಶ್ವರ ಆನಾಥವಾಗಿದ್ದಾನೆ. ಬಸವ ಜನ್ಮಭೂಮಿ ಬಾಗೇವಾಡಿಗೆ ಬಸವೇಶ್ವರ ಹೆಸರಿನ ನಾಮಕರಣ ಮಾಡಿರುವ ಸರ್ಕಾರ, ಕಳೆದ ಕೆಲವು ವರ್ಷಗಳಿಂದ ಬಸವೇಶ್ವರ ಹೆಸರಿನಲ್ಲಿ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿಯನ್ನೂ ನೀಡುತ್ತಿದೆ. ಆದರೆ ಸದರಿ ಪ್ರಶಸ್ತಿಯನ್ನು ಬಸವ ಜನ್ಮಭೂಮಿ ಬಾಗೇವಾಡಿಯಲ್ಲಿ ಪ್ರದಾನ ಮಾಡದೇ ದೂರದ ಬೆಂಗಳೂರಿನಲ್ಲಿ ವಿತರಿಸುವುದಕ್ಕೆ ವಿರೋಧ ವ್ಯಕ್ತವಾಗಿದೆ.
Related Articles
Advertisement
ಇನ್ನು ಬಸವೇಶ್ವರರ ಐಕ್ಯತಾಣ ಕೂಲಡಸಂಗಮದ ಅಭಿವೃದ್ಧಿಗಾಗಿ ಸರ್ಕಾರ ಅಭಿವೃದ್ಧಿ ಪ್ರಾಧಿಕಾರ ರಚಿಸಿ, ಅಗತ್ಯ ಅನುದಾನ ನೀಡುತ್ತಿದೆ. ಆದರೆ ಇದೇ ಪ್ರಾಧಿಕಾರದ ವ್ಯಾಪ್ತಿಗೆ ಸೇರಿರುವ ಬಸವನಬಾಗೇವಾಡಿ ಅಭಿವೃದ್ಧಿಗೆ ನಿರ್ಲಕ್ಷ್ಯ ತೋರಲಾಗುತ್ತಿದೆ. ಇದಕ್ಕಾಗಿ ಬಸವನಬಾಗೇವಾಡಿ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ಬೇಡಿಕೆ ಈವರೆಗೂ ಈಡೇರದ ಕುರಿತು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇನ್ನು ಮೂಲ ನಂದೀಶ್ವರ ದೇವಸ್ಥಾನ ಜೀರ್ಣೋದ್ಧಾರವಾಗಿದ್ದರೂ ಹಲವು ಆಸಹ್ಯಗಳು ಭಕ್ತರನ್ನು ಕಣ್ಣು ಮುಚ್ಚಿಕೊಳ್ಳುವಂತೆ ಮಾಡುತ್ತಿವೆ. ದೇವಸ್ಥಾನದ ಆವರಣದಲ್ಲೇ ಬಯಲು ಸ್ನಾನ, ಬಳಕೆಗೆ ಬಾರದಂತೆ ನಿರ್ಮಿಸಿರುವ ಶೌಚಾಲಯ, ಹೀಗೆ ಬಸವಭೂಮಿ ಇಲ್ಲಗಳ ಆಗರವಾಗಿದೆ. ಹೀಗಾಗಿ ಹೊರಗಿನಿಂದ ಬರುವ ಬಸವಭಕ್ತರ ಮೂದಲಿಕೆ ಸ್ಥಳೀಯರನ್ನು ತಲೆ ತಗ್ಗಿಸುವಂತೆ ಮಾಡುತ್ತಿದೆ.
ಬಸವನಾಡಿನಿಂದ ಸಮ್ಮಿಶ್ರ ಸರ್ಕಾರದಲ್ಲಿ ಬಸವ ನಾಡಿನಿಂದಲೇ ಆಯ್ಕೆಯಾದ ಮೂವರು ಹಾಲಿ ಸಮ್ಮಿಶ್ರ ಸರ್ಕಾರದಲ್ಲಿ ಪ್ರಭಾವಿ ಸಚಿವರಿದ್ದಾರೆ. ಇದರಲ್ಲಿ ಆರೋಗ್ಯ ಸಚಿವ ಶಿವಾನಂದ ನಾಯಕ ಬಸವ ಜನ್ಮಭೂಮಿ ಬಸವನಬಾಗೇವಾಡಿ ಕ್ಷೇತ್ರವನ್ನೇ ಪ್ರತಿನಿಧಿಸುತ್ತಾರೆ. ಮತ್ತೂಬ್ಬ ಸಚಿವ ಗೃಹ ಮಂತ್ರಿ ಎಂ.ಬಿ. ಪಾಟೀಲ ಬಸವಧರ್ಮ ಸ್ಥಾಪನೆಯ ಮುಂಚೂಣಿಯಲ್ಲಿ ನಿಂತಿರುವ ಬಸವ ಭಕ್ತ. ಇನ್ನೊಬ್ಬರು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ. ಜಿಲ್ಲೆಯ ಇಬ್ಬರು ಶಾಸಕರಿಗೆ ಸಂಪುಟ ದರ್ಜೆಯ ಮಾನ್ಯತೆಯ ಅಧಿಕಾರ ಇದೆ. ಆದರೆ ರಾಜಕೀಯ ಇಚ್ಛಾಶಕ್ತಿ ಪ್ರದರ್ಶನ ಮಾತ್ರ ಕಂಡು ಬರುತ್ತಿದೆ ಎಂಬ ಸಿಡುಕು ಬಸವಜನ್ಮಭೂಮಿ ಜನರಲ್ಲಿ ಮನೆ ಮಾಡಿದೆ.
ಇನ್ನಾದರೂ ಸರ್ಕಾರ ದಸರಾ, ಹಂಪಿ ಉತ್ಸವದ ಮಾದರಿಯಲ್ಲಿ ಬಸವ ಜಯಂತಿಯನ್ನು ಬಸವ ಜನ್ಮಭೂಮಿಯಲ್ಲೇ ರಾಷ್ಟ್ರೀಯ ಹಬ್ಬವಾಗಿ ಆಚರಿಸಬೇಕು. ಸರ್ಕಾರ ವಿತರಿಸುವ ಬವಸೇಶ್ವರ ಹೆಸರಿನ ಪ್ರಶಸ್ತಿ ಪ್ರದಾನ ಸಮಾರಂಭ ಬಸವಜನ್ಮ ಭೂಮಿಯಲ್ಲೇ ನಡೆಯಬೇಕು ಎಂಬ ಹಕ್ಕೋತ್ತಾಯ ಕೇಳಿ ಬಂದಿದೆ.
ಸರ್ಕಾರ ಬಸವ ಜನ್ಮಭೂಮಿ ಬಸವನಬಾಗೇವಾಡಿಯ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಿ, ಅಗತ್ಯ ಅನುದಾನ ನೀಡಬೇಕು. ಬಸವನಬಾಗೇವಾಡಿ ಪಟ್ಟಣದಲ್ಲಿ ಬಸವ ಉತ್ಸವ ಹಾಗೂ ಸರ್ಕಾರ ನೀಡುವ ಬಸವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಬೇಕು ಎಂದು ಜಿಲ್ಲೆಯ ಸಚಿವರಿಗೆ, ಜಿಲ್ಲಾಡಳಿತಕ್ಕೆ ನೀಡಿರುವ ಮನವಿಗಳಿಗೆ ಲೆಕ್ಕವೇ ಇಲ್ಲ. ಯಾವ ಮನವಿಗೂ ಆಳುವವರು ಸ್ಪಂದಸದೇ ಬಾಯಿ ಮಾತಲ್ಲಿ ಬಸವಣ್ಣ ಎನುತ್ತಿದ್ದಾರೆ.•ರಾಜುಗೌಡ ಚಿಕ್ಕೊಂಡ,
ಅಧ್ಯಕ್ಷರು, ವಿಶ್ವಬಂಧು ಬಸವ ಸಮಿತಿ, ಬಸವನಬಾಗೇವಾಡಿ ಸರ್ಕಾರ ಬಸವಜಯಂತಿ ದಿನವನ್ನು ಹಂಪಿ, ಮೈಸೂರು ದಸರಾ ಮಾದರಿಯಲ್ಲಿ ಬಸವ ಜನ್ಮಭೂಮಿಯಲ್ಲಿ ರಾಷ್ಟ್ರೀಯ ಹಬ್ಬದಂತೆ ಆಚರಿಸಬೇಕು. ಬಸವ ಜನ್ಮಭೂಮಿ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ ತ್ವರಿತವಾಗಿ ಆಗಬೇಕು ಎಂದು ಹಲವು ಬಾರಿ ಹೋರಾಟ ಮಾಡಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ಸರ್ಕಾರದ ಬಸವ ಜಯಂತಿ, ಬಸವ ಪ್ರಶಸ್ತಿ ಪ್ರದಾನ ಕೇವಲ ಕಾಟಾಚಾರದ ಕಾರ್ಯಕ್ರಮವಾಗುತ್ತಿದೆ. ಇದು ನಮ್ಮ ಭಾಗದ ರಾಜಕೀಯ ನಾಯಕರ ದೌರ್ಬಲ್ಯದ ಪ್ರತೀಕವಾಗುತ್ತದೆ.
•ಶಿವಪ್ರಕಾಶ ಶ್ರೀಗಳು, ಹಿರೇಮಠ, ಬಸವನಬಾಗೇವಾಡಿ ಜಿ.ಎಸ್. ಕಮತರ