ವಿಜಯಪುರ: ನಗರದಲ್ಲಿ ಕಳೆದ ಒಂದೂವರೆ ವರ್ಷದ ಹಿಂದಿನಿಂದ ನಡೆಯುತ್ತಿದ್ದ ಮನೆಗಳ್ಳತನ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಿರುವ ಪೊಲೀಸರು, 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಇಂಡಿ ತಾಲೂಕಿನ ಸಾವಳಸಂಗ ಮೂಲದ ವಿಜಯಪುರ ಪಾನಿ ನಗರ ನಿವಾಸಿ 25 ವರ್ಷದ ರಾಜು ಶಿವಾನಂದ ಹೊಸಮನಿ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ 2019ರ ಮೇ 17 ರಂದು ಗೋಲಗುಮ್ಮಟ ಠಾಣೆ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿ 10.5 ಗ್ರಾಂ ಚಿನ್ನಾಭರಣ ಕದ್ದೊಯ್ದಿದ್ದ. ಇದೇ ಠಾಣೆ ವ್ಯಾಪ್ತಿಯಲ್ಲಿ ನವೆಂಬರ್ 14 ರಂದು ಜರುಗಿದ್ದ ಮನೆಗಳ್ಳತನ ಪ್ರಕರಣದಲ್ಲಿನ 20 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಇದಲ್ಲದೇ ಸದರಿ ಆರೋಪಿ ಕಳೆದ ವರ್ಷವೇ ಆಕ್ಟೋಬರ್ 5 ರಂದು ಆದರ್ಶನಗರ ಠಾಣೆ ವ್ಯಾಪ್ತಿಯ ಮನೆಗಳ್ಳತನ ಪ್ರಕರಣದಲ್ಲಿನ 102 ಗ್ರಾಂ ಚಿನ್ನಾಭರಣ ಹಾಗೂ ಅದೇ ತಿಂಗಳ 9 ರಂದು ಜಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದ್ದ ಮನೆಗಳ್ಳತನ ಪ್ರಕರಣದಲ್ಲಿನ 100 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಸದರಿ ಆರೋಪಿ ಸೋಲಾಪುರ ರಸ್ತೆಯಲ್ಲಿ ನಾಕಾಬಂದಿ ಕರ್ತವ್ಯದಲ್ಲಿ ಪೊಲೀಸರಿಗೆ ತಪಾಸಣೆ ವೇಳೆ ಅನುಮಾನಾಸ್ಪದವಾಗಿ ವರ್ತಿಸಿದ್ದರಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮನೆಗಳ್ಳತನ ಪ್ರಕರಣ ಪತ್ತೆಯಾಗಿದೆ. ಬಂಧಿತನಿಂದ 12 ಲಕ್ಷ ರೂ. ಮೌಲ್ಯದ 233 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಕೋವಿಡ್ ಸೋಂಕು ಇರುವುದು ದೃಢಪಟ್ಟಿದ್ದು, ಕ್ವಾರಂಟೈನ್ ಮಾಡಲಾಗಿದೆ.
ನಗರದಲ್ಲಿ ಒಂದೂವರೇ ವರ್ಷದಿಂದ ನಡೆಯುತ್ತಿದ್ದ ಮನೆಗಳ್ಳತನ ಪ್ರಕರಣದ ತನಿಖೆಗೆ ಗೋಲಗುಮ್ಮಟ ಸಿಪಿಐ ಬಸವರಾಜ ಮೂಕರ್ತಿಹಾಳ ನೇತೃತ್ವದಲ್ಲಿ ಎಸೈ ಎಸ್.ಬಿ.ಆಜೂರ, ಪೊಲೀಸ್ ಸಿಬ್ಬಂದಿಯಾದ ಸಂಜಯ ಬನಪಟ್ಟಿ, ಎಸ್.ಎಸ್.ಮಾಳೇಗಾಂವ, ಮಹೇಶ ಸಾಲಿಕೇರಿ, ವೈ.ಪಿ.ಕಬಾಡೆ, ಪಿ.ಎಸ್.ಬಿರಾದಾರ, ಗೊಲ್ಲಾಳ ಇಜೇರಿ, ಬಿ.ಕೆ.ರೋಣಿಹಾಳ, ಎನ್.ಬಿ.ವಠಾರ ಅವರಿದ್ದ ಪೊಲೀಸರ ತನಿಖಾ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತನಿಖಾ ತಂಡಕ್ಕೆ ಎಸ್ಪಿ ಅನುಪಮ ಅಗರವಾಲ ಬಹುಮಾನ ಘೋಷಿಸಿದ್ದಾರೆ.