Advertisement

ಚಡಚಣದಲ್ಲಿ 80 ಲಕ್ಷ ದರೋಡೆ ಪ್ರಕರಣ: ನಾಲ್ವರ ಬಂಧನ

04:23 PM May 26, 2019 | Naveen |

ವಿಜಯಪುರ: ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಜವಳಿ ವರ್ತಕರ ಮೇಲೆ ಹಲ್ಲೆ ನಡೆಸಿ 80 ಲಕ್ಷ ರೂ. ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.ಪ್ರಕರಣವನ್ನು ತ್ವರಿತವಾಗಿ ಭೇದಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್‌ ತಂಡಕ್ಕೆ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.

Advertisement

ಚಡಚಣ ಪಟ್ಟಣದಲ್ಲಿ ಮೇ 9ರಂದು ಜವಳಿ ಉದ್ಯಮಿ ಅಜೀತ ಮುತ್ತಿನ ಹಾಗೂ ಅವರ ಅಂಗಡಿ ವ್ಯವಸ್ಥಾಪಕ ಸಂತೋಷ ಕಾಮಗೊಂಡ ಮೇಲೆ ಹಲ್ಲೆ ನಡೆಸಿ 80 ಲಕ್ಷ ರೂ. ನಗದು ದರೋಡೆ ಮಾಡಿದ ಕೃತ್ಯ ಜರುಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎಎಸ್ಪಿ ಬಿ.ಎಸ್‌. ನ್ಯಾಮಗೌಡ ನೇತೃತ್ವದ ಪೊಲೀಸ್‌ ತಂಡ ನಟೋರಿಯಸ್‌ ರವಿ ಶಾಂತಪ್ಪ ಶಿಂಧೆ ನೇತೃತ್ವದ ಕಿರಣ ಶ್ರೀಶೈಲ ವಾಳಖೀಂಡಿ, ಗಂಗಾರಾಮ ಮಾಳಪ್ಪ ಕೋಳಿ, ಭೀಮು ಶಾಂತಪ್ಪ ಶಿಂಧೆ ಅವರನ್ನು ಬಂಧಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿರುವ ಇನ್ನೂ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ.

ಶನಿವಾರ ಸಂಜೆ ಮಾಧ್ಯಮಗಳಿಗೆ ಘಟನೆ ಕುರಿತು ಮಾಹಿತಿ ನೀಡಿದ ಎಸ್ಪಿ ಪ್ರಕಾಶ ನಿಕ್ಕಂ, ಚಡಚಣದ ಜವಳಿ ವರ್ತಕ ಅಜೀತ ನೇಮಿನಾಥ ಮುತ್ತಿನ ಹಾಗೂ ವ್ಯವಸ್ಥಾಪಕ ಸಂತೋಷ ಕಾಮಗೊಂಡ ಅವರ ಮೇಲೆ ಬಂಧಿತ ದರೋಡೆಕೋರರ ತಂಡ ಖಾರದ ಪುಡಿ ಎರಚಿ, ಹಲ್ಲೆ ನಡೆಸಿ 80 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದರು. ಕೃತ್ಯದ ತನಿಖೆಗೆ ರಚಿಸಲಾಗಿದ್ದ ಎಎಸ್ಪಿ ಬಿ.ಎಸ್‌. ನ್ಯಾಮಗೌಡ ನೇತೃತ್ವದ ತನಿಖಾ ತಂಡ ಆರೋಪಿಗಳ ಬಂಧನಕ್ಕಾಗಿ ಪುಣೆ, ಮುಂಬೈ, ಸೊಲ್ಲಾಪುರ ಸೇರಿದಂತೆ ಹಲವೆಡೆ ಸುತ್ತಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಬಂಧಿತ ಆರೋಪಿಗಳಿಂದ ದರೋಡೆ ಮಾಡಿದ 80 ಲಕ್ಷ ರೂ. ನಗದು ಹಣದಲ್ಲಿ 54,85,500 ರೂ. ಹಣವನ್ನು ಮಾತ್ರ ವಶಕ್ಕೆ ಪಡೆಯಲಾಗಿದೆ. ದರೋಡೆ ಮಾಡಿದ ಹಣದಲ್ಲಿ ಆರೋಪಿ 9 ಲಕ್ಷ ರೂ. ಮೌಲ್ಯದ ಮಹೀಂದ್ರಾ ಎಕ್ಸ್‌ಯುವಿ 300 ವಾಹನ ಖರೀದಿಸಿದ್ದು ಇದನ್ನೂ ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರ ಸೇರಿದಂತೆ ಒಟ್ಟು 63,85,500 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ವಿವರಿಸಿದರು.

ಬಂಧಿತರಲ್ಲಿ ಪ್ರಮುಖ ಆರೋಪಿ ರವಿ ಶಾಂತಪ್ಪ ಶಿಂಧೆ ನಟೋರಿಯಸ್‌ ವ್ಯಕ್ತಿಯಾಗಿದ್ದು, ಈತನ ಮೇಲೆ ಚಡಚಣ ಮಾತ್ರವಲ್ಲದೇ ಬೆಳಗಾವಿ ಜಿಲ್ಲೆಯ ಆಥಣಿ, ರಾಯಬಾಗ ಸೇರಿದಂತೆ ಹಲವು ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

Advertisement

ಕೃತ್ಯ ನಡೆಸುವ ಮುನ್ನ ಸಾಕಷ್ಟು ಜವಳಿ ವ್ಯಾಪಾರಿಗಳ ದಿನಚರಿ ಕುರಿತು ಸಾಕಷ್ಟು ಮಾಹಿತಿ ಸಂಗ್ರಹಿಸಿ ಕೃತ್ಯ ಎಸಲಾಗಿದೆ. ಮುತ್ತಿನ ಜವಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಿರಣ ವಾಳಖೀಂಡಿ ಹಾಗೂ ಗಂಗಾರಾಮ ಮಾಳಪ್ಪ ಅವರು ಪ್ರಮುಖ ಆರೋಪಿಗೆ ಎಲ್ಲ ಮಾಹಿತಿ ನೀಡುತ್ತಿದ್ದರು ಎಂಬ ಮಾಹಿತಿಯಿದೆ. ಈ ಹಿನ್ನೆಲೆಯಲ್ಲಿ ಈ ಇಬ್ಬರನ್ನೂ ಬಂಧಿಸಲಾಗಿದೆ ಎಂದು ವಿವರಿಸಿದರು.

ಅತ್ಯಂತ ಗಂಭೀರ ಪ್ರಕರಣವಾಗಿದ್ದ ಇದನ್ನು ತ್ವರಿತ ಗತಿಯಲ್ಲಿ ಭೇದಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಎಎಸ್‌ಪಿ ಬಿ.ಎಸ್‌. ನೇಮಗೌಡ ಅವರ ತಂಡ ಯಶಸ್ವಿಯಾಗಿದ್ದು, ತನಿಖಾ ತಂಡಕ್ಕೆ 1 ಲಕ್ಷ ರೂ. ಬಹುಮಾ ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದರು,

ತನಿಖಾ ತಂಡದಲ್ಲಿ ಡಿವೈಎಸ್‌ಪಿ ಎಂ.ಬಿ. ಸಂಕದ, ಡಿವೈಎಸ್‌ಪಿ ಅಶೋಕ, ಸಿಪಿಐ ಭೀಮನಗೌಡ ಪಾಟೀಲ, ಎಚ್.ಆರ್‌. ಪಾಟೀಲ, ಎಸ್‌.ಎಸ್‌. ಶಿಮಾನಿ, ಕುಮಾರ ಹಿತ್ತಲಮನಿ, ರವಿ ಯಡವಣ್ಣವರ, ಆರ್‌.ಎಚ್. ಡೋಣಗಿ, ಬಿ.ಎಚ್. ಅಂಬಿಗೇರ, ಎಸ್‌.ಡಿ. ದೊಡಮನಿ, ಬಿ.ಎನ್‌. ಚಿಂಚೋಳಿ, ಎಂ.ಎ. ಹಳ್ಳಿ, ಕೆ.ಬಿ. ಪಾಟೀಲ, ಎಸ್‌.ಡಿ.ಚಾವರ, ಎಂ.ಎನ್‌. ಹೊನಕಟ್ಟಿ, ಜಿ.ಕೆ. ಕೋರೆ, ಎಂ.ಡಿ. ಕಕಮರಿ, ಆರ್‌.ಎಸ್‌. ಪಡಗನ್ನವರ, ಎಸ್‌.ಜಿ. ಗುಂಡಣ್ಣ, ಸಿ.ಡಿ. ಹತ್ತರಕಿ, ಸುನೀಲ ಗವಳಿ ತನಿಖಾ ತಂಡದಲ್ಲಿದ್ದರು ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next