ವಿಜಯಪುರ: ಕೇಂದ್ರ ಸರ್ಕಾರ ದೇಶದ ಪ್ರಮುಖ ಐತಿಹಾಸಿಕ ಸ್ಮಾರಕ ಇರುವ ಪ್ರವಾಸಿ ತಾಣಗಳ ವೀಕ್ಷಣೆಗೆ ರಾತ್ರಿ 9ರವರೆಗೆ ಸಮಯ ವಿಸ್ತರಿಸಲು ನಿರ್ಧರಿಸಿದ್ದು, ಸಾರ್ವಜನಿಕ ವಲಯದಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಆದರೆ ದೇಶದ ಸ್ಮಾರಕಗಳ ಸಂರಕ್ಷಣೆಗೆಂದೇ ಇರುವ ಭಾರತೀಯ ಪುರಾತತ್ವ ಇಲಾಖೆಯಲ್ಲಿ ತಾಂಡವವಾಡುತ್ತಿರುವ ಅಧಿಕಾರಿಗಳು-ಸಿಬ್ಬಂದಿ ಕೊರತೆ ನೀಗಲು ಆದ್ಯತೆ ನೀಡಿಲ್ಲ. ಹೀಗಾಗಿ ಕೆಲಸದ ಒತ್ತಡದಿಂದ ಬಳಲುತ್ತಿರುವ ಇಲಾಖೆ ಸರ್ಕಾರದ ನೀತಿಳಿಂದ ಕಂಗೆಟ್ಟಿದೆ.
Advertisement
ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಪ್ರಸಕ್ತ ವರ್ಷದಲ್ಲಿ ದೇಶದ ಪ್ರವಾಸೋದ್ಯಮ ಇಲಾಖೆಯನ್ನು ಬಲಪಡಿಸಲು ಉದ್ದೇಶಿಸಿದೆ. ಇದರ ಭಾಗವಾಗಿ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಈ ಹಿಂದೆ ಇದ್ದ ಪ್ರವೇಶದ ಸಮಯವನ್ನು ಬದಲಿಸಿ ರಾತ್ರಿ 10ರವರೆಗೆ ವಿಸ್ತರಿಸಲು ಮುಂದಾಗಿದ್ದಾರೆ. ಆದರೆ ಸರ್ಕಾರ ಈ ನಿರ್ಧಾರಕ್ಕೆ ಬರುವ ಮುನ್ನ ತನ್ನ ಸ್ವಾಧೀನದಲ್ಲಿರುವ ಭಾರತೀಯ ಪುರಾತತ್ವ ಇಲಾಖೆಯ ಕುಂದು-ಕೊರತೆಗಳೇನು ಎಂಬುದನ್ನು ಆಲಿಸಲು ಮುಂದಾಗಿಲ್ಲ. ಪರಿಣಾಮ ಸಿಬ್ಬಂದಿ ಕೊರತೆ ಇರುವ ಸಿಬ್ಬಂದಿ ಮೇಲೆ ಹೆಚ್ಚಿನ ಒತ್ತಡ ಬೀಳುವಂತೆ ಮಾಡಿದೆ. ಇಂತ ಸ್ಥಿತಿಯಲ್ಲೇ ಹೆಚ್ಚಿನ ಮಾನವ ಸಂಪನ್ಮೂಲ ಬಯಸುವ ನಿರ್ಧಾರಗಳನ್ನು ಕ್ಯೆಗೊಳ್ಳಲು ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Related Articles
Advertisement
ಇನ್ನು ವಿಜಯಪುರ ನಗರ ಒಂದರಲ್ಲೇ ಸುಮಾರು ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆಯ ಒಡೆತನದಲ್ಲಿರುವ 78 ಸ್ಮಾರಕಗಳಲ್ಲಿ ಗೋಲಗುಂಮ್ಮಟ, ಬಾರಾಕಮಾನ್, ಇಬ್ರಾಹಿಂ ರೋಜಾ ಸೇರಿದಂತೆ ಕೆಲ ಸ್ಮಾರಕಗಳನ್ನು ಹೊರತುಪಡಿದರೆ, ಬಹುತೇಕ ಸ್ಮಾರಕಗಳ ಭದ್ರತೆ ನೋಡಿಕೊಳ್ಳಲು ಸಿಬ್ಬಂದಿಯೇ ಇಲ್ಲ. ಪ್ರಮುಖ ಕನಿಷ್ಠ ಒಂದೊಂದು ಸ್ಮಾರಕಕ್ಕೆ ದಿನದ 24 ಗಂಟೆಯಂತೆ ಒಬ್ಬೊಬ್ಬ ಸಿಬ್ಬಂದಿಯಂತೆ ಲೆಕ್ಕ ಹಾಕಿದರೂ 78 ಸಿಬ್ಬಂದಿ ಬೇಕು. ಆದರೆ ಕೇವಲ 32 ಸಿಬ್ಬಂದಿಯನ್ನೇ ಇರಿಸಿಕೊಂಡು ಇಲಾಖೆ ಅಧಿಕಾರಿಗಳು ಸಂರಕ್ಷಣೆ ಮಾಡುವ ಮಾತನಾಡುತ್ತಿರುವುದು ನಿಜಕ್ಕೂ ಸೋಜಿಗ ಎನಿಸುತ್ತಿದೆ ಎಂದು ಸಾರ್ವಜನಿಕರು ವ್ಯಂಗ್ಯವಾಡಲು ಅವಕಾಶ ನೀಡಿದೆ.
ದೇಶದಲ್ಲಿ ಮಾತ್ರವಲ್ಲ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸ್ಮಾರಕಗಳನ್ನು ಹೊಂದಿರುವ ವಿಜಯಪುರ ಜಿಲ್ಲೆಯ ಗೋಲಗುಮ್ಮಟವನ್ನು ವಿಶ್ವಪರಂಪರೆ ಪಟ್ಟಿಗೆ ಸೇರಿಸುವಂತೆ ದಶಕಗಳಿಂದ ಒಕ್ಕೋರಲ ಧ್ವನಿ ಕೇಳಿ ಬರುತ್ತಿದೆ. ಜಿಲ್ಲೆಯವರೇ ಆಗಿರುವ ರಮೇಶ ಜಿಗಜಿಣಗಿ ಅವರು ಮೋದಿ ಅವರ ಮೊದಲ ಸರ್ಕಾರದಲ್ಲಿ ಕೇಂದ್ರದಲ್ಲಿ ಸಚಿವರಾಗಿದ್ದ ಸಂದರ್ಭದಲ್ಲಿ ಈ ಕುರಿತು ಭರವಸೆ ನೀಡಿದ್ದು ಕೂಡ ಹುಸಿಯಾಗಿದೆ.
ಐತಿಹಾಸಿಕವಾಗಿ ಗೋಲಗುಮ್ಮಟ ಸೇರಿದಂತೆ ನೂರಾರು ಸ್ಮಾರಕಗಳನ್ನು ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಪುರಾತತ್ವ ಇಲಾಖೆಯ ವೃತ್ತ ಕಚೇರಿ ಸ್ಥಾಪಿಸುವ ಬೇಡಿಕೆ ಕೂಡ ಹಳೆಯದು. ಪುರಾತತ್ವ ಇಲಾಖೆಯ ವಲಯ ಕಚೇರಿ ಒಂದೆರಡು ಸ್ಮಾರಕಗಳಿರುವ ಧಾರವಾಡ ಜಿಲ್ಲೆಯಲ್ಲಿದ. ನೂರಾರು ಸ್ಮಾರಕಗಳಿರುವ ವಿಜಯಪುಕ್ಕೆ ಸ್ಥಳಾಂತರಿಸಿ, ಇಲ್ಲವೇ ವಿಜಯಪುರಕ್ಕೆ ಪ್ರತ್ಯೇಕ ವಲಯ ಕಚೇರಿ ಮಂಜೂರಿ ಮಾಡಬೇಕು ಎಂಬ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸದಿರುವುದಕ್ಕೆ ಜಿಲ್ಲೆಯ ಜನರು ಆಸಮಾಧಾನ ಹೊಂದಿದ್ದಾರೆ.