ವಿಜಯಪುರ: ಬಹಿರಂಗ ಹರಾಜಿನಿಂದ ಜಿಲ್ಲೆಯ ಒಣದ್ರಾಕ್ಷಿ ಬೆಳೆಗಾರ ರೈತರಿಗೆ ಆಗುತ್ತಿರುವ ಸಮಸ್ಯೆ ನಿವಾರಿಸಲು ವಿಜಯಪುರ ಎಪಿಎಂಸಿ ಪ್ರತಿ ಶನಿವಾರ ನಡೆಸುವ ಇ-ಟ್ರೇಡಿಂಗ್ ಇನ್ನು ಮಂಗಳವಾರವೂ ನಡೆಸಲಿದೆ. ಇದರಿಂದ ವಾರದಲ್ಲಿ ಈ ಎರಡು ದಿನವೂ ಒತ್ತಡ ಹೆಚ್ಚಿದರೆ ಮೂರು ದಿನ ಆನ್‌ಲೈನ್ ಟ್ರೇಡಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಬಹಿರಂಗ ಹರಾಜು ವ್ಯವೆಸ್ಥೆಗೆ ಅವಕಾಶ ಕಲ್ಪಿಸುವುದಿಲ್ಲ ಎಂದು ಎಪಿಎಂಸಿ ಸ್ಪಷ್ಟಪಡಿಸಿದೆ.
ಈ ಕುರಿತು ಶನಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಪಿಎಂಸಿ ಅಧ್ಯಕ್ಷ ಸುರೇಶಗೌಡ ಬಿರಾದಾರ ಹಾಗೂ ದ್ರಾಕ್ಷಿ ಬೆಳೆಗಾರರಾದ ಕೆ.ಎಚ್. ಮುಂಬಾರಡ್ಡಿ, ಎಂ.ಎಸ್. ರುದ್ರಗೌಡರ, ರೈತರಿಗೆ ಆಗುತ್ತಿರುವ ಹಲವು ತೀರಿಯ ಸಮಸ್ಯೆ ನೀಗಲು ಬಹಿರಂಗ ಹರಾಜು ಸ್ಥಗಿತಗೊಳಿಸಿ ಇ-ಟ್ರೇಟಿಂಗ್ ಮಾಡಿ ಆನ್‌ಲೈನ್ ಮೂಲಕ ಪಾರದರ್ಶಕವಾಗಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಏಳೆಂಟು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಆನ್‌ಲೈನ್ ಮಾರಾಟಕ್ಕೆ ಶಾಸಕ ಬಸನಗೌಡ ಪಾಟೀಲ ಅವರ ಒತ್ತಾಸೆಯಂತೆ ಮರಳಿ ಆರಂಭಿಸಿದ್ದು, ರೈತರಿಗೆ ಇದರಿಂದ ಅನುಕೂಲವಿದೆ ಎಂದರು.
ಒಣದ್ರಾಕ್ಷಿ ಖರೀದಿಗಾಗಿ ಲೈಸೆನ್ಸ್ ಹೊಂದಿರುವ 10 ಖರೀದಿದಾರರಲ್ಲಿ 8 ಜನರು ಮಾತ್ರ ಸಕ್ರೀಯವಾಗಿದ್ದು, ಇವರು ಮಾಡುವ ವಂಚನೆಯಿಂದ ರೈತರಿಗೆ ಸೂಕ್ತ ಬೆಲೆ ನೀಡಿಕೆಯಲ್ಲಿ ಭಾರಿ ನಷ್ಟವಾಗುತ್ತಿತ್ತು. ಮಾರುಕಟ್ಟೆಗೆ ತರವು ಒಣದ್ರಾಕ್ಷಿಯನ್ನು ಪರೀಕ್ಷೆ ಮಾಡುವ ನೆಪದಲ್ಲಿ ನಾಲ್ಕಾರು ಕೆ.ಜಿ. ದ್ರಾಕ್ಷಿಯನ್ನು ನೆಲಕ್ಕೆ ಚೆಲ್ಲುವ, ಮಾರುಕಟ್ಟೆಗೆ ದ್ರಾಕ್ಷಿ ತಂದ ರೈತರಿಗೆ ಖರೀದಿಯಲ್ಲಿ ವಂಚಿಸಲು ಲೈಸೆನ್ಸ್‌ದಾರರು ಪಾರಮ್ಯ ಮೆರೆಯುವುದು. ಸರ್ಕಾರಕ್ಕೆ ಮಾರುಕಟ್ಟೆ ಶುಲ್ಕ ವಂಚಿಸಲು ದ್ರಾಕ್ಷಿ ಖರೀದಿಸಿದ್ದಕ್ಕೆ ಜಿಎಸ್‌ಟಿ ಬಿಲ್ ನೀಡದಿರುವುದು, ಖರೀದಿ ನಂತರ 50 ದಿನಕ್ಕೆ ಬಿಲ್ ಪಾವತಿಸುವ, 50 ದಿನದೊಳಗೆ ಹಣಕಾಸಿನ ತುರ್ತು ಇರುವ ರೈತರಿಗೆ ಶೇ. 2 ಬಡ್ಡಿ ದರದಲ್ಲಿ ಸಾಲ ನೀಡುವಂಥ ಹಲವು ರೀತಿಯ ವಂಚನೆ ಆಗುತ್ತಿತ್ತು ಎಂದು ವಿವರಿಸಿದರು.
ಆದರೆ ಇ-ಟ್ರೇಡಿಂಗ್‌ನಿಂದ ಪಾರದರ್ಶಕ ಬೆಲೆಯಲ್ಲಿ ಮಾರಾಟಕ್ಕೆ ಅವಕಾಶ ಸಿಗಲಿದ್ದು, ಸ್ಪರ್ಧಾತ್ಮಕ ಬೆಲೆಯೂ ಸಿಗಲಿದೆ. ರೈತರಿಗೆ ಮಾರಾಟ ಮಾಡಿದ 4 ದಿನಗಳಲ್ಲಿ ಬಿಲ್ ಪಾವತಿ ಆಗಲಿದೆ. ಒಣದ್ರಾಕ್ಷಿ ನೆಲಕ್ಕೆ ತೂರಲು ಅವಕಾಶ ಇಲ್ಲ. ಗುಣಮಟ್ಟದ ದ್ರಾಕ್ಷಿ ಬೆಳೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸಲು ಹಾಗೂ ರಫ್ತುದಾರರನ್ನು ಆಕರ್ಷಿಸಲು ನೆರವಾಗಲಿದೆ. ಆದರೆ ಈ ವ್ಯವಸ್ಥೆಯಿಂದ ತಮ್ಮ ವಂಚನೆಗೆ ಕಡಿವಾಣ ಬೀಳುತ್ತಿರುವುದನ್ನು ಕಂಡು ದ್ರಾಕ್ಷಿ ಬೆಳೆಗಾರರು ರೈತರನ್ನು ಎತ್ತಿಕಟ್ಟಿ, ಬಹಿರಂಗ ಹರಾಜಿಗೆ ಒತ್ತಡ ಹೇರುತ್ತಿದ್ದಾರೆ. ಇಂಥ ಯಾವುದೇ ಒತ್ತಡಕ್ಕೆ ಮಣಿಯದೇ ಇ-ಟ್ರೇಡಿಂಗ್ ಮುಂದುವರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಬಹಿರಂಗ ಹರಾಜು ಮರು ಆರಂಭಿಸಲು ಅವಕಾಶ ಕೋರಿ ದ್ರಾಕ್ಷಿ ಖರೀದಿ ಲೈಸೆನ್ಸ್ ಹೊಂದಿದ ಖರೀದಿದಾರರ ಸಂಘದಿಂದ ಸಲ್ಲಿಸಿದ್ದ ಮನವಿಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತ ಮಂಡಳಿ ಜೂ. 18ರಂದು ಜರುಗಿದ ಸಭೆಯಲ್ಲಿ ತಿರಸ್ಕರಿಸಿದೆ. ಹೀಗಾಗಿ ಬಹಿರಂಗ ಹರಾಜಿಗೆ ಬದಲಾಗಿ ರೈತರ ಅನುಕೂಲಕ್ಕೆ ಅಗತ್ಯ ಬಿದ್ದರೆ ಮೂರು ದಿನ ಇ-ಟ್ರೇಡಿಂಗ್ ಮಾಡುವುದಾಗಿ ಹೇಳಿದರು. ದ್ರಾಕ್ಷಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಪೀರಗೊಂಡ ಗದ್ಯಾಳ, ಎಸ್.ಎಚ್. ನಾಡಗೌಡ ಇದ್ದರು.