Advertisement

ಆನಂದ ಮಹಲ್‌ನಲ್ಲಿ ಸಂಗೀತ, ಧ್ವನಿ-ಬೆಳಕಿನ ವೈಭವ

02:49 PM Nov 09, 2019 | Naveen |

ಜಿ.ಎಸ್‌. ಕಮತರ
ವಿಜಯಪುರ:
ಐತಿಹಾಸಿಕ ಆನಂದ ಮಹಲ್‌ನಲ್ಲಿ ಪ್ರತಿ ಶನಿವಾರ ಸಂಗೀತ-ನೃತ್ಯ ಕಾರ್ಯಕ್ರಮಕ್ಕೆ ನ.9ರಂದು ಚಾಲನೆ ದೊರೆಯಲಿದೆ. ಇನ್ನು ಪ್ರತಿ ವಾರವೂ ಜಿಲ್ಲೆಯ ಜನರಿಗೆ ಐತಿಹಾಸಿಕ ಸ್ಮಾರಕದಲ್ಲಿ ವಿನೂತನ ರೀತಿಯಲ್ಲಿ ನವರಸಪುರ ಸಾಂಸ್ಕೃತಿಕ ಉತ್ಸವ ಸಂಭ್ರಮ ಮನೆ ಮಾಡಲಿದೆ.

Advertisement

ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಆಧ್ಯಕ್ಷತೆಯಲ್ಲಿ ಜರುಗಿದ ವಿಜಯಪುರ ಸಾರ್ವಜನಿಕ ಸ್ಥಳಗಳ ಅಭಿವೃದ್ಧಿ ಮತ್ತು ಸಂರಕ್ಷಣಾ ಸಮಿತಿ ಪ್ರತಿ ವಾರದ ಕೊನೆ ಎರಡು ದಿನಗಳ ಸಂಜೆ ಆನಂದ ಮಹಲ್‌ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅನಂದ ಮಹಲ್‌ ಸ್ವತ್ಛಗೊಳಿಸಿದ್ದು, ರಾತ್ರಿವೇಳೆ ಆನಂದ ಮಹಲ್‌ ಸ್ಮಾರಕಕ್ಕೆ ವರ್ಣರಂಜಿತ ಬೆಳಕಿನ ಪ್ರಾಯೋಗಿಕ ಪರೀಕ್ಷೆಯೂ ಯಶಸ್ವಿಯಾಗಿದೆ.

ಮತ್ತೊಂದೆಡೆ ಆನಂದ ಮಹಲ್‌ ಸ್ಮಾರಕ ಭಾರತೀಯ ಪುರಾತತ್ವ ಇಲಾಖೆ, ಕರ್ನಾಟಕ ಪಾರಂಪರಿಕ ಸಂರಕ್ಷಣಾ ಇಲಾಖೆ ಸೇರಿದಂತೆ ಯಾರ ವಾರಸುದಾರಿಕೆ ಹೊಂದಿಲ್ಲ. ಹೀಗಾಗಿ ಸದರಿ ಐತಿಹಾಸಿಕ ಸ್ಮಾರಕವನ್ನು ವಿಜಯಪುರ ಸಾರ್ವಜನಿಕ ಸ್ಥಳಗಳ ಆಭಿವೃದ್ಧಿ ಮತ್ತು ಸಂರಕ್ಷಣಾ ಸಮಿತಿ ಸ್ವಾಧೀನ ಮಾಡಿಕೊಂಡು ಸಮಗ್ರ ಅಭಿವೃದ್ಧಿ ಹಾಗೂ ಸಂರಕ್ಷಣೆ ಮಾಡಿ ಮಾದರಿಯಾಗಿ ರೂಪಿಸಲು ನಿರ್ಧರಿಸಲಾಗಿದೆ.

ಸದರಿ ಐತಿಹಾಸಿಕ ಸ್ಮಾರಕದಲ್ಲಿ ಬಿಎಲ್‌ಡಿಇ ಸಂಸ್ಥೆಯಲ್ಲಿರುವ ಪಾರಂಪರಿಕ ವರ್ಣಚಿತ್ರಗಳನ್ನು ಪಡೆಯಲು ವಿನಂತಿಸಿಕೊಂಡು ಗ್ಯಾಲರಿ ರೂಪಿಸಲು ಚರ್ಚಿಸಲಾಗಿದೆ. ಇದಲ್ಲದೇ ಆನಂದ ಮಹಲ್‌ ಪಕ್ಕದಲ್ಲಿ ಕಂಟಿ ಬೆಳೆದಿರುವ ಸ್ಥಳವನ್ನು ಸ್ವಚ್ಛಗೊಳಿಸಿ, ಅರೆ ಕಿಲ್ಲಾದಲ್ಲಿರುವ ಗಗನಮಹಲ್‌, ಕಂದಕ ಹಾಗೂ ಪಕ್ಕಲ್ಲಿರುವ ಬಾರಾಕಮಾನ್‌ ಸ್ಮಾರಕ ವೀಕ್ಷಣೆಗೆ ಬರುವ ಪ್ರವಾಸಿಗರ ವಾಹನ ನಿಲುಗಡೆಗೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಯೋಜಿಸಲಾಗಿದೆ.

ಇದರ ಮೊದಲ ಭಾಗವಾಗಿ ವಿಜಯಪುರ ಆದಿಲ್‌ ಶಾಹಿ ಅರಸರ ಕಾಲದಲ್ಲಿ ವಿದೇಶಿ ರಾಯಭಾರಿಗಳನ್ನು ಸ್ವಾಗತಿಸಲು ನಿರ್ಮಿಸಿದ್ದ ಐತಿಹಾಸಿಕ ಆನಂದ ಮಹಲ್‌ ನಲ್ಲಿ ಇದೇ ಮೊದಲ ಬಾರಿಗೆ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯುತ್ತಿದೆ. ಸಂಗೀತ ಪ್ರಿಯರಾಗಿದ್ದ ಶಾಹಿ ಅರಸರ ರಾಜಧಾನಿ ವಿಜಯಪುರ ಮಹಾನಗರ ಐತಿಹಾಸಿಕ ಸ್ಮಾರಕದಲ್ಲಿ, ಧ್ವನಿ ಬೆಳಕಿನಲ್ಲಿ ಸಂಗೀತ, ನೃತ್ಯ, ಗಾಯನದಂಥ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿರಂತರ ನವರಸಪುರ ಉತ್ಸವಕ್ಕೆ ವೇದಿಕೆ ಸಿದ್ಧವಾಗಿದೆ. ಇನ್ನು ಮುಂದೆ ಪ್ರತಿ ಶನಿವಾರ ಹಾಗೂ ರವಿವಾರ ಸಂಜೆ 7ರಿಂದ ರಾತ್ರಿ 9 ಗಂಟೆವರೆಗೆ ನಡೆಯುವ ಈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಇದೆ.

Advertisement

ಮೊದಲ ಬಾರಿಗೆ ಆನಂದ ಮಹಲ್‌ ನಲ್ಲಿ ನ.9ರಂದು ಸಂಜೆ 6 ಗಂಟೆಗೆ ಸಂಗೀತ ಹಾಗೂ ಧ್ವನಿ ಬೆಳಕಿನ ಸಾಂಸ್ಕೃತಿಕ ಸಮಾರಂಭಕ್ಕೆ ಖ್ಯಾತ ಇತಿಹಾಸ ಸಂಶೋಧಕ ಡಾ| ಕೃಷ್ಣ ಕೊಲ್ಹಾರ ಕುಲಕರ್ಣಿ ಚಾಲನೆ ನೀಡಲಿದ್ದು, ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷತೆ ವಹಿಸಲಿದ್ದಾರೆ.

ನ. 9ರಂದು ಸಂಜೆ ದಿಕ್ಷಾ ಮತ್ತು ದಿವ್ಯಾ ಭಿಸೆ ಅವರಿಂದ ನೃತ್ಯ, ಲತಾ ಜಾಗೀರದಾರ ಅವರಿಂದ ಸಂಗೀತ ಕಾರ್ಯಕ್ರಮ ಹಾಗೂ ಫ್ಯೂಜನ್‌ ಮ್ಯೂಸಿಕ್‌ ಕಾರ್ಯಕ್ರಮವನ್ನು ಕೃತಿಕಾ ಜಂಗಿನಮಠ ನಡೆಸಿಕೊಡಲಿದ್ದಾರೆ.

ನ. 10ರಂದು ಸಂಜೆ ಬೋಪಾಲದ ದಿವಾಕರ ಮೀನಾ ಅವರಿಂದ ಗಜಲ್‌ ಕಾರ್ಯಕ್ರಮ ಜರುಗಲಿದೆ. ಜಿಲ್ಲೆಯ ಜನತೆ ಈ ಸಂಗೀತ ಧ್ವನಿ ಬೆಳಕಿನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆನಂದಿಸುವಂತೆ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಹಾಗೂ ಅಪರ ಜಿಲ್ಲಾಧಿಕಾರಿ ಪ್ರಸನ್ನ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next