Advertisement
ಮಂಗಳವಾರ ನಗರದಲ್ಲಿ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕಳಪೆ ಗುಣಮಟ್ಟದ ಸ್ಪಿಂಕ್ಲರ್ ಪೈಪ್ ಪ್ರದರ್ಶಿಸಿದ ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ವಿಠ್ಠಲ ಬಿರಾದಾರ, ಸರ್ಕಾರದ ಇಲಾಖೆ ಮೂಲಕವೇ ರೈತರಿಗೆ ಕಳಪೆ ಗುಣಮಟ್ಟದ ಸ್ಪ್ರಿಂಕ್ಲರ್ ಪೈಪ್ ವಿತರಿಸಿದ್ದಾರೆ. ಇದರ ವಿರುದ್ಧ 2023 ಜುಲೈ ತಿಂಗಳಲ್ಲಿ ಹೋರಾಟ ನಡೆಸಿ, ತನಿಖೆಗೆ ಆಗ್ರಹಿಸಿದರೂ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
Related Articles
Advertisement
ಈ ಕುರಿತು ದಾಖಲೆ ಸಮೇತ ಲೋಕಾಯುಕ್ತರಿಗೂ ದೂರು ನೀಡಲಾಗಿದ್ದು, ತನಿಖೆ ಆರಂಭಗೊಂಡಿಲ್ಲ ಎಂದರು.
ಸರ್ಕಾರದ ಯೋಜನೆ ಅನುಷ್ಠಾನದಲ್ಲಿ ರೈತರಿಗೆ ಮೋಸ ಮಾಡಿರುವ ನೋಂದಾಯಿತ ಕಂಪನಿಗಳ ಮೇಲೆ ಕ್ರಮ ಕೈಗೊಂಡಿಲ್ಲ. ಕಾಗದದ ದಾಖಲೆಗಳಿಗಿಂತ ಕಳಪೆ ಗುಣಮಟ್ಟದ ಸ್ಪ್ರಿಂಕ್ಲರ್ ಪೈಪುಗಳೇ ಕಣ್ಣೆದುರಿಗೆ ಸಾಕ್ಷಿ ಇದ್ದು, ಕೂಡಲೇ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ವರ್ಷಪೂರ್ತಿ ಸ್ಪಿಂಕ್ಲರ್ ಪೈಪ್ ಪೂರೈಕೆಗೆ ಅವಕಾಶ ಇದ್ದರೂ ಕೇವಲ ಮೂರು ತಿಂಗಳು ಮಾತ್ರ ವಿತರಿಸಲಾಗುತ್ತದೆ. ಒಬ್ಬ ರೈತನಿಗೆ ಒಂದುಬಾರಿ ಸ್ಪಿಂಕ್ಲರ್ ಪೈಪ್ ಸೌಲಭ್ಯ ನೀಡಿದ ಬಳಿಕ ಮತ್ತೆ 7 ವರ್ಷಗಳ ವರೆಗೆ ಪೈಪ್ ಸೌಲಭ್ಯ ಸಿಗುವುದಿಲ್ಲ. ಒಂದೆಡೆ ರೈತರಿಗೆ ಅನ್ಯಾಯವಾಗುತ್ತಿದ್ದು, ತೊಂದರೆ ಅನುಭವಿಸುವಂತಾಗಿದೆ. ರಿಯಾಯಿತಿ ಹಣ ನೀಡುವ ಕಾರಣ ಸರ್ಕಾರಕ್ಕೂ ಆರ್ಥಿಕ ವಂಚನೆ ಆಗಿದೆ ಎಂದು ದೂರಿದರು.
ಕಳಪೆ ಮಟ್ಟದ ಸ್ಪಿಂಕ್ಲರ್ ಪೈಪ್ ತಯಾರಿಸಿ ರೈತರು, ಸರ್ಕಾರವನ್ನು ವಂಚಿಸಿದ ನೋಂದಾಯಿತ ಕಂಪನಿಗಳ ವಿರುದ್ಧ ಕೂಡಲೇ ಸರ್ಕಾರ ಹಾಗೂ ಲೋಕಾಯುಕ್ತರು ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಕಳಪೆ ಗುಣಮಟ್ಟದ ಸಾಮಗ್ರಿ ಪೂರೈಸಿದ ಕಂಪನಿಯ ನೋಂದಣಿ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.