ಜಿ.ಎಸ್. ಕಮತರ
ವಿಜಯಪುರ: ಗುಮ್ಮಟ ನಗರಿಯ ಬಾನಂಗಳದಲ್ಲಿ ಲೋಹದ ಹಕ್ಕಿಗಳು ಹಾರಾಟಕ್ಕೆ ಮತ್ತೂಮ್ಮೆ ರೆಕ್ಕೆ ಮೂಡಿದೆ. ವಿಜಯಪುರ ನಗರದ ಹೊರ ವಲಯದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಸ್ವಾಧೀನವಾಗಿ, ಯೋಜನೆಗೆ ಅಡಿಗಲ್ಲು ಹಾಕಿ ದಶಕ ಕಳೆದರೂ ಕಾಮಗಾರಿಗೆ ಚಾಲನೆ ದೊರೆತಿಲ್ಲ. ಈ ಕುರಿತು ಅಧಿಕಾರಸ್ಥರು ನೀಡಿರುವ ಹಲವು ಭರವಸೆಗಳು ಹುಸಿಯಾಗಿರುವ ಬೆನ್ನಲ್ಲೇ ಇದೀಗ ಮತ್ತೂಮ್ಮೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು ಈ ಬಾರಿಯಾದರೂ ಭರವಸೆ ಈಡೇರುವುದೇ ಎಂಬ ಜಿಜ್ಞಾಸೆ ಆರಂಭಗೊಂಡಿದೆ.
ಸಿಎಂ ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಜರುಗಿದ ರಾಜ್ಯ ಸಂಪುಟ ಸಭೆಯಲ್ಲಿ ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣಕ್ಕೆ ತಾತ್ವಿಕ ಒಪ್ಪಿಗೆ ದೊರಕಿದೆ. ಗೃಹ ಸಚಿವ ಎಂ.ಬಿ. ಪಾಟೀಲ ಅವರು ಗಂಭೀರವಾಗಿ ಚರ್ಚಿಸಿ, ಯೋಜನೆ ಅನುಷ್ಠಾನಕ್ಕೆ ಪಟ್ಟು ಹಿಡಿದ ಕಾರಣ ಸೋಮವಾರ ರಾಜ್ಯ ಸರ್ಕಾರ ಮತ್ತೂಮ್ಮೆ ಅದಿಲ್ ಶಾಹಿ ಸಾಮ್ರಾಜ್ಯದಲ್ಲಿ ವಿಮಾನ ಹಾರಾಟಕ್ಕೆ ಸಮ್ಮತಿ ನೀಡಿರುವುದು ಜಿಲ್ಲೆಯಲ್ಲಿ ಜನರಲ್ಲಿ ಕಮರಿದ್ದ ನಿರೀಕ್ಷೆ ಮತ್ತೆ ಚಿಗುರೊಡೆದಿದೆ.
ವಿಜಯಪುರ ನಗರಕ್ಕೆ ಸುಮಾರು 15 ಕಿಮೀ ದೂರದಲ್ಲಿರುವ ಮದಭಾವಿ ಬಳಿ ಸರ್ಕಾರ ನೂರಾರು ಎಕರೆ ಜಮೀನು ಭೂಸ್ವಾಧೀನ ಮಾಡಿಕೊಂಡಿದೆ. ಮತ್ತೂಂದೆಡೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಯೋಜನೆ ಕಾಮಗಾರಿಗೆ ಅಡಿಗಲ್ಲು ಹಾಕಿತ್ತು. ಸದರಿ ಯೋಜನೆಗೆ ಕೇಂದ್ರ ರಾಜ್ಯ ಸರ್ಕಾರಗಳು ಯೋಜನೆಯಲ್ಲಿ ಸಮಪಾಲಿನ ಅನುದಾನ ನೀಡಬೇಕು ಎಂದು ಒಪ್ಪಂದವಾಗಿತ್ತು. ಇದಕ್ಕಾಗಿ ರಾಜ್ಯ ಸರ್ಕಾರ ಭೂಮಿಯನ್ನು ಮೀಸಲಿಸಿರಿಕೊಂಡಿತ್ತು. ಯೋಜನೆಯ ವೆಚ್ಚದಲ್ಲಿ ಕೇಂದ್ರ ಶೇ.51 ಹಾಗೂ ರಾಜ್ಯ ಶೇ.49 ವೆಚ್ಚ ಭರಿಸುವ ಒಪ್ಪಂದವೂ ಆಗಿತ್ತು. ಮತ್ತೂಂದೆಡೆ ಯೋಜನೆಯನ್ನು ಹೈದರಾಬಾದ್ ಮೂಲದ ಮಾರ್ಗ್ ಕಂಪನಿಗೂ ಗುತ್ತಿಗೆ ನೀಡಲಾಗಿತ್ತು. ಆದರೆ ಭೂಸ್ವಾಧೀನ ಮಾಡಿಕೊಂಡ ಜಮೀನು ಸಮತಟ್ಟು ಇಲ್ಲ, ಈ ಭೂಮಿ ಸಮತಟ್ಟು ಮಾಡುವುದಕ್ಕೆ ಹಲವು ಕೋಟಿ ಹಣ ಬೇಕು ಎಂದು ಮಾರ್ಗ ಕಂಪನಿ ಯೋಜನೆ ಆರಂಭಿಸದೇ ಮರಳಿ ಹೋಯಿತು. ಇದಾದ ಬಳಿಕ ವಿಜಯಪುರ ವಿಮಾನ ನಿಲ್ದಾಣ ಯೋಜನಾ ಸ್ಥಳಕ್ಕೆ ಹಲವು ಸಚಿವರು, ಅಧಿಕಾರಿಗಳು ಭೇಟಿ ನೀಡಿ ಭರವಸೆ ನೀಡಿದ್ದೇ ಬಂತು, ವಿಮಾನ ಹಾರುವ ಕನಸು ಮಾತ್ರ ನನಸಾಗಿಸಲು ಯಾರೊಬ್ಬರೂ ಗಮನ ಹರಿಲಿಸಲೇ ಇಲ್ಲ.
ಈಚೆಗೆ ಮುಕ್ತಾಯ ಕಂಡ ಲೋಕಸಭೆ ಚುನಾವಣೆಯಲ್ಲೂ ವಿಜಯಪುರ ವಿಮಾನ ನಿಲ್ದಾಣ ವಿಷಯ ಪ್ರಚಾರದ ಹಾಗೂ ಚರ್ಚೆ ವಿಷಯವಾಗಿತ್ತು. ಇದೀಗ ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ವಿಜಯಪುರ ವಿಮಾನ ನಿಲ್ದಾಣ ಯೋಜನೆ ಆರಂಭದ ಕುರಿತು ಗೃಹ ಸಚಿವ ಎಂ.ಬಿ. ಪಾಟೀಲ ವಿಷಯ ಪ್ರಸ್ತಾಪಿಸಿದ್ದು, ಸಿಎಂ ಎಚ್.ಡಿ. ಕುಮಾರಸ್ವಾಮಿ ಸಮ್ಮತಿ ಸೂಚಿಸಿದ್ದು, ಮೊಲದ ಆದ್ಯತೆಯಲ್ಲಿ ವಿಜಯಪುರ ವಿಮಾನ ನಿಲ್ದಾಣ ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಮೂಲಭೂತ ಸೌಕರ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿರುವುದು ವಿಜಯಪುರ ಜಿಲ್ಲೆಯ ಜನರ ಮನದಲ್ಲಿ ಮತ್ತೂಮ್ಮೆ ವಿಮಾನ ಹಾರುವ ಕನಸಿಗೆ ರೆಕ್ಕೆ ಮೂಡಲು ಕಾರಣವಾಗಿದೆ.
ಪಟ್ಟು ಹಿಡಿದ ಎಂ.ಬಿ.ಪಾಟೀಲ್: ಸದರಿ ಸಂಪುಟ ಸಭೆಯಲ್ಲಿ ಹಾಸನದಲ್ಲಿ ನೋಫ್ರಿಲ್-ಗ್ರೀನ್‌ಫಿಲ್ಡ್ ವಿಮಾನ ನಿಲ್ದಾಣ ನಿರ್ಮಾಣದ ವಿಷಯ ಪ್ರಸ್ತಾಪಕ್ಕೆ ಬರುತ್ತಲೇ ಮಧ್ಯ ಪ್ರವೇಶಿಸಿದ ಗೃಹ ಸಚಿವ ಎಂ.ಬಿ. ಪಾಟೀಲ ವಿಜಯಪುರ ಜಿಲ್ಲೆಯಲ್ಲಿ ದಶಕದಿಂದ ನನೆಗುದಿಗೆ ಬಿದ್ದಿರುವ ವಿಮಾನ ನಿಲ್ದಾಣದ ಯೋಜನೆ ಮೊದಲು ಇತ್ಯರ್ಥ ಪಡಿಸಿ ಎಂದು ಪಟ್ಟು ಹಿಡಿದಿದ್ದಾರೆ. ವಿಜಯಪುರ ವಿಶ್ವ ಮಟ್ಟದಲ್ಲಿ ಪ್ರವಾಸೋದ್ಯಮದಲ್ಲಿ ಪ್ರಮುಖ ತಾಣವಾಗಿ ಗುರುತಿಸಿಕೊಂಡಿರುವ ಐತಿಹಾಸಿಕ ನಗರವಾಗಿದ್ದರೂ ವಿಮಾನ ನಿಲ್ದಾಣ ಇಲ್ಲದೇ ಪ್ರವಾಸೋದ್ಯಮಕ್ಕೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿನ್ನಡೆ ಆಗಿದೆ. ಉತ್ತರ ಕರ್ನಾಟಕದ ಪ್ರಮುಖ ಜಿಲ್ಲಾ ಕೇಂದ್ರವೂ ಹೌದು. ಜಿಲ್ಲೆಯಲ್ಲಿ ಬೆಳೆಯುವ ಗುಣಮಟ್ಟದ ದ್ರಾಕ್ಷಿ, ದಾಳಿಂಬೆ, ಲಿಂಬೆ ಸೇರಿದಂತೆ ಇತರೆ ಹಣ್ಣು-ತರಕಾರಿ ಸೇರಿದಂತೆ ತೋಟಗಾರಿಕೆ ಬೆಳೆಗಳ ರಫ್ತಿಗೆ ವ್ಯವಸ್ಥೆ ಇಲ್ಲದೇ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಪ್ರವಾಸೋದ್ಯಮ, ಕೃಷಿ, ತೋಟಗಾರಿಕೆ ಕ್ಷೇತ್ರಗಳಿಗೆ ಭಾರಿ ಹಿನ್ನಡೆಯಾಗಿ, ಜಿಲ್ಲೆಯಲ್ಲಿ ವ್ಯಾಪಾರ ಹಾಗೂ ಅಭಿವೃದ್ಧಿ ಆಗುತ್ತಿಲ್ಲ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ವಿವರಿಸಿದ್ದಾರೆ.
ವಿಜಯಪುರ ನಗರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಅಗತ್ಯ ಜಮೀನು ಕೂಡ ಲಭ್ಯ ಇದೆ. ಯೋಜನೆಗೆ ಚಾಲನೆ ನೀಡಿ, ಕಾಮಗಾರಿಯನ್ನು ವಹಿಸಿಕೊಂಡಿದ್ದ ಕಂಪನಿ ಯೋಜನೆ ಕೈ ಬಿಟ್ಟಿದೆ. ಈ ಕುರಿತು ಕೇಂದ್ರ ವಿಮಾನಯಾನ ಇಲಾಖೆಗೆ ಪತ್ರ ಬರೆದು ಒತ್ತಾಯಿಸಿದರೂ ಯಾವುದೇ ಪ್ರಯೋಜವಾಗಿಲ್ಲ. ಈ ಕುರಿತು ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ಹಲವು ಬಾರಿ ಅಧಿಕಾರಿಗಳ ಮಟ್ಟದಲ್ಲಿ ಸಭೆ ಮಾಡಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗಿತ್ತು. ಇದೀಗ ಕೇಂದ್ರ ಶೇ.51 ಹಾಗೂ ರಾಜ್ಯ ಶೇ.49 ವೆಚ್ಚ ಭರಿಸುವ ಒಪ್ಪಂದದಡಿ ವಿಜಯಪುರದಲ್ಲಿ ವಿಮಾನ ನಿಲ್ದಾಣ ಆರಂಭಿಸುವ ಯೋಜನೆ ಆಯ್ಕೆ ಮಾಡಿದೆ. ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಕಳುಹಿಸಲು ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಸಿಎಂ ಕುಮಾರಸ್ವಾಮಿ ಹಾಸನ ವಿಮಾನ ನಿಲ್ದಾಣದ ವಿಷಯ ಕೈಬಿಟ್ಟು ವಿಜಯಪುರ ವಿಮಾನ ನಿಲ್ದಾಣ ಯೋಜನೆಗೆ ತಾತ್ವಿಕ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೇ ತಕ್ಷಣ ಈ ಕುರಿತು ಕ್ರಮ ಜರುಗಿಸಲು ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ನಿರ್ದೇಶನ ನೀಡಿದ್ದಾರೆ.
ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಮ್ಮಿಶ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಶೀಘ್ರವೇ ಯೋಜನೆಗೆ ಚಾಲನೆ ದೊರೆಯಲಿದೆ. ಸಿಎಂ ಅವರೇ ಖುದ್ದು ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಿದ್ದು, ವಿಮಾನ ನಿಲ್ದಾಣ ಯೋಜನೆ ಈ ಬಾರಿ ಆರಂಭವಾಗುತ್ತದೆ. ಜನತೆ ಈ ವಿಷಯದಲ್ಲಿ ಯಾವುದೇ ರೀತಿಯ ಅನುಮಾನ ಇರಿಸಿಕೊಳ್ಳುವುದು ಬೇಡ.
• ಎಂ.ಬಿ. ಪಾಟೀಲ, ಗೃಹ ಸಚಿವ