Advertisement

ವರ್ಷದಲ್ಲಿ ವಿಮಾನ ಹಾರಾಟ: ಕಾರಜೋಳ

12:52 PM Jul 14, 2020 | Suhan S |

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಬರುವ ಒಂದು ವರ್ಷದಲ್ಲಿ ವಿಮಾನ ಹಾರಾಟ ಮಾಡಲಿದೆ. ಸಿದ್ದರಾಮಯ್ಯ ಸರ್ಕಾರ ಕಲಬುರಗಿ ವಿಮಾನ ನಿಲ್ದಾಣಕ್ಕೆ ತೋರಿದ ರಾಜಕೀಯ ಇಚ್ಛಾಶಕ್ತಿಯನ್ನು ವಿಜಯಪುರ ಜಿಲ್ಲೆಗೆ ತೋರಲಿಲ್ಲ. ಬದಲಾಗಿ ಹಿಂದೆ ನಮ್ಮ ಸರ್ಕಾರ ಮಂಜೂರು ಮಾಡಿದ ವಿಮಾನ ನಿಲ್ದಾಣ ಯೋಜನೆಯನ್ನೇ ರದ್ದು ಮಾಡಿ ರಾಜಕೀಯ ಮಾಡಿದರು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹರಿಹಾಯ್ದರು.

Advertisement

ಸೋಮವಾರ ಬುರಣಾಪುರ ಗ್ರಾಮದ ವಿಮಾನ ನಿಲ್ದಾಣಕ್ಕಾಗಿ ಕಾಯ್ದಿರಿಸಿದ ಜಮೀನು ಮತ್ತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ದಶಕದ ಹಿಂದೆ ಅಧಿಕಾರದಲ್ಲಿದ್ದ ಯಡಿಯೂರಪ್ಪ ನೇತೃತ್ವದ ನಮ್ಮ ಸರ್ಕಾರ ವಿಜಯಪುರ ವಿಮಾನ ನಿಲ್ದಾಣಕ್ಕೆ ಅಡಿಗಲ್ಲು ಹಾಕಿ, ಅಗತ್ಯ ಇರುವ ಎಲ್ಲ ನೆರವು ನೀಡಲು ಮುಂದಾಗಿತ್ತು. ಆದರೆ ಅಷ್ಟರಲ್ಲಿ ನಮ್ಮ ಸರ್ಕಾರದ ಅವ ಧಿ ಮುಗಿದು, ಸಿದ್ದರಾಮಯ್ಯ ಸರ್ಕಾರ ಅ ಧಿಕಾರಕ್ಕೆ ಬಂತು. ಕಾಂಗ್ರೆಸ್‌ ಸರ್ಕಾರ ಕಲಬುರಗಿ ವಿಮಾನ ನಿಲ್ದಾಣಕ್ಕೆ ತೋರಿದ ಆಸಕ್ತಿಯನ್ನು ವಿಜಯಪುರ ವಿಮಾನ ನಿಲ್ದಾಣಕ್ಕೂ ತೋರಿದ್ದರೆ ಐತಿಹಾಸಿಕ ವಿಜಯಪುರ ಜಿಲ್ಲೆಯಲ್ಲಿ ವಿಮಾನ ಹಾರಾಟ ಆರಂಭವಾಗಿ 5 ವರ್ಷ ಆಗುತ್ತಿತ್ತು. ಆದರೆ ಸಿದ್ದರಾಮಯ್ಯ ಹಾಗೂ ಎಂ.ಬಿ. ಪಾಟೀಲ ಅವರು ರಾಜಕೀಯ ಇಚ್ಛಾಶಕ್ತಿಯ ಬದ್ಧತೆ ತೋರದೇ ರಾಜಕೀಯ ಮಾಡಿದರು ಎಂದು ವಾಗ್ಧಾಳಿ ನಡೆಸಿದರು.

ಪ್ರಸ್ತುತ ಕೋವಿಡ್‌ ಆರ್ಥಿಕ ಸಂಕಷ್ಟದ ಮಧ್ಯೆಯೂ ನಮ್ಮ ಸರ್ಕಾರ ಲೋಕೋಪಯೋಗಿ ಇಲಾಖೆ ಮೂಲಕ 220 ಕೋಟಿ ರೂ. ವೆಚ್ಚದ ವಿಮಾನ ನಿಲ್ದಾಣ ಕಾಮಗಾರಿ ಆರಂಭದ ಕುರಿತು ಸಂಪುಟದಲ್ಲಿ ತೀರ್ಮಾನಿಸಿದ್ದು, ರಾಜ್ಯ ಸರ್ಕಾರವೇ ಸಂಪೂರ್ಣ ವೆಚ್ಚ ಭರಿಸಲಿದೆ. ಮೊದಲ ಹಂತದಲ್ಲಿ 95 ಕೋಟಿ ರೂ. ಮೀಸಲಿರಿಸಿದೆ. ಇದಲ್ಲದೇ ಇಂದೇ (ಜುಲೈ 13) ಮೊದಲ ಹಂತದ ಕಾಮಗಾರಿಗಾಗಿ 79.59 ಕೋಟಿ ರೂ. ವೆಚ್ಚದ ಟೆಂಡರ್‌ ಕರೆದಿದ್ದು, 2 ತಿಂಗಳಲ್ಲಿ ಟೆಂಡರ್‌ ಪ್ರಕ್ರಿಯೆ ಮುಗಿದು, ವರ್ಷದಲ್ಲಿ ವಿಮಾನ ನಿಲ್ದಾಣ ಪೂರ್ಣಗೊಳ್ಳಲಿದೆ. ಅಷ್ಟರ ಮಟ್ಟಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ನಮ್ಮ ಸರ್ಕಾರ ನಮ್ಮ ಇಚ್ಛಾಶಕ್ತಿ ಪ್ರದರ್ಶಿಸಿದೆ ಎಂದು ಕುಟುಕಿದರು.

ಬೆಂಗಳೂರಿನಿಂದ ವಿಮಾನದಲ್ಲೇ ಬಂದು ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟಿಸಿದ ಮಾದರಿಯಲ್ಲೇ ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಮುಖ್ಯಮಂತ್ರಿ ವಿಮಾನದಲ್ಲೇ ಇಲ್ಲಿಗೆ ಬರಲಿದ್ದಾರೆ. ಕಾಮಗಾರಿಗೆ ಚಾಲನೆ ನೀಡುವ ಸಂದರ್ಭದಲ್ಲಿ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳ ಎಲ್ಲ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಕಾರ್ಯಕ್ರಮ ಮಾಡಲಾಗುತ್ತದೆ ಎಂದರು.

ಕೇಂದ್ರ ಸರ್ಕಾರ ದೇಶದಲ್ಲಿ ಹೊಸದಾಗಿ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಇಲ್ಲ. ಆದರೆ ರಾಜ್ಯ ಸರ್ಕಾರಗಳು ವಿಮಾನ ನಿಲ್ದಾಣ ನಿರ್ಮಿಸಿಕೊಟ್ಟರೆ, ಕೇಂದ್ರ ಸರ್ಕಾರ ತಾಂತ್ರಿಕ ಸೌಲಭ್ಯ ಕಲ್ಪಿಸಿಕೊಂಡು ಉಡಾನ್‌ ಯೋಜನೆಯಲ್ಲಿ ವಿಮಾನ ಹಾರಾಟ ಯೋಜನೆ ಜಾರಿಗೆ ತರುವುದಾಗಿ ಹೇಳಿದೆ. ಹೀಗಾಗಿ ನಮ್ಮ ರಾಜ್ಯ ಸರ್ಕಾರವೇ ಪೂರ್ಣ ವೆಚ್ಚ ಭರಿಸಲು ಮುಂದಾಗಿದೆ. ಸದರಿ ಯೋಜನೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ಕೇಂದ್ರ ವಿಮಾನಯಾನ ಸಂಸ್ಥೆ ಅಧೀನದಲ್ಲಿರುವ ರೈಟ್ಸ್‌ ಸಂಸ್ಥೆಗೆ ವಹಿಸಲಾಗಿದೆ ಎಂದರು.

Advertisement

ಸದರಿ ವಿಮಾನ ನಿಲ್ದಾಣದಿಂದ 82 ಆಸನಗಳ ವಿಮಾನ ಹಾರಾಟ ಮಾಡುವ ಸಾಮರ್ಥ್ಯ ಹೊಂದಲಿದೆ. ಜಿಲ್ಲೆಯಲ್ಲಿ ನದಿ-ಜಲಾಶಯಗಳ ಜಲ ಸಂಪನ್ಮೂಲ ಅಗತ್ಯ ಭೂಮಿ ಲಭ್ಯತೆ ಇರುವುದರಿಂದ ಭವಿಷ್ಯದಲ್ಲಿ ಜಿಲ್ಲೆಯಲ್ಲಿ ಕೈಗಾರಿಕಾ ಕ್ರಾಂತಿ, ಪ್ರವಾಸೋದ್ಯಮ ಅಭಿವೃದ್ಧಿ, ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಸಹಕಾರಿ ಆಗಲಿದೆ. ದೇಶ-ವಿದೇಶಿ ಹೂಡಿಕೆದಾರರು ಬೆಂಗಳೂರಿನ ನಂತರ ವಿಜಯಪುರ ಜಿಲ್ಲೆಯನ್ನೇ ತಮ್ಮ ಆದ್ಯತೆ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಜಿಪಂ ಸಿಇಒ ಗೋವಿಂದರೆಡ್ಡಿ, ಎಸ್ಪಿ ಅನುಪಮ್‌ ಅಗರವಾಲ್‌, ಲೋಕೋಪಯೋಗಿ ಮುಖ್ಯ ಅಭಿಯಂತರ ಎಸ್‌.ಎಫ್‌. ಪಾಟೀಲ, ಅಧೀಕ್ಷಕ ಅಭಿಯಂತರ ಬಿ.ವೈ. ಪವಾರ, ಉಪ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್‌ ಬಾರಿ, ಪಿಡಬ್ಲೂಡಿ ಕಾರ್ಯ ನಿರ್ವಾಹಕ ಅಭಿಯಂತರರಾದ ಬಿ.ಬಿ. ಪಾಟೀಲ, ಪ್ರಶಾಂತ ಗಿಡ್ಡಪ್ಪನಗೋಳ, ವಿ.ಎನ್‌. ಪಾಟೀಲ, ಹೆಸ್ಕಾಂ ಅಧೀಕ್ಷಕ ಅಭಿಯಂತರ ಎಸ್‌.ಇ. ಗೋಟ್ಯಾಳ ಸೇರಿದಂತೆ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next