Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನುದಾನಿತ ಶಿಕ್ಷಕರ ಪ್ರತಿಭಟನೆ

07:10 PM Dec 23, 2019 | Naveen |

ವಿಜಯಪುರ: ಸರ್ಕಾರಿ ನೌಕರರಿಗೆ ಇರುವಂತೆ ಪಿಂಚಣಿ, ಎನ್‌ಪಿಎಸ್‌ ಸೇರಿದಂತೆ ಇತರೆ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಈ ವೇಳೆ ಮಾತನಾಡಿದ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾ ಪ್ರಧಾನ ಸಂಚಾಲಕ ಲಕ್ಷ್ಮೀಪುತ್ರ ಕಿರನಳ್ಳಿ, ರಾಜ್ಯದ ಅನುದಾನಿತ ವಿದ್ಯಾಸಂಸ್ಥೆಗಳಲ್ಲಿ
1-4-2006ಕ್ಕೂ ಪೂರ್ವದಲ್ಲಿ ನೇಮಕಗೊಂಡು ನಂತರ ಅನುದಾನಕ್ಕೆ ಒಳಪಟ್ಟಿರುವ, ಈ ದಿನಾಂಕದ ನಂತರ ನೇಮಕ ಹೊಂದಿ ವೇತನ ಪಡೆಯುತ್ತಿರುವ ಯಾವೊಬ್ಬ ನೌಕರರಿಗೂ ಯಾವುದೇ ವಿದಧ ಪಿಂಚಣಿ (ಎನ್‌ಪಿಎಸ್‌ ಅಥವಾ ಒಪಿಎಸ್‌) ಎರಡು ಸೌಲಭ್ಯ ದೊರೆಯುತ್ತಿಲ್ಲ. ಈ ಕುರಿತು ನಡೆಸಿದ ಹೋರಾಟಗಳಿಗೆ ಸರ್ಕಾರ ಕಣ್ತೆರೆದಿಲ್ಲ ಎಂದರು.

ಪಿಂಚಣಿ ಸೌಲಭ್ಯ ದೊರೆಯದೆ ಈಗಾಗಲೇ ಸುಮಾರು 2,000ಕ್ಕೂ ಹೆಚ್ಚು ನೌಕರರು ತಮ್ಮ ಸೇವೆ ಕೊನೆಯ ತಿಂಗಳ ಸಂಬಳ ಮಾತ್ರ ಪಡೆದು ಬರಿಗೈಯಲ್ಲಿ ನಿವೃತ್ತಿಯಾಗಿದ್ದಾರೆ. ಅನೇಕರು ಸೇವೆಯಲ್ಲಿರುವಾಗಲೇ ಅಕಾಲಿಕವಾಗಿ ಮರಣ ಹೊಂದಿದ್ದಾರೆ. ಇವರ ಕುಟುಂಬಗಳಿಗೆ ಯಾವುದೇ ಆರ್ಥಿಕ ಸೌಲಭ್ಯ ದೊರೆತಿಲ್ಲ ಎಂದು ಸಮಸ್ಯೆ ನಿವೇದಿಸಿಕೊಂಡರು.

ನೌಕರರು ವೇತನಾನುದಾನಕ್ಕೆ ಒಳಪಡುವುದಕ್ಕೂ ಪೂರ್ವದ ಸೇವೆಯನ್ನು, ಸೇವೆಗೆ ಸೇರಿದ ದಿನಾಂಕದಿಂದಲೇ ಪರಿಗಣಿಸಿ ವಿವಿಧ ಸೌಲಭ್ಯಗಳು ನೀಡಬೇಕೆಂದು ಸರ್ವೋತ್ಛ ನ್ಯಾಯಾಲಯ ತೀರ್ಪು ನೀಡಿದೆ. ಆದರೆ ಸರ್ಕಾರ ಮಾತ್ರ ಬೇಡಿಕೆ ಈಡೇರಿಸುತ್ತಿಲ್ಲ. ಇತರೆ ರಾಜ್ಯಗಳಲ್ಲಿ ಅನುದಾನಿತ ನೌಕರರ ಪಾಲಿನ ಎನ್‌ಪಿಎಸ್‌ ವಂತಿಗೆಯನ್ನು ನೌಕರರು ಭರಿಸುತ್ತಿದ್ದು ನೇಮಕಾತಿ ಪ್ರಾಧಿಕಾರದ
ಪಾಲಿನ ವಂತಿಗೆಯನ್ನು ವೇತನ ನೀಡುತ್ತಿರುವ ಸರಕಾರಗಳೇ ಪಾವತಿಸುತ್ತಿವೆ. ಇಡಿ ದೇಶದಲ್ಲಿ ಎಲ್ಲಿಯೂ ಇಲ್ಲದೆ, ಕೇವಲ ಕರ್ನಾಟಕದಲ್ಲಿ ಮಾತ್ರ ಈ ತಾರತಮ್ಯ ಮಾಡಲಾಗುತ್ತಿದೆ ಎಂದು ದೂರಿದರು.

ಪಿಂಚಣಿ ವೇತನದ ಭಾಗವಾಗಿರುವ ಕಾರಣ ಸಂಬಳ ನೀಡುತ್ತಿರುವ ಸರಕಾರವೇ ಪಿಂಚಣಿಯನ್ನೂ ನೀಡಬೇಕು. ಅನುದಾನಿತ ನೌಕರರಿಗೆ ಎನ್‌ಪಿಎಸ್‌ ವಂತಿಗೆಯನ್ನು ಸರಕಾರವೇ ಭರಿಸಬೇಕೆಂದು ಆರನೇ ವೇತನ ಆಯೋಗ ಶಿಫಾರಸು ಮಾಡಿರುತ್ತದೆ. ಆದರೆ ಪುನರ್‌ ಪರಿಶೀಲನಾ ಸಮಿತಿ ತಿರಸ್ಕರಿಸಿದ್ದು ಅಮಾನವೀಯ. 1-4-2006ಕ್ಕೂ ಮೊದಲು ವೇತನ ಪಡೆಯುತ್ತಿದ್ದ ಅನುದಾನಿತ ನೌಕರರಿಗೆ ಪಿಂಚಣಿ ವಿಚಾರದಲ್ಲಿ ತಾರತಮ್ಯವಿಲ್ಲದೆ, ಸರಕಾರಿ ನೌಕರರಿಗಿರುವಂತೆ ಯಥಾವತ್ತಾಗಿ ಹಳೆ ಪಿಂಚಣಿ ನೀಡಲಾಗಿದೆ. 12-2-2014ರಂದು ಜಾರಿಗೆ ಬಂದಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ವೇತನ, ನಿವೃತ್ತಿ ವೇತನ, ಬಡ್ತಿ, ಜೇಷ್ಠತೆ ಮುಂತಾದ ಸೌಲಭ್ಯಗಳ ನಿಯಂತ್ರಕ ವಿಧೇಯಕದಲ್ಲಿ ಅನುದಾನಕ್ಕೆ ಒಳಪಟ್ಟವರಿಗೆ ಸೌಲಭ್ಯ ಒದಗಿಸಿರುವುದಿಲ್ಲ ಎಂದು ವಿವರಿಸಿದರು.

Advertisement

ಕೂಡಲೇ ಸರ್ಕಾರ ನೂತನ ಪಿಂಚಣಿ ಯೋಜನೆ ಕಾಯ್ದೆಗೆ ತಿದ್ದುಪಡಿ ತಂದು, ನೌಕರರ ಪಾಲಿನ ವಂತಿಗೆಗೆ ಪ್ರತಿಯಾಗಿ ನೇಮಕಾತಿ ಪ್ರಾಧಿಕಾರದ ಪಾಲಿನ ವಂತಿಗೆಯನ್ನು ಸರಕಾರವೇ ನೀಡಬೇಕು. ನ್ಯಾಯಸಮ್ಮತ ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಮಾಡು ಇಲ್ಲವೇ ಮಡಿ ಹೋರಾಟವಾಗಿ ರಾಜ್ಯದ ಪಿಂಚಣಿ ವಂಚಿತ 40 ಸಾವಿರ ನೌಕರರು ಬರುವ ವರ್ಷದ ಜನೇವರಿ 10ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋರಾತ್ರಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಹೇಳಿದರು.

ಈ ವೇಳೆ ಜಿಲ್ಲಾ ಸಂಘಟಕ ಗಿರೀಶ ಬಿರಾದಾರ, ಡಾ| ಶ್ರೀಧರ ಕಾಂಬಳೆ, ಐ.ಎಸ್‌. ಕಲಶೆಟ್ಟಿ, ಸಿ.ಎಚ್‌ .ದೇವರಮನಿ, ಆರ್‌.ಡಿ.ಯರವಳ್ಳಿ, ಎಸ್‌.ಆರ್‌. ಫುಲಾರಿ, ಎ.ಎಸ್‌. ಜೇವಜಿ, ಆರ್‌.ಎಸ್‌. ತಳವಾರ, ಎಂ.ಜಿ. ಹರಿಜನ, ಎಲ್‌.ಎಸ್‌. ಹಳೆಮನಿ, ಎಸ್‌. ಎಸ್‌. ಆರೇಶಂಕರ, ಎಸ್‌.ಎಂ. ಕಂಬಾರ, ಎಂ.ಎ. ಲೋಣಿ, ಜಿ.ಎಸ್‌. ರಾಮವಾಡಗಿ, ಜಿ.ಎಸ್‌. ಅಗಸರ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next