Advertisement

ರಫ್ತು ಉದ್ಯೋಗಕ್ಕಿದೆ ವಿಫುಲ ಅವಕಾಶ

03:13 PM Sep 15, 2019 | Naveen |

ವಿಜಯಪುರ: ಈ ಭಾಗದಲ್ಲಿ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳನ್ನು ಸಂಸ್ಕರಿಸಿ ಆಕರ್ಷಕ ಪ್ಯಾಕೆಜಿನೊಂದಿಗೆ ರಫ್ತು ಮಾಡಲು ವಿಫುಲ ಅವಕಾಶಗಳಿದ್ದು ಇದರ ಸದುಪಯೋಗ ಪಡೆಯುವಂತೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸಾಹೇಬಗೌಡ ಬಿರಾದಾರ ಸಲಹೆ ನೀಡಿದರು.

Advertisement

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಬೆಂಗಳೂರು, ಡಿಜಿಎಫ್‌ಟಿ ಬೆಳಗಾವಿ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಫ್ತು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಜಯಪುರ ಜಿಲ್ಲೆಯಲ್ಲಿ ವಿವಿಧ ಕೃಷಿ ಉತ್ಪನ್ನಗಳನ್ನು ಬೆಳೆಸಲಾಗುತ್ತಿದ್ದು ಈ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಲು ರಫ್ತು ಬಹಳ ಅವಶ್ಯಕವಾಗಿದ್ದು, ರಫ್ತು ವ್ಯವಹಾರದ ಸದುಪಯೋಗ ಪಡೆಯುವಂತೆ ರೈತರು ಹಾಗೂ ಯುವ ಉದ್ಯಮಿಗಳಿಗೆ ಕಿವಿಮಾತು ಹೇಳಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ. ಸಿದ್ದಣ್ಣ ಮಾತನಾಡಿ, ರಫ್ತು ಮಾಡುವ ಉದ್ಯಮಿಗಳಿಗೆ ಸರ್ಕಾರದಿಂದ ಅನೇಕ ಉತ್ತೇಜನಕಾರಿ ಸೌಲಭ್ಯಗಳಿವೆ. ಸರಕಾರದ ಸೌಲಭ್ಯಗಳ ಸದ್ಬಳಕೆ ಮೂಲಕ ಜಿಲ್ಲೆ ಹಾಗೂ ರಾಜ್ಯದ ಉದ್ಯಮ ಅಭಿವೃದ್ಧಿಗೆ ಕೊಡುಗೆ ನೀಡಿ ಎಂದರು.

ಜಿಲ್ಲಾ ಕೈಗಾರಿಕೆ ಮಾಲೀಕರ ಸಂಘದ ಅಧ್ಯಕ್ಷ ಎಸ್‌.ವಿ. ಪಾಟೀಲ ಮಾತನಾಡಿ, ಜಗತ್ತಿನಲ್ಲಿ ವೈವಿದ್ಯಮಯ ಕೃಷಿ ಉತ್ಪನ್ನಗಳಿಗೆ ಭಾರತ ಹೆಸರು ಪಡೆದಿದೆ. ಸಂಶೋಧನೆ, ತಾಂತ್ರಿಕ ಅಭಿವೃದ್ಧಿ ಹಾಗೂ ವಿದೇಶಗಳಿಗೆ ಬೇಕಾಗಿರುವಂತಹ ಪ್ಯಾಕೇಜಿಂಗ್‌ ಸೌಲಭ್ಯಗಳೊಂದಿಗೆ ರಫ್ತು ಮಾಡಲು ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

Advertisement

ಡಿಜಿಎಫ್‌ಟಿ ಬೆಳಗಾವಿಯ ವಿದೇಶ ವ್ಯಾಪಾರ ಅಭಿವೃದ್ಧಿ ಅಧಿಕಾರಿ ಪಿ.ಎಸ್‌.ಬಿ. ಶಾಸ್ತ್ರಿ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಮಾರುಕಟ್ಟೆ ಕಲ್ಪಿಸಲು ಜಾರಿಗೆ ತಂದ ವಿದೇಶಿ ರಫ್ತು ನೀತಿ 2015-20 ತುಂಬಾ ಅನುಕೂಲಕರವಾಗಿದ್ದು, ವಿದೇಶಿ ವ್ಯಾಪಾರ ನೀತಿ, ರಫ್ತು ಮಾಡಲು ಬೇಕಾಗಿರುವ ಪರವಾನಿಗೆಗಳು, ಬೇರೆ ಬೇರೆ ದೇಶಗಳಿಗಿರುವ ಆಮದು ನೀತಿ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ವಾಣಿಜ್ಯ, ಉದ್ಯಮ ಮತ್ತು ಕೃಷಿ ಸಂಸ್ಥೆ ಅಧ್ಯಕ್ಷ ಡಿ.ಎಸ್‌. ಗುಡ್ಡೋಡಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ 100ಕ್ಕಿಂತ ಹೆಚ್ಚು ಕೈಗಾರಿಕೋದ್ಯಮಿಗಳು, ವರ್ತಕರು ಹಾಗೂ ಪ್ರಗತಿಪರ ರೈತರು ಭಾಗವಹಿಸಿದ್ದರು.

ಧಾರವಾಡ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಸಹಾಯಕ ನಿರ್ದೇಶಕ ಪದ್ಮಕಾಂತ ಸ್ವಾಗತಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಅರ್ಜುನ ಭಜಂತ್ರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next