Advertisement

ಆರೋಗ್ಯಕರ ಜೀವನಕ್ಕೆ ಹವ್ಯಾಸ ಅಗತ್ಯ

01:19 PM Jul 01, 2019 | Team Udayavani |

ವಿಜಯಪುರ: ಆರೋಗ್ಯಕರ ಜೀವನಕ್ಕಾಗಿ ಉತ್ತಮ ಹವ್ಯಾಸ ಅಳವಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಅದರಲ್ಲಿ ಚಿಕ್ಕಮಕ್ಕಳು ಹಾಗೂ ಹದಿಹರೆಯದವರು ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್‌.ಆರ್‌.ಬಾಗವಾನ ಕರೆ ನೀಡಿದರು.

Advertisement

ವಿಜಯಪುರ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಯಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಹಯೋಗದಲ್ಲಿ ಯಕ್ಕುಂಡಿ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಹದಿಹರೆಯದವರ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದದರು. ಹದಿಹರೆಯದವರ ಮಕ್ಕಳ ಶಾರೀರಿಕ, ಮಾನಸಿಕ ಸಾಮಾಜಿಕ ಹಾಗೂ ಭಾವನಾತ್ಮಕ ಸಮಸ್ಯೆಗಳ ಕುರಿತು ಅರಿವು ಮೂಡಿಸುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಹೇಳಿದರು.

ಮಕ್ಕಳಲ್ಲಿ ಹಾರ್ಮೋನ್‌ ವ್ಯತ್ಯಾಸದಿಂದಾಗಿ ಮನಸ್ಸಿಗೆ ಕಿರಿಕಿರಿ, ಆಯಾಸ, ಕೋಪ, ಒತ್ತಡ ಬಹಳ ಬೇಗ ಕಂಡು ಬರುತ್ತದೆ. ಈ ಕುರಿತಂತೆ ಇಂತಹ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಬೇಕು. ಹದಿಹರೆಯದವರ ಸರ್ವತೋಮುಖ ಬೆಳವಣಿಗೆ ಉದ್ದೇಶದಿಂದ ಎಲ್ಲ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹದಿಹರೆಯದವರಿಗಾಗಿಯೇ ಸ್ನೇಹಾ ಕ್ಲಿನಿಕ್‌ಗಳನ್ನು ತೆರೆಯಲಾಗಿದೆ. ಸ್ನೇಹಾ ಕ್ಲಿನಿಕ್‌ನಲ್ಲಿ ಒದಗಿಸಲಾಗುವ ಅಗತ್ಯ ಸೇವೆ ಹಾಗೂ ಉಪಯುಕ್ತ ಸಲಹೆ ಮತ್ತು ಸಮಾಲೋಚನೆಗಳನ್ನು ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಾಲೂಕು ಆರೋಗ್ಯ ಅಧಿಕಾರಿ ಡಾ| ಕೆ.ಡಿ. ಗುಂಡಬಾವಡಿ ಮಾತನಾಡಿ, ಹದಿಯರೆಯದವರು ಅಂದರೆ 10ರಿಂದ 19 ವಯಸ್ಸಿನ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಣುತ್ತದೆ. ಪೌಷ್ಟಿಕ ಆಹಾರ, ಸಂತಾನೋತ್ಪತ್ತಿ, ಲೈಂಗಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯ ಕುರಿತು ಪರಿಪೂರ್ಣ ಅರಿವಿನ ಕೊರತೆಯಿಂದ ಹಲವು ತೊಂದರೆಗಳಿಗೆ ಒಳಗಾಗುತ್ತಾರೆ. ಚಿಕ್ಕವಯಸ್ಸಿನ ತಾಯಂದಿರಿಗೆ ಜನಿಸಿದ ಮಕ್ಕಳಲ್ಲಿ ಶಿಶು ಮರಣ ಪ್ರಮಾಣ ಹೆಚ್ಚು. ಅನಪೇಕ್ಷಿತ ಗರ್ಭಧಾರಣೆಯಿಂದ ಸಾವು ನೋವು ಹೆಚ್ಚಾಗುತ್ತದೆ ಎಂದು ಹೇಳಿದರು.

ಆಪ್ತ ಸಮಾಲೋಚಕ ಗೋಪಾಲ ರಬಕವಿ ಮಾತನಾಡಿ, ಈಗಿನ ಹದಿಹರೆಯದವರಲ್ಲಿ ಪ್ರಯೋಗಶೀಲತೆ ಮತ್ತು ಮಾಹಿತಿ ಕೊರತೆಯಿಂದ ತಮ್ಮ ಆರೋಗ್ಯ ಮತ್ತು ಬೆಳವಣಿಗೆ ಸಂಬಂಧ ಹಲವು ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲಿ ದೈಹಿಕ, ಮಾನಸಿಕ ಭಾವನಾತ್ಮಕ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಹೇಳಿದರು.

Advertisement

ಶಾಲೆ ಮುಖ್ಯೋಪಾಧ್ಯಾಯ ಬಿ.ಬಿ. ರಾಠೊಡ ಅಧ್ಯಕ್ಷತೆ ವಹಿಸಿದ್ದರು. ಯಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಎ.ಆರ್‌. ಇನಾಮದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next