ವಿಜಯಪುರ: ಅಗ್ನಿ ಅವಘಡದಿಂದ ಇಂಡಿ ಪಟ್ಟಣದ ಹೊರ ವಲಯದ ತೋಟದಲ್ಲಿ ಬೆಂಕಿ ಹೊತ್ತಿಕೊಂಡು ನೂರಾರು ನಿಂಬೆ ಗಿಡಗಳು ಬೆಂಕಿಗೆ ಸುಟ್ಟು ಕರಕಲಾಗಿದ್ದು, ಲಿಂಬೆ ಬೆಳೆಗಾರ ರೈತ ಲಕ್ಷಾಂತರ ರೂ. ಆರ್ಥಿಕ ನಷ್ಟಕ್ಕೆ ಸಿಲುಕಿದ್ದಾರೆ.
ಜಿಲ್ಲೆಯ ಇಂಡಿ ಪಟ್ಟಣದ ಹೊರ ವಲಯದ ಹಂಜಗಿ ರಸ್ತೆಯಲ್ಲಿನ ಲಿಂಬೆ ತೋಟದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಚಂದ್ರಶೇಖರ್ ಸಾಲೋಟಗಿ ಎಂಬುವವರಿಗೆ ಸೇರಿದ ತೋಟದಲ್ಲಿ ಸುಮಾರು 20 ವರ್ಷದ ಸುಮಾರು 300ಕ್ಕೂ ಹೆಚ್ಚು ಲಿಂಬೆ ಗಿಡಗಳು ಬೆಂಕಿಯಿಂದ ಸುಟ್ಟು ಕರಕಲಾಗಿವೆ.
ಭೀಕರ ಬರ ಹಾಗೂ ಬೇಸಿಗೆ ಹಿನ್ನೆಲೆಯಲ್ಲಿ ಲಿಂಬೆ ಗಿಡಗಳಿಗೆ ಟ್ಯಾಂಕರ್ ನೀರು ಹಾಕಿ ಬೆಳೆ ರಕ್ಷಣೆಗೆ ರೈತರು ಹೈರಾಣಾಗಿದ್ದರು.
ಭವಿಷ್ಯದ ಬದುಕಿಗೆ ಆಧಾರವಾಗಿದ್ದ ಲಿಂಬೆ ಗಿಡಗಳು ಬೆಂಕಿಯಿಂದ ಸುಟ್ಟಿರುವ ಕಾರಣ ರೈತ ಚಂದ್ರಶೇಖರ ಕಂಗಾಲಾಗಿದ್ದಾರೆ. ಬೆಳೆ ಹಾನಿಯಿಂದ ಕಂಗಾಲಾಗಿರುವ ರೈತನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ತೋಟದಲ್ಲಿನ ಲಿಂಬೆ ಗಿಡಗಳಿಗೆ ಬೆಂಕಿ ಹೊತ್ತಿರುವುದು ಹೇಗೆ ಎಂಬುದು ನಿಖರವಾಗಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ಇದೆ.
ಇಂಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ. ಸ್ಥಳಕ್ಕೆ ಪೊಲೀಸರು, ತೋಟಗಾರಿಕೆ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಧಾವಿಸಿದ್ದಾರೆ.