ವಿಜಯಪುರ: ಮಳೆ ಕೊರತೆ, ಪ್ರಕೃತಿ ವಿಕೋಪ, ರೋಗ-ಕೀಟಬಾಧೆ ಅಂತೆಲ್ಲ ಏನೆಲ್ಲ ಕಷ್ಟಗಳ ಮಧ್ಯೆ ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದರೆ, ರಕ್ಷಣೆ ಇಲ್ಲದೇ ಕಳ್ಳತನ ಭೀತಿ ಎದುರಿಸಬೇಕಾದ ಸ್ಥಿತಿ ಇದೆ. ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲಿ ಕಳ್ಳರ ಹಾವಳಿ ಹಾಗೂ ಬಿಡಾಡಿ ದನಗಳ ಕಾಟದಿಂದ ರೈತರು ಕಂಗಾಲಾಗಿದ್ದಾರೆ. ಅಚ್ಚರಿ ಸಂಗತಿ ಎಂದರೆ ಮಾರುಕಟ್ಟೆಯ ಕಾವಲಿಗೆ ಇಲಾಖೆ ಹಾಗೂ ಹೊರಗುತ್ತಿಗೆ ನೌವಕರರಿದ್ದರೂ ರೈತರ ಬೆಳೆಗಳಿಗೆ ಭದ್ರತೆ ಇಲ್ಲವಾಗಿದೆ. ಹೀಗಾಗಿ ವಿಜಯಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರ ಬೆಳೆಗೆ ರೈತರೇ ಜವಾಬ್ದಾರಿ ಎಂಬ ಆಲಿಖೀತ ನಿಯಮದ ದುಸ್ಥಿತಿ ನಿರ್ಮಾಣವಾಗಿದೆ.
Advertisement
ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರದೇಶದ ವ್ಯಾಪ್ತಿಯಲ್ಲಿ ವಿಜಯಪುರ ಮುಖ್ಯ ಮಾರುಕಟ್ಟೆ, ತರಕಾರಿ-ಹಣ್ಣು ಮಾರುಕಟ್ಟೆ, ರೈತ ಭವನ, ಆನ್‌ಲೈನ್ ಕೇಂದ್ರ, ತೊರವಿ ಉಪ ಮಾರುಕಟ್ಟೆ ಕಾವಲಿಗೆಂದೇ ಹೊರಗುತ್ತಿಗೆ ನೌಕರರಿದ್ದಾರೆ. ಇಲ್ಲಿನ ಕಾವಲಿಗೆ ನೌಕರರನ್ನು ಒದಗಿಸುವ ಖಾಸಗಿ ಸಂಸ್ಥೆಗೆ ಕಂಪ್ಯೂಟರ್ ಆಪರೇಟರ್, ಡ್ರೈವರ್ ಸೇರಿದಂತೆ ಸುಮಾರು 21 ಸಿಬ್ಬಂದಿ ಸಂಬಳಕ್ಕಾಗಿ 11 ತಿಂಗಳಿಗೆ 4.80 ಲಕ್ಷ ರೂ. ಹಣವನ್ನೂ ಪಾವತಿ ಮಾಡಲಾಗುತ್ತದೆ. ಮತ್ತೂಂದೆಡೆ ಎಪಿಎಂಸಿ ರಾತ್ರಿ ಕಾವಲಿಗೆ ತನ್ನ ಇಬ್ಬರು ಕಾವಲುಗಾರರನ್ನು ಹೊಂದಿದೆ. ಇಷ್ಟಿದ್ದರೂ ಲಕ್ಷಾಂತರ ರೂ. ಹಣ ಪಾವತಿ ಮಾಡಿ ಹತ್ತಾರು ಜನರನ್ನು ಕಾವಲಿಗೆ ಇರಿಸಿದರೂ ರೈತರ ಬೆಳೆಗಳಿಗೆ ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲಿ ಭದ್ರತೆ ಇಲ್ಲವಾಗಿದೆ.
Related Articles
Advertisement
ರೈತರು, ಎಪಿಎಂಸಿ ಸಿಬ್ಬಂದಿ, ಕಮೀಷನ್ ಏಜೆಂಟರು, ಖರೀದಿದಾರರು ಸೇರಿದಂತೆ ಸಂಬಂಧಿಸಿದ ಜನರ ಹೊರತಾಗಿ ಅಕ್ರಮ ವ್ಯಕ್ತಿಗಳ ಪ್ರವೇಶಕ್ಕೆ ಇಲ್ಲಿ ಯಾವ ನಿರ್ಬಂಧವೂ ಇಲ್ಲ. ಕನಿಷ್ಠ ಪ್ರಶ್ನಿಸುವ ಗೋಜಿಗೂ ಯಾರೂ ಹೋಗುವುದಿಲ್ಲ.
ಹೆಸರು ಹೆಳಲಿಚ್ಚಿಸದ ರೈತರೊಬ್ಬರ ಪ್ರಕಾರ ನಾವು ನಿರಂತರ ಈ ಮಾರುಕಟ್ಟೆಗೆ ಬರಬೇಕಿದ್ದು, ಬಹಿರಂಗವಾಗಿ ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ. ರೈತರ ಬೆಳೆಗಳಿಗೆ ವಿಜಯಪುರ ಮಾರುಕಟ್ಟೆ ಪ್ರದೇಶದಲ್ಲಿ ಯಾವ ಭದ್ರತೆಯೂ ಇಲ್ಲ, ಈ ವಿಷಯದಲ್ಲಿ ತೃಪ್ತಿ ನಮಗೆ ಇಲ್ಲ, ಜೊತೆಗೆ ಪ್ರಶ್ನಿಸುವ ಶಕ್ತಿ ನಮಗಿಲ್ಲ. ಹೀಗಾಗಿ ಎಲ್ಲವನ್ನೂ ಸಹಿಸಿಕೊಂಡೇ ಹೋಗಬೇಕು. ಒಂದೊಮ್ಮೆ ಅವ್ಯವಸ್ಥೆ ಕುರಿತು ಆಕ್ಷೇಪಿಸಿದರೆ ಇಲ್ಲಿ ನಮ್ಮ ಬೆಳೆಗಳಿಗೆ ಬೆಲೆ ಇಲ್ಲದಂತೆ ಮಾಡುತ್ತಾರೆ. ರೈತರ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತದೆ. ಇಲ್ಲವೇ ನಮ್ಮ ಮೇಲೆ ಇಡಿ ವ್ಯವಸ್ಥೆ ನಿಗಾ ಇರಿಸಿ ಒಂದಿಲ್ಲೊಂದು ರೀತಿ ಸಮಸ್ಯೆ ಸೃಷ್ಟಿಸುತ್ತದೆ ಎಂದು ಗೋಳಾಡುತ್ತಾರೆ ರೈತರು. ರೈತರ ಉತ್ಪನ್ನಗಳ ಕಾವಲಿಗೆಂದೇ ಇಲಾಖೆ-ಹೊರ ಗುತ್ತಿಗೆ ಅಧಾರದಲ್ಲಿ 15ಕ್ಕೂ ಹೆಚ್ಚು ಕಾವಲುಗಾರರ ನೇಮಿಸಿ, ಅವರಿಗಾಗಿ ಲಕ್ಷಾಂತರ ರೂ. ವೆಚ್ಚ ಮಾಡಿದರೂ ರೈತರ ಬೆಳೆಗಳಿಗೆ ಭದ್ರತೆ ಇಲ್ಲವಾಗಿದೆ. ಇಷ್ಟಕ್ಕೂ ಇಲ್ಲಿ ನಡೆಯುತ್ತಿರುವ ಅಕ್ರಮಗಳು, ರೈತರು ಅನುಭವಿಸುತ್ತಿರುವ ಸಂಕಷ್ಟ, ಜಾನುವಾರುಗಳ ದಾಳಿಯಿಂದ ಅನ್ನದಾತನಿಗೆ ಆಗುತ್ತಿರುವ ನಷ್ಟದ ಕುರಿತು ಎಪಿಎಂಸಿ ಮಾರುಕಟ್ಟೆ ಆಡಳಿತ ನಡೆಸುವವರಿಗೆ ಇಲ್ಲಿನ ದುರವ್ಯವಸ್ಥೆ ಗಮನಕ್ಕಿದೆ. ಇಷ್ಟಿದ್ದರೂ ಕನಿಷ್ಠ ಬಿಡಾಡಿ ದನಗಳ ಪ್ರವೇಶ ನಿರ್ಬಂಧಿಸಲು ಕೌ ಗಾರ್ಡ್ ನೇಮಿಸದಿರುವುದು ಅನುಮಾನ ಮೂಡಿಸುತ್ತಿದೆ.