ವಿಜಯಪುರ: ಕಬ್ಬಿನ ಗದ್ದೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ವಿಜಯಪುರ ಪೊಲೀಸರು, ಆರೋಪಿಯಿಂದ 4.40 ಲಕ್ಷ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ವಿಜಯಪುರದ ತಾಲೂಕಿನ ಡೋಮನಾಳ ಮೂಲದ ಧೋಂಡಿಬಾ ಶೇಟಿಬಾ ಜರಕ (34) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿ ವಿಜಯಪುರ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ. ಈ ಕುರಿತು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು, ಗಾಂಜಾ ಬೆಳೆದಿರುವುದುನ್ನು ಪತ್ತೆ ಮಾಡಿದ್ದಾರೆ.
ಬಳಿಕ ಬಂಧಿತನಿಂದ 1,25,120 ರೂ. ಮೌಲ್ಯದ 31.20 ಕೆಜಿ ಹಸಿ ಗಾಂಜಾ ಹಾಗೂ 3,15,560 ರೂ. ಮೌಲ್ಯದ 45.08 ಕೆಜಿ ಒಣಗಿದ ಗಾಂಜಾ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್ಪಿ ಹಾಗೂ ಎಎಸ್ಪಿ ಅವರ ಮಾರ್ಗದರ್ಶನದಲ್ಲಿ ವಿಜಯಪುರ ಗ್ರಾಮೀಣ ಸಿಪಿಐ ಆರ್.ಎಸ್.ಜಾನರ ನೇತೃತ್ವದಲ್ಲಿ ಪಿಎಸ್ಐ ವಿನೋದ ಪೂಜಾರಿ ಹಾಗೂ ಪೊಲೀಸ್ ಸಿಬ್ಬಂದಿ ಖಚಿತ ಮಾಹಿತಿ ಆಧರಿಸಿ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಎಸ್ಪಿ ರಿಷಿಕೇಷ ಭಗವಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.