ವಿಜಯಪುರ: ಈ ತಿಂಗಳ 19ರಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಪಿಎಚ್ ಡಿ ಹಾಗೂ ಚಿನ್ನದ ಪದಕ ವಿಜೇತರಿಗೆ ಮಾತ್ರ ಘಟಿಕೋತ್ಸವದಲ್ಲಿ ನೇರವಾಗಿ ಪಾಲ್ಗೊಳ್ಳಲು ಅವಕಾಶವಿದೆ. ಉಳಿದ ಪದವೀಧರರಿಗೆ ಆನ್ ಲೈನ್ ಮೂಲಕ ಪದವಿ ಪ್ರದಾನ ಮಾಡುವುದಾಗಿ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಡಾ.ಓಂಕಾರ ಕಾಕಡೆ ತಿಳಿಸಿದ್ದಾರೆ.
ಬುಧವಾರ ವಿಶ್ವವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ 55 ಜನರಿಗೆ ಪಿಎಚ್ ಡಿ, 67 ಜನರಿಗೆ 70 ಚಿನ್ನದ ಪದಕ ಸಹಿತ ವಿವಿಧ ಪದವಿ ಪ್ರಧಾನ ಮಾಡಲಾಗುತ್ತದೆ. ಇದಲ್ಲದೇ 1087 ವಿದ್ಯಾರ್ಥಿನಿಯರಿಗೆ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ, 8230 ವಿದ್ಯಾರ್ಥಿನಿಯರಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಗುತ್ತದೆ ಎಂದರು.
ಈ ಬಾರಿಯ ಘಟಿಕೋತ್ಸವದಲ್ಲಿ ನವದೆಹಲಿಯ ಅನುದಾನ ಆಯೋಗದ ಸದಸ್ಯ ಎಂ.ಕೆ.ಶ್ರೀಧರ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.
ಸೆ.19 ರಂದು ವಿಶ್ವವಿದ್ಯಾಲಯದ ಜ್ಞಾನಶಕ್ತಿ ಆವರಣದಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಘಟಿಕೋತ್ಸವ ನಡೆಯಲಿದೆ. ಘಟಿಕೋತ್ಸವದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಎಲ್ಲ ಕಛೇರಿಗಳು, ಘಟಿಕೋತ್ಸವದ ವೇದಿಕೆಯನ್ನು ಸ್ಯಾನಿಟೈಸ್ ಮೂಲಕ ಸೋಂಕು ನಿರೋಧಕ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ವಿವರಿಸಿದರು.
ಕುಲಸಚಿವೆ ಡಾ.ಆರ್.ಸುನಂದಮ್ಮ, ಮೌಲ್ಯಮಾಪನ ಕುಲಸಚಿವ ಡಾ.ಪಿ.ಜಿ.ತಡಸದ, ಆರ್ಥಿಕ ಅಧಿಕಾರಿ ವಿಜಯಾ ಕೋರಿಶಟ್ಟಿ, ಘಟಿಕೋತ್ಸವದ ಸಂಯೋಜನೆ ಅಧಿಕಾರಿ ಪ್ರೊ.ಡಿ.ಎಂ.ಜ್ಯೊತಿ, ಇತರರು ಉಪಸ್ಥಿತರಿದ್ದರು.