ವಿಜಯಪುರ: ಕೋವಿಡ್ ಸೋಂಕು ದೃಢಪಟ್ಟು ಈಗ ಸಂಪೂರ್ಣವಾಗಿ ಗುಣಮುಖರಾಗಿರುವ ವಕೀಲ ಆಸೀಫುಲ್ಲಾ ಖಾದ್ರಿ ತಮ್ಮ ರಕ್ತದ ಪ್ಲಾಸ್ಮಾ ಅಂಶವನ್ನು ದಾನ ಮಾಡುವ ಮೂಲಕ ಪ್ಲಾಸ್ಮಾ ದಾನದ ಮಹತ್ವ ಕುರಿತು ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಕೊರೊನಾ ನಾಗಾಲೋಟ ತಡೆಯಲು ವೈದ್ಯರು ರೆಮ್‌ಡೆಸಿವಿಯರ ಮೊದಲಾದ ಔಷ ಧಗಳ ಸತತ ಪ್ರಯತ್ನದಲ್ಲಿ ತೊಡಗಿದ್ದಾರೆ. ಈ ರೀತಿಯ ಪ್ರಯತ್ನದಲ್ಲಿ ಪ್ಲಾಸ್ಮಾ ಥೆರಪಿ ಸಹ ಒಂದಾಗಿದ್ದು ವಿಜಯಪುರದಲ್ಲಿ ಅನೇಕ ಆಸ್ಪತ್ರೆಯಲ್ಲಿ ಈ ಪದ್ಧತಿ ಮೂಲಕ ರೋಗಿಗಳನ್ನು ಗುಣಪಡಿಸಲಾಗುತ್ತಿದೆ.
ಕೋವಿಡ್ ಸೋಂಕು ದೃಢಪಟ್ಟ ವ್ಯಕ್ತಿ ಸಂಪೂರ್ಣವಾಗಿ ಗುಣಮುಖರಾಗಿರುವುದರಿಂದ ಆತನ ರಕ್ತದಲ್ಲಿ ಕೋವಿಡ್‌ಗೆ ಹೋರಾಡುವ ರಕ್ತಕಣ ವೃದ್ಧಿಸುತ್ತವೆ. ಈ ಅಂಶಗಳನ್ನೇ ಕೋವಿಡ್ ರೋಗಿಗೆ ಹಾಕಿದಲ್ಲಿ ಆ ರೋಗಿ ಸಂಪೂರ್ಣವಾಗಿ ಗುಣಮುಖವಾಗುವ ಸಾಧ್ಯತೆಗಳು ಅಧಿಕವಾಗಿವೆ ಎಂದು ವೈದ್ಯರು ಹೇಳುತ್ತಾರೆ.
ಈ ಹಿನ್ನೆಲೆಯಲ್ಲಿ ವಿಜಯಪುರದ ಶ್ರೀ ಸಿದ್ದೇಶ್ವರ ಲ್ಯಾಬೋರೇಟರಿಯಲ್ಲಿ ಸ್ವತಃ ಪ್ಲಾಸ್ಮಾ ದಾನ ಮಾಡಿರುವ ನ್ಯಾಯವಾದಿ ಖಾದ್ರಿ, ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಪ್ರತಿಯೊಬ್ಬರೂ ಮಾನವೀಯತೆ ಮೆರೆಯಬೇಕಿದೆ. ಪ್ಲಾಸ್ಮಾ ದಾನ ಮಾಡುವುದರಿಂದ ಯಾವುದೇ ರೀತಿ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲ.
ಹೀಗಾಗಿ ಕೋವಿಡ್‌ನಿಂದ ಗುಣಮುಖರಾಗಿರುವ ಎಲ್ಲರೂ ಪ್ಲಾಸ್ಮಾ ದಾನ ಮಾಡಿದರೆ ಇನ್ನೊಂದು ಜೀವ ಉಳಿಸಿದ ಪುಣ್ಯ ಬರುತ್ತದೆ. ಸರ್ಕಾರ ಸಹ ಪ್ಲಾಸ್ಮಾ ಥೆರಪಿಯ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡು ಜನರಲ್ಲಿ ಜಾಗೃತಿ ಮೂಡಿಸಿದರೆ ಜನರ ಜೀವವನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಖಾದ್ರಿ ಹೇಳಿದ್ದಾರೆ.